ADVERTISEMENT

ಮುದೇನೂರು: ನಿಯಂತ್ರಣಕ್ಕೆ ಬಾರದ ವಾಂತಿ–ಭೇದಿ, ಮತ್ತೆ 15 ಮಂದಿ ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 10:47 IST
Last Updated 28 ಅಕ್ಟೋಬರ್ 2022, 10:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಮದುರ್ಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಉಲ್ಬಣಿಸಿದ ವಾಂತಿ–ಭೇದಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಶುಕ್ರವಾರ ಮತ್ತೆ 15 ಮಂದಿ ನಿತ್ರಾಣಗೊಂಡಿದ್ದು, ಇಲ್ಲಿನ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗುರುವಾರದವರೆಗೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 94 ಮಂದಿಗೂ ಚಿಕಿತ್ಸೆ ಮುಂದುವರಿಸಲಾಗಿದೆ. ನಿರಂತರ ವಾಂತಿ– ಭೇದಿಯ ಕಾರಣ ಹಲವರಲ್ಲಿ ನಿರ್ಜಲೀಕರಣ ಸಮಸ್ಯೆ ತಲೆದೋರಿದೆ. ಚಿಕ್ಕಮಕ್ಕಳು ಹಾಗೂ ಹಿರಿಯರು ಭೇದಿಯಾಗುತ್ತದೆ ಎಂದು ಹೆದರಿ ಎರಡು ದಿನಗಳಿಂದ ಆಹಾರ ತೆಗೆದುಕೊಂಡಿಲ್ಲ. ಅವರಿಗೆ ಸೆಲಾಯಿನ್‌ ಹಚ್ಚಿ, ಒಆರ್‌ಎಸ್‌ ನೀಡುವುದನ್ನು ಮುಂದುವರಿಸಲಾಗಿದೆ.

‘ಕಳೆದ ನಾಲ್ಕು ದಿನಗಳಿಂದ ನಾವು ಶುದ್ಧೀಕರಿಸಿದ ಆರ್.ಒ ಪ್ಲ್ಯಾಂಟಿನ ನೀರನ್ನೇ ಕುಡಿಯುತ್ತಿದ್ದೇವೆ. ಆದರೂ ಶುಕ್ರವಾರ ನಮ್ಮ ಕುಟುಂಬದ ನಾಲ್ವರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಕುಟುಂಬ ಸಮೇತರಾಗಿ ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದೇವೆ’ ಎಂದು ಗೋವಿಂದ ಜಾಯಿ ಅವರು ‘ಪ್ರಜಾವಾಣಿ’ ಮುಂದೆ ಅಳಲು ಹೇಳಿಕೊಂಡರು.

ADVERTISEMENT

‘ಶುಕ್ರವಾರ ಮತ್ತೆ 15 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದೆ. ಇನ್ನು ಕೆಲವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಯಾರಿಗೂ ಪ್ರಾಣಾಪಾಯ ಇಲ್ಲ. ಗ್ರಾಮದಲ್ಲಿ ಪೈಪ್‌ಲೈನ್‌ ನೀರನ್ನು ಬಂದ್ ಮಾಡಲಾಗಿದೆ. ಶುದ್ಧೀಕರಿಸಿದ ನೀರನ್ನೇ ಸರಬರಾಜು ಮಾಡಲಾಗುತ್ತಿದೆ. ಹೊಸ ಪೈಪ್‌ಲೈನ್‌ ಅಳವಡಿಸಿದ ನಂತರ ನೀರು ಸರಬರಾಜು ಮಾಡಲಾಗುವುದು’ ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಪ್ರತಿಕ್ರಿಯೆ ನೀಡಿದರು.

‘ಆರ್‌.ಒ ಘಟಕದಲ್ಲಿ ಶುದ್ಧೀಕರಿಸಿದ ನೀರು ಸೇವನೆಯಿಂದ ಸಮಸ್ಯೆ ಆಗುವುದಿಲ್ಲ. ಜನ ಭಯಪಡಬೇಕಾಗಿಲ್ಲ. ಈ ಮುಂಚೆಯೇ ಕಲುಷಿತ ನೀರಿ ಸೇವಿಸಿದ ಕೆಲವರಿಗೆ ತಡವಾಗಿ ಕಾಯಿಲೆಗಳು ಕಾಣಿಸಿಕೊಂಡಿವೆ’ ಎಂದೂ ಅವರು ತಿಳಿಸಿದರು.

ಒಂಬತ್ತು ವೈದ್ಯರು, ನಾಲ್ವರು ಆರೋಗ್ಯ ನಿರೀಕ್ಷಕರು, ಮೂವರು ನರ್ಸ್‌ಗಳು, 10 ಮಂದಿ ಆಶಾ ಕಾರ್ಯಕರ್ತೆಯರು, ಎರಡು ಆಂಬುಲೆನ್ಸ್‌ ಸೇರಿ 30 ಸಿಬ್ಬಂದಿ ಜನರ ತಪಾಸಣೆ ಮುಂದುವರಿಸಿದ್ದಾರೆ. ಮನೆಮನೆಗೆ ತೆರಳಿ ರಕ್ತದೊತ್ತಡ, ಮಧುಮೇಹ ಕೂಡ ತಪಾಸಣೆ ನಡೆಸಲಾಗುತ್ತಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್‌.ಎಸ್‌.ಬಂತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.