ಬೆಳಗಾವಿಯ ಪಶುಸಂಗೋಪನೆ ಇಲಾಖೆ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಿಸಿದರು
ಬೆಳಗಾವಿ: ‘ಮಹಿಳೆಯರಿಗೆ ಶೇ 50ರಷ್ಟು ಸ್ಥಾನ– ಮಾನ ನೀಡಿದರೆ ದೇಶ ಸುಧಾರಣೆ ಆಗುತ್ತದೆ ಎಂಬುದು ಗಾಂಧೀಜಿ ಕನಸಾಗಿತ್ತು. ಅದರಂತೆಯೇ ಮನಮೋಹನ ಸಿಂಗ್ ಅವರು ಪ್ರಧಾನಿ ಆಗಿದ್ದ ವೇಳೆ ನರೇಗಾ ಜಾರಿಗೆ ತಂದು ಮಹಿಳೆಯರಿಗೆ ಬಲ ತುಂಬಿದರು. ಅವರ ಆದರ್ಶನಗಳನ್ನೇ ನಾನು ನಂಬಿ ನಡೆದಿದ್ದೇನೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ತಾಲ್ಲೂಕಿನ ಬಡಸ್ ಕೆ.ಎಚ್.ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಎಲ್ಲದಕ್ಕೂ ಗ್ರಾಮ ಪಂಚಾಯಿತಿಗಳನ್ನು ಅವಲಂಭಿಸಲಾಗುತ್ತಿದೆ. ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಬಲ ಬಂದಿದ್ದು, ಜನ ಸಾಮಾನ್ಯರ ಪಾಲಿಗೆ ಗ್ರಾಮ ಪಂಚಾಯಿತಿಗಳು ದೇವಾಲಯಗಳಾಗಬೇಕು’ ಎಂದರು.
‘ನನಗೆ ಮತ ಹಾಕಿದ ಜನರಿಗೆ ಸಾರ್ಥಕ ಭಾವನೆ ಮೂಡಬೇಕು. ಇಲಾಖೆಯಲ್ಲೂ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ. ಊರನ್ನು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡೋಣ’ ಎಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ‘ಗ್ರಾಮ ಪಂಚಾಯಿತಿ ನೂತನ ಕಟ್ಟಡ ಈ ಗ್ರಾಮದ ಬಹು ದಿನಗಳ ಬೇಡಿಕೆಯಾಗಿತ್ತು. ಸಚಿವರ ಮಾರ್ಗದರ್ಶನದಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ’ ಎಂದರು.
ಮಡಿವಾಳೇಶ್ವರ ಮಠದ ಪ್ರಶಾಂತ ದೇವರು ಸಾನ್ನಿಧ್ಯ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಪ್ರದೀಪ್ ಸಾವಂತ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಪ್ಪ ಕುರುಬರ, ಉಪಾಧ್ಯಕ್ಷ ಸುನಿಲ್ ದಳವಾಯಿ, ಸದಸ್ಯರು ಇದ್ದರು.
ಉನ್ನತೀಕರಿಸಿದ ಪ್ರೌಢಶಾಲೆ ಉದ್ಘಾಟನೆ
ಬೆಳಗಾವಿ: ತಾಲ್ಲೂಕಿನ ಕುಕಡೊಳ್ಳಿ ಗ್ರಾಮದಲ್ಲಿ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸೋಮವಾರ ಉದ್ಘಾಟಿಸಿದರು.
‘ವಿದ್ಯಾರ್ಥಿಗಳಿಗೆ ಕಲಿಯುವ ಜಿದ್ದು ಇರಬೇಕು. ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಲು ಶಿಕ್ಷಕರು ಶ್ರಮಿಸುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಕರ ಮಾರ್ಗದರ್ಶನ ಪಾಲಿಸಬೇಕು’ ಎಂದು ಸಲಹೆ ನೀಡಿದರು.
‘₹1.25 ಕೋಟಿ ವೆಚ್ಚದಲ್ಲಿ ಗ್ರಾಮ ದೇವತೆ ದೇವಸ್ಥಾನ ನಿರ್ಮಾಣ ಮಾಡಲಾಗುವುದು. ಶೀಘ್ರವೇ ಶಂಕುಸ್ಥಾಪನೆ ಮಾಡಲಾಗುವುದು’ ಎಂದರು.
ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿದ್ದವ್ವ ಹೊಸೂರ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೆ.ಆಂಜನೇಯ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್.ಮೇದಾರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಹುಬ್ಬಳ್ಳಿ, ಪ್ರವೀಣ ರೊಟ್ಟಿ, ನಾಗಪ್ಪ ಕರವಿನಕೊಪ್ಪ ಇದ್ದರು.
‘ಮಹಿಳೆಯರನ್ನು ಹಗುರವಾಗಿ ಕಾಣಬೇಡಿ’
ಬೆಳಗಾವಿ: ‘ಸ್ವಾಭಿಮಾನದಿಂದ ಜೀವನ ಸಾಗಿಸುವ ಮಹಿಳೆಯರಿಗೆ ಯಾರೂ ಮೋಸ, ಅನ್ಯಾಯ ಮಾಡಬಾರದು. ಮಹಿಳೆಯರನ್ನು ಹಗುರವಾಗಿ ಪರಿಗಣಿಸುವವರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಎಚ್ಚರಿಕೆ ಕೊಟ್ಟರು.
ಇಲ್ಲಿನ ಪಶುಸಂಗೋಪನೆ ಇಲಾಖೆ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೆಳಗಾವಿ ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯ ವಾರ್ಷಿಕ ಮಹಾಸಭೆ, ಪ್ರಮಾಣಪತ್ರಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಇತ್ತೀಚೆಗೆ ಮೈಕ್ರೊ ಫೈನಾನ್ಸ್‌ನವರು ಮಹಿಳೆಯರಿಗೆ ಮೋಸ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿವೆ. ಜತೆಗೆ ಕೆಲವು ಅಧಿಕಾರಿಗಳೂ ಮಹಿಳೆಯರನ್ನು ಹಗುರವಾಗಿ ಪರಿಗಣಿಸುವುದನ್ನು ಕಾಣುತ್ತಿದ್ದೇವೆ. ಮುಂದೆ ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದರು.
ನಿರ್ಮಲಾ ತಿಗಡಿ, ಮಲ್ಲಿಕಾರ್ಜುನ ಕೆಳಕರ, ಡಾ.ಆನಂದ ಪಾಟೀಲ, ಡಾ.ರವಿ ಸಾಲಿಗೌಡರ, ಪ್ರದೀಪ ಸಾವಂತ, ಮಹಾದೇವ ಪಟಗುಂದಿ, ಮಹೇಶ ಭಜಂತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.