ADVERTISEMENT

ಬೆಳಗಾವಿ | ಜ್ವರ, ಕೆಮ್ಮು ರೋಗಿಗಳ ಪರದಾಟ !

ಚಂಡಮಾರುತ, ಮಳೆಗಾಲ ಹಿನ್ನೆಲೆಯಲ್ಲಿ ವಾತಾವರಣದಲ್ಲಿ ಬದಲಾವಣೆ;

ಶ್ರೀಕಾಂತ ಕಲ್ಲಮ್ಮನವರ
Published 4 ಜೂನ್ 2020, 3:32 IST
Last Updated 4 ಜೂನ್ 2020, 3:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ಚಂಡಮಾರುತ ಅಪ್ಪಳಿಸಿರುವ ಪರಿಣಾಮ ಹಾಗೂ ಮುಂಗಾರು ಆರಂಭವಾಗುವ ಹೊತ್ತಿನಲ್ಲಿ ಜಿಲ್ಲೆಯ ವಾತಾವರಣದಲ್ಲಿ ಉಂಟಾದ ದಿಢೀರ್‌ ಬದಲಾವಣೆಯಿಂದಾಗಿ ಹಲವರಿಗೆ ಜ್ವರ, ಶೀತ, ಕೆಮ್ಮು ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆಯಲು ಪರದಾಡುತ್ತಿದ್ದಾರೆ. ಕೊರೊನಾ ಭಯದಿಂದ ಇನ್ನೂ ಹಲವು ಕಡೆ ಖಾಸಗಿ ಕ್ಲಿನಿಕ್‌ಗಳು ಪ್ರಾರಂಭಗೊಳ್ಳದಿರುವುದು ಹಾಗೂ ವೈದ್ಯರ ಚೀಟಿ ಇಲ್ಲದೇ ಔಷಧಿ ನೀಡಲು ಅಂಗಡಿಯವರು ಹಿಂದೇಟು ಹಾಕುತ್ತಿರುವುದು ಇದಕ್ಕೆ ಕಾರಣವಾಗಿದೆ.

‘ನಿಸರ್ಗ’ ಚಂಡಮಾರುತದ ಪರಿಣಾಮವಾಗಿ ಜಿಲ್ಲೆಯ ಹಲವು ಭಾಗಗಳಲ್ಲಿ ಕಳೆದ 2–3 ದಿನಗಳಿಂದ ಮೋಡ ಕವಿದ ವಾತಾವರಣ, ಜಿಟಿಜಿಟಿ ಮಳೆ ಸುರಿಯುತ್ತಿರುವುದು ಹಾಗೂ ಚಳಿ ಗಾಳಿ ಬೀಸುತ್ತಿರುವುದರಿಂದ ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ತಂಪಾದ ಈ ವಾತಾವರಣವು ವೈರಾಣುಗಳಿಗೆ ಸೋಂಕು ಹರಡಲು ಹೆಚ್ಚು ಸೂಕ್ತವಾಗಿರುವುದರಿಂದ ಹೆಚ್ಚೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗುವ ಆತಂಕವಿದೆ. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಇವರಿಗೆ ಚಿಕಿತ್ಸೆ ದುರ್ಲಭವಾಗಿದೆ.

ಜಿಲ್ಲೆಯಲ್ಲಿ ಅಂದಾಜು 1,090 ಖಾಸಗಿ ಕ್ಲಿನಿಕ್‌ಗಳಿವೆ. ಇವುಗಳಲ್ಲಿ ಬಹುತೇಕ ಕ್ಲಿನಿಕ್‌ಗಳು ಕೊರೊನಾ ಹಿನ್ನೆಲೆಯಲ್ಲಿ ಬಂದ್‌ ಆಗಿದ್ದವು. ಇತ್ತೀಚೆಗೆ ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದ ಮೇರೆಗೆ ಅರ್ಧಕ್ಕಿಂತ ಹೆಚ್ಚು ಕಾರ್ಯಾರಂಭ ಮಾಡಿವೆ. ಸುಮಾರು 250ಕ್ಕೂ ಹೆಚ್ಚು ಕ್ಲಿನಿಕ್‌ಗಳು ಇನ್ನಷ್ಟೇ ಆರಂಭಿಸಬೇಕಾಗಿದೆ. ಹೀಗಾಗಿ ಹಲವು ಕಡೆ ವೈದ್ಯರ ಕೊರತೆಯುಂಟಾಗಿ, ರೋಗಿಗಳು ಪರದಾಡುತ್ತಿದ್ದಾರೆ.

ADVERTISEMENT

ಔಷಧಿಗಳ ಕೊರತೆ: ಇನ್ನೊಂದೆಡೆ, ಜ್ವರ, ಶೀತ ಕಾಣಿಸಿಕೊಂಡಾಗ ಸಾಮಾನ್ಯವಾಗಿ ಬಳಸುವ ಪ್ಯಾರಾಸಿಟಮಲ್‌ ಮಾತ್ರೆಗಳಿಗೆ ಕೊರತೆ ಕಾಣಿಸಿಕೊಂಡಿದೆ. ನಗರದ ಬಹಳಷ್ಟು ಔಷಧಿ ಅಂಗಡಿಗಳಲ್ಲಿ ಈ ಮಾತ್ರೆಯ ದಾಸ್ತಾನು ಮುಗಿದಿದ್ದು, ಹೊಸ ಸ್ಟಾಕ್‌ ಇನ್ನೂ ಬಂದಿಲ್ಲ. ಇನ್ನು ಕೆಲವು ಕಡೆ, ವೈದ್ಯರ ಚೀಟಿ ತರದಿದ್ದರೆ ನೀಡುವುದಿಲ್ಲವೆಂದು ವಾಪಸ್‌ ಕಳುಹಿಸುತ್ತಿದ್ದಾರೆ. ವೈದ್ಯರೂ ಸಿಗುತ್ತಿಲ್ಲ, ಇನ್ನೊಂದೆಡೆ ಔಷಧಿಯೂ ಸಿಗುತ್ತಿಲ್ಲವೆಂದು ರೋಗಿಗಳು ಅಳಲು ತೋಡಿಕೊಂಡಿದ್ದಾರೆ.

ವಿಚಾರಣೆಗೆ ಬೇಸರ: ‘ಮಳೆ, ಗಾಳಿ, ಚಳಿಗೆ ಜ್ವರ, ಕೆಮ್ಮು ಬರುವುದು ಸಾಮಾನ್ಯ. ಅಂತಹದ್ದಕ್ಕೆಲ್ಲ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ವೈದ್ಯರು ಬಳಿ ಹೋಗುವುದು, ಪರೀಕ್ಷೆ ಮಾಡಿಕೊಳ್ಳುವುದು, ಆ ನಂತರ ಔಷಧಿ ತೆಗೆದುಕೊಳ್ಳುವುದು ನಮಗೆ ಹೊರೆಯಾಗುತ್ತದೆ. ಅದಕ್ಕೆ ನೇರವಾಗಿ ಮಾತ್ರೆ ಖರೀದಿಸುತ್ತಿದ್ದೇವು. ಈಗ ಕೊರೊನಾದಿಂದಾಗಿ, ನೂರೆಂಟು ಪ್ರಶ್ನೆ ಕೇಳುತ್ತಾರೆ. ವಿಳಾಸ, ಮೊಬೈಲ್‌ ನಂಬರ್‌ ಕೇಳುತ್ತಾರೆ. ನಮ್ಮನ್ನೂ ಕೊರೊನಾ ಸೋಂಕಿತರಂತೆ ನೋಡುತ್ತಿದ್ದಾರೆ. ಇದು ನಮ್ಮಲ್ಲಿ ಭಯ ಮೂಡಿಸಿದೆ. ಅದಕ್ಕಾಗಿ ಮನೆ ಮದ್ದು ಮಾಡಿಕೊಳ್ಳುತ್ತಿದ್ದೇವೆ’ ಎಂದು ಜ್ವರ ಪೀಡಿತ ವ್ಯಕ್ತಿಯೊಬ್ಬರು ತಿಳಿಸಿದರು.

‘ಲಾಕ್‌ಡೌನ್‌ ಅವಧಿಯಲ್ಲಿ ವಿಧಿಸಿದ್ದ ಹಲವು ನಿರ್ಬಂಧಗಳನ್ನು ಸರ್ಕಾರ ತೆಗೆದುಹಾಕಿದೆ. ಜನರ ಓಡಾಟ, ವಾಹನಗಳ ಸಂಚಾರ, ಕಚೇರಿ– ಕಾರ್ಖಾನೆಗಳ ಆರಂಭ ಸೇರಿದಂತೆ ಹಲವು ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟಿದೆ. ಇದೇ ರೀತಿ ಮಾತ್ರೆ ವಿತರಣೆಗಳ ಮೇಲೆ ವಿಧಿಸಿರುವ ನಿರ್ಬಂಧವನ್ನೂ ತೆರವು ಮಾಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.