ADVERTISEMENT

ಬೆಳಗಾವಿ: ಕಾಂಗ್ರೆಸ್ಸಿಗರಲ್ಲಿ ‘ಶತಮಾನ’ದ ನವೋಲ್ಲಾಸ

1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ನೆನಪಲ್ಲಿ ‘ಗಾಂಧಿ ಭಾರತ’ಕ್ಕೆ ಚಾಲನೆ

ಸಂತೋಷ ಈ.ಚಿನಗುಡಿ
Published 27 ಡಿಸೆಂಬರ್ 2024, 0:22 IST
Last Updated 27 ಡಿಸೆಂಬರ್ 2024, 0:22 IST
ಬೆಳಗಾವಿಯ ವೀರಸೌಧದಲ್ಲಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಗುರುವಾರ ವೀಕ್ಷಿಸಿದರು
ಬೆಳಗಾವಿಯ ವೀರಸೌಧದಲ್ಲಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಗುರುವಾರ ವೀಕ್ಷಿಸಿದರು   

ಬೆಳಗಾವಿ: ಬರೋಬ್ಬರಿ ನೂರು ವರ್ಷಗಳ ಬಳಿಕ ಆ ಕ್ಷಣ ಮರಳಿತು. ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಕ್ಷಣಗಳನ್ನು ನಾಯಕರು ಹೃದಯತುಂಬಿ ಸ್ಮರಿಸಿದರು. ಒಂದೆಡೆ ರಾಜ್ಯ ಸರ್ಕಾರದ ಕಾರ್ಯಕ್ರಮ, ಇನ್ನೊಂದೆಡೆ ಕಾಂಗ್ರೆಸ್‌ ಪಕ್ಷದ ಚಟುವಟಿಕೆಗಳು ಇಡೀ ನಗರವನ್ನು ಗಾಂಧಿಮಯ ಮಾಡಿದವು.

ಗಾಂಧೀಜಿ ಆದಿಯಾಗಿ ಸ್ವಾತಂತ್ರ್ಯ ಸೇನಾನಿಗಳೆಲ್ಲ ಮೆಟ್ಟಿದ ನೆಲದಲ್ಲೇ ಹಾಲಿ ಕಾಂಗ್ರೆಸ್‌ ನಾಯಕರು ಅಡಿಯಿಟ್ಟರು. 1924ರ ಅಧಿವೇಶನ ನಡೆದ ಸ್ಥಳದಲ್ಲೇ ಕಾರ್ಯಕಾರಿಣಿ ಸಮಿತಿಯ ಸಭೆ ನಡೆಸಿದರು. ಶತಮಾನದ ಹೆಜ್ಜೆ ಗುರುತುಗಳನ್ನೇ ಯಥಾವತ್ತಾಗಿ ಅನುಸಿರಿಸಿದರು. ಎಐಸಿಸಿ ನಾಯಕರಲ್ಲಿ ‘ನವ ಚೈತನ್ಯ’ದ ಕಾರಂಜಿ ಪುಟಿಯಿತು.

ಶತಮಾನದ ಹಿಂದೆ ಬಾಪೂಜಿ ನಿಂತಿದ್ದು ಇಲ್ಲೇ ಅಲ್ಲವೇ! ಕುಳಿತಿದ್ದು, ಮಾತನಾಡಿದ್ದು ಇದೇ ಸ್ಥಳವಲ್ಲವೇ! ಆ ಭಾಗ್ಯ ಮರಳಿ ನಮ್ಮ ಕಾಲಕ್ಕೇ ಬಂದಿತೇ! ಎಂಬಿತ್ಯಾದಿ ಮಾತುಗಳನ್ನು ಹಂಚಿಕೊಂಡರು. ವೀರಸೌಧ ಕಾಂಗ್ರೆಸ್‌ನ ‘ಶಕ್ತಿಕೇಂದ್ರ’ವಾಗಿ ಪರಿವರ್ತನೆ ಆಯಿತು.

ADVERTISEMENT

ಇದೇ ಸ್ಥಳದಲ್ಲಿ ಸ್ವಾತಂತ್ರ್ಯ ಯೋಧರು ನಡೆದುಕೊಂಡು ಹೋಗಲು ದಾರಿ ಮಾಡಲಾಗಿತ್ತು. ಆ ದಾರಿ ‘ಕಾಂಗ್ರೆಸ್‌ ರಸ್ತೆ’ ಎಂದೇ ಹೆಸರಾಗಿದೆ. ಈಗಿನ ನಾಯಕರು ಕೂಡ ತಮ್ಮ ವಾಹನಗಳಲ್ಲಿ ಅದೇ ಮಾರ್ಗದಲ್ಲಿ ಸಾಗಿಬಂದರು.

1924ರ ಡಿಸೆಂಬರ್‌ 26ನೇ ದಿನ ಮಧ್ಯಾಹ್ನ 3ಕ್ಕೆ ಗಾಂಧೀಜಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಸೇನಾನಿಗಳ ಅಧಿವೇಶನ ನಡೆದಿತ್ತು. ಅದೇ ದಿನ ಅದೇ ಸಮಯವನ್ನು ಅನುಸರಿಸಿ ಎಐಸಿಸಿ ಕಾರ್ಯಕಾರಿಣಿ ಸಮಿತಿ ಸಭೆ ನಡೆಸುವ ಮೂಲಕ, ಕಾಂಗ್ರೆಸ್ಸಿಗರು ದೇಶಕ್ಕೆ ನವ ಸತ್ಯಾಗ್ರಹದ ಸಂದೇಶ ರವಾನಿಸಿದರು.

ಚಾಲನೆ ನೀಡಿದ ಸಿ.ಎಂ:

ಇಲ್ಲಿನ ಟಿಳಕವಾಡಿಯಲ್ಲಿನ ವೀರಸೌಧದಲ್ಲಿ ಗುರುವಾರ ಬೆಳಿಗ್ಗೆ ಮಹಾತ್ಮ ಗಾಂಧೀಜಿ ನೂತನ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ‌ ಅನಾವರಣಗೊಳಿಸಿದರು. ಇದರೊಂದಿಗೆ ‘ಗಾಂಧಿ ಭಾರತ’ ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟರು.

ವೀರಸೌಧದ ಆವರಣದಲ್ಲಿನ ಗಾಂಧಿ ಸ್ಮಾರಕ ಭವನದಲ್ಲಿನ ನವೀಕೃತ ಫೋಟೊ ಗ್ಯಾಲರಿಯನ್ನು‌ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಇದೇ ವೇಳೆ ವೀರಸೌಧ (ಕಾಂಗ್ರೆಸ್ ಬಾವಿ) ಆವರಣದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಜತೆಯಾಗಿ ಸಸಿ ನೆಟ್ಟು ನೀರೆರೆದರು.

ಸಚಿವರಾದ ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ, ಎಚ್.ಸಿ.ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳಕರ, ಶರಣಬಸಪ್ಪ ದರ್ಶನಾಪುರ, ಕೆ.ಎಚ್.ಮುನಿಯಪ್ಪ, ಸರ್ಕಾರದ ಮುಖ್ಯ ಸಚೇತಕ ಅಶೋಕ‌‌ ಪಟ್ಟಣ, ಶಾಸಕ ಆಸಿಫ್ (ರಾಜು) ಸೇಠ್, ಪರಿಷತ್ ಸದಸ್ಯ‌ ಚನ್ನರಾಜ ಹಟ್ಟಿಹೊಳಿ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಕೂಡ ಜತೆಯಾದರು.

ಅಲ್ಲಿಂದ ನೇರವಾಗಿ ರಾಮತೀರ್ಥ ನಗರಕ್ಕೆ ಬಂದ ಸಿದ್ದರಾಮಯ್ಯ, ‘ಗಂಗಾಧರರಾವ್‌ ದೇಶಪಾಂಡೆ ಸ್ಮಾರಕ ಭವನ‌’ ಮತ್ತು ‘ಫೋಟೊ ಗ್ಯಾಲರಿ’ ಲೋಕಾರ್ಪಣೆಗೊಳಿಸಿದರು. ₹1.58 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಭವನ, ದೇಶಪಾಂಡೆ ಅವರ ಪುತ್ಥಳಿ, ಉದ್ಯಾನವನ್ನೂ ವೀಕ್ಷಿಸಿದರು. ಅಲ್ಲಿ ಇಟ್ಟಿದ್ದ ಗಾಂಧಿ ಚರಕದಲ್ಲಿ ನೂಲುವ ಮೂಲಕ ಅವರು ಗಮನ ಸೆಳೆದರು. ಡಿ.ಕೆ.ಶಿವಕುಮಾರ್‌ ಹಾಗೂ ಬಹುಪಾಲು ಸಚಿವರೂ ಇದಕ್ಕೆ ಕೈ ಜೋಡಿಸಿದರು.

ಸಚಿವರಾದ ಸತೀಶ ಜಾರಕಿಹೊಳಿ, ಬೈರತಿ ಸುರೇಶ್, ಶಿವರಾಜ ತಂಗಡಗಿ, ದಿನೇಶ್ ಗುಂಡೂರಾವ್, ಶಾಸಕ ಗಣೇಶ್ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಸೇರಿದಂತೆ ಹಿರಿಯ ಅಧಿಕಾರಿಗಳೆಲ್ಲ ಪಾಲ್ಗೊಂಡರು.

ನಗರದ ಸರ್ದಾರ್‌ ಮೈದಾನದಲ್ಲಿ ಏರ್ಪಡಿಸಿದ ‘ಖಾದಿ ಉತ್ಸವ ಮತ್ತು ಸರಸ್‌ ಮೇಳ ವಸ್ತುಪ್ರದರ್ಶನ, ಮಾರಾಟ ಮೇಳ’ವನ್ನೂ ಸಿದ್ದರಾಮಯ್ಯ ಉದ್ಘಾಟಿಸಿದರು. ಗುಡಿ ಕೈಗಾರಿಕೆಗಳ ಮೂಲಕ ಸಿದ್ಧಪಡಿಸಿದ ತಹರೇವಾರಿ ವಸ್ತುಗಳನ್ನು ಅವರು ಕೌತುಕದಿಂದ ವೀಕ್ಷಿಸಿರು.

ಬೆಳಗಾವಿಯ ವೀರಸೌಧದಲ್ಲಿರುವ 1924ರ ಕಾಂಗ್ರೆಸ್‌ ಅಧಿವೇಶನ ಚಿತ್ರಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಪಕ್ಷ ರಾಹುಲ್‌ ಗಾಂಧಿ ಗುರುವಾರ ವೀಕ್ಷಿಸಿದರು. ಕಪ್ಪು– ಬಿಳುಪಿನಲ್ಲಿದ್ದ ಈ ಚಿತ್ರಗಳನ್ನು ಕೃತಕ ಬುದ್ಧಿಮತ್ತೆ ಬಳಸಿ ವರ್ಣಮಯ ಮಾಡಲಾಗಿದೆ
ಬೆಳಗಾವಿಯ ವೀರಸೌಧದ ಆವರಣದಲ್ಲಿ ನಿರ್ಮಿಸಿದ ಗಾಂಧೀಜಿ ಪ್ರತಿಮೆಯನ್ನು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿ ಕಾಂಗ್ರೆಸ್‌ನ ನಾಯಕರೊಂದಿಗೆ ಗುಂಪುಚಿತ್ರ ತೆಗೆಸಿಕೊಂಡರು  ಪ್ರಜಾವಾಣಿ ಚಿತ್ರ
1924ರ ಕಾಂಗ್ರೆಸ್‌ ಅಧಿವೇಶನದ ರೂವಾರಿ ಗಂಗಾಧರರಾವ್ ದೇಶಪಾಂಡೆ ಅವರ ಸ್ಮಾರಕ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಗುರುವಾರ ಉದ್ಘಾಟಿಸಿ ನಮನ ಸಲ್ಲಿಸಿದ್ದು ಹೀಗೆ  ಪ್ರಜಾವಾಣಿ ಚಿತ್ರ

ಸಂಭ್ರಮ ಇಮ್ಮಡಿಸಿದ ಖರ್ಗೆ, ರಾಹುಲ್‌

ಮಧ್ಯಾಹ್ನ 12.30ಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ವಿಶೇಷ ವಿಮಾನದ ಮೂಲಕ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಮುಖ್ಯಮಂತ್ರಿ ಉಪಮುಖ್ಯಮಂತ್ರಿ ರಾಜ್ಯ ಉಸ್ತುವಾರು ರಣದೀಪ್‌ಸಿಂಗ್‌ ಸುರ್ಜೆವಾಲಾ ಹಾಗೂ ಎಲ್ಲ ಸಚಿವರು ಅವರನ್ನು ಸ್ವಾಗತಿಸಿದರು. ಅವರ ಮುಂದಾಳತ್ವದಲ್ಲಿ ನಾಯಕರ ದಂಡು ವೀರಸೌಧದತ್ತ ಹೆಜ್ಜೆ ಹಾಕಿದಾಗ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಯಿತು. ಕಾಂಗ್ರೆಸ್‌ ಸೇವಾದಳದ ಕಾರ್ಯಕರ್ತರು ಇನ್‌ಕ್ವಿಲಾಬ್‌ ಜಿಂದಾಬಾದ್‌ ಹಿಂದೂಸ್ತಾನ್‌ ಜಿಂದಾಬಾದ್‌ ಘೋಷಣೆ ಮೊಳಗಿಸಿದರು.

ಜನರಿಗೆ ಕಾಣಿಸಿಕೊಳ್ಳದ ನಾಯಕರು

‘ಗಾಂಧಿ ಭಾರತ’ ಕಾರ್ಯಕ್ರಮಕ್ಕೆ ಇಡೀ ನಗರವನ್ನು ಇನ್ನಿಲ್ಲದಂತೆ ಸಿಂಗರಿಸಲಾಗಿದೆ. ಕಾಂಗ್ರೆಸ್‌ ಹಿರಿಯ ನಾಯಕರೆಲ್ಲ ಬರುತ್ತಾರೆ ಎಂದು ಜನ ಕೌತುಕದಿಂದ ಕಾಯುತ್ತಿದ್ದರು. ಆದರೆ ನಗರ ಪ್ರವೇಶ ಮಾಡಿದ ನಾಯಕರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ಐತಿಹಾಸಿಕ ಕ್ಷಣದ ‘ಮರು ಚಿತ್ರಣ’ ಚಿತ್ರೀಕರಿಸಲು ನಾಲ್ಕು ತಾಸು ಕಾದು ನಿಂತಿದ್ದ ಮಾಧ್ಯಮಗಳ ಕಣ್ಣಿಗೂ ಕಾಣಿಸಲಿಲ್ಲ. ಮಲ್ಲಿಕಾರ್ಜುನ ಖರ್ಗೆ ರಾಹುಲ್‌ ಗಾಂಧಿ ಮುಂದಾಳತ್ವದಲ್ಲಿ ‘ನವ ಸತ್ಯಾಗ್ರಹ’ ಘೋಷಣೆ ಅಡಿ 100 ಅಡಿಗಳ ಸಾಂಕೇತಿಕ  ಪಥಸಂಚಲನ ನಡೆಯಿತು. ಇದರ ಸುತ್ತಲೂ ಸೇವಾದಳ ಕಾರ್ಯಕರ್ತರೇ ಮುಗಿಬಿದ್ದ ಕಾರಣ ನಾಯಕರ ಮುಖ ಕ್ಯಾಮೆರಾ ಕಣ್ಣಿಗೂ ಸಿಗಲಿಲ್ಲ. ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ ಸಭೆ ನಡೆದ ಟಿಳಕವಾಡಿ ಪ್ರದೇಶದಲ್ಲಿ ವಾಹನ ಸಂಚಾರವನ್ನು ಕೆಲಕಾಲ ಬಂದ್‌ ಮಾಡಲಾಯಿತು. ಇಡೀ ದಿನ ನಗರದ ಎಲ್ಲ ವೃತ್ತಗಳು ಸಂಚಾರ ದಟ್ಟಣೆಯಿಂದ ತುಂಬಿದವು.

ರೇಷ್ಮೆ ಶಾಲು ಶ್ರೀಗಂಧ ಕುಂದಾ ಕರದಂಟು ಕಾಣಿಕೆ

‘ಮಲ್ಲಿಕಾರ್ಜುನ ಖರ್ಗೆ ರಾಹುಲ್‌ ಗಾಂಧಿ ಆದಿಯಾಗಿ ಎಲ್ಲ 150 ನಾಯಕರಿಗೂ ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಕಾಣಿಕೆ ನೀಡಿದ್ದೇವೆ. ವಿಶೇಷವಾದ ಶಾಲು ಹೊದಿಸಿ ಗಾಂಧಿ ಭಾರತದ ಪುಸ್ತಕಗಳು ಮೈಸೂರು ಶ್ರೀಗಂಧದ ಮಾದರಿ ಬೆಳಗಾವಿ ಸಿಹಿದಿಣಿಸುಗಳಾದ ಕುಂದಾ ಕರದಂಟು ಇರುವ ಪೊಟ್ಟಣ ಕೊಟ್ಟು ಸನ್ಮಾನಿಸಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. ‘ಶುಕ್ರವಾರ (ಡಿ.27) ಬೆಳಿಗ್ಗೆ 10.30ಕ್ಕೆ ಸುವರ್ಣ ವಿಧಾನಸೌಧ ಮುಂದೆ ಗಾಂಧೀಜಿ ಅವರ 37 ಅಡಿ ಎತ್ತರದ ಪ್ರತಿಮೆ ಅನಾವರಣ ನಡೆಯಲಿದೆ. ಇದಕ್ಕೆ ಎಲ್ಲ‌ ಪಕ್ಷಗಳ ಸಂಸದರು ಶಾಸಕರನ್ನು ಆಹ್ವಾನಿಸಲಾಗಿದೆ. ಮಧ್ಯಾಹ್ನ ಸೌಧ ಬ್ಯಾಂಕ್ವೆಂಟ್ ಹಾಲ್‌ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.