ಬೆಳಗಾವಿ: ಈ ಬಾರಿಯ ಗಣೇಶ ಚತುರ್ಥಿ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ. ನಗರದೆಲ್ಲೆಡೆ ಈಗ ಝಗಮಗಿಸುವ ಇದ್ಯುದ್ದೀಪಾಲಂಕಾರ ಕಣ್ಮನ ಸೆಳೆಯುತ್ತಿದೆ. ಮಾರುಕಟ್ಟೆ ಹಾಗೂ ಪ್ರಮುಖ ರಸ್ತೆಗಳಲ್ಲಿ ಇಂಚಿಂಚಿಗೂ ರಂಗುರಂಗಿನ ದೀಪಾಲಂಕಾರ ಜನರನ್ನು ಸೆಳೆಯುತ್ತಿದೆ. ಪ್ರತಿ ವರ್ಷದ ವಾಡಿಕೆಯಿಂದ ಐದನೇ ದಿನದ ನಂತರ ಈ ದೀಪಾಲಂಕಾರ ನೋಡಲು ಜನ ತಂಡೋಪತಂಡವಾಗಿ ಧಾವಿಸುತ್ತಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿ ಕೂಡ ಮೂರು ಅಡಿಯಿಂದ ಹಿಡಿದು ಸುಮಾರು 15 ಅಡಿಗಳಷ್ಟು ಎತ್ತರದ ಮೂರ್ತಿಗಳನ್ನು ಮಂಡಳಗಳು ಪ್ರತಿಷ್ಠಾಪನೆ ಮಾಡಿವೆ. ಅದರೊಂದಿಗೆ ವರ್ತಮಾನದ ಸಂದೇಶಗಳನ್ನು ಬಿಂಬಿಸುವ ಕಲಾಕೃತಿಗಳನ್ನು ಮಾಡಲಾಗಿದೆ. ಕೆಲವೆಡೆ ಆಪರೇಷನ್ ಸಿಂಧೂರದಂಥ ಮಾದರಿಗಳನ್ನು ಮಾಡಿದ್ದು ಕಣ್ಮನ ಸೆಳೆಯುತ್ತಿದೆ.
ಭಾನುವಾರದಿಂದ ಗಣಪತಿ ನೋಡಲು ಬರುವ ಜನಜಂಗುಳಿ ಹೆಚ್ಚಾಗಿದೆ. ಮಾರುಕಟ್ಟೆ ಪ್ರದೇಶದಲ್ಲಂತೂ ಬೈಕ್, ಸೈಕಲ್‌ಗಳೂ ದಾಟದಂತೆ ಜನ ಕಿಕ್ಕಿರಿದು ಸೇರಿದ್ದಾರೆ. ರಾಣಿ ಚನ್ನಮ್ಮ ವೃತ್ತದಿಂದ ಮೂರ್ತಿಗಳನ್ನು ನೋಡಲು ಆರಂಭಿಸಿದರೆ ಶನಿವಾರ ಕೂಟ, ಕಾಕತಿವೇಸ್, ಗಣತಿ ಗಲ್ಲಿ, ಮಾರುತಿ ಗಲ್ಲಿ, ಪಾಂಗುಳಗಲ್ಲಿ, ರಿಸಾಲ್ದಾರ ಗಲ್ಲಿ, ಖಡಕ್ ಗಲ್ಲಿ, ಶಹಾಪುರ ರಸ್ತೆ, ವಡಗಾವಿ, ಅನಗೋಳ ಸೇರಿದಂತೆ ಎಲ್ಲ ಪ್ರದೇಶಗಳ ಗಲ್ಲಿಗಲ್ಲಿ, ಸಂದಿಗೊಂದಿಗಳಲ್ಲೂ ಅಂದದ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ನಗರದ ಅರ್ಧಕ್ಕೂ ಹೆಚ್ಚು ಪ್ರದೇಶ ಈಗ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಸಾಲು ಸಾಲು ಬಲ್ಬುಗಳನ್ನು ಒಪ್ಪ ಓರಣವಾಗಿ ಜೋಡಿಸಿರುವ ಮಂಡಳಗಳ ಸದಸ್ಯರು, ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ದೀಪಗಳ ಸಾಲಿನಲ್ಲಿ ಓಡಾಡುವುದು, ಫೋಟೊ, ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸುವುದೇ ಎಲ್ಲೆಲ್ಲೂ ಕಾಣುತ್ತಿದೆ.
ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಮಂಡಳದವರು ಪೊಲೀಸ್ ಇಲಾಖೆಯೊಂದಿಗೆ ಸೇರಿ ಸುರಕ್ಷತಾ ಕ್ರಮಕ್ಕೆ ಮುಂದಾಗಿದ್ದಾರೆ. ಬ್ಯಾರಿಕೇಡ್‌ಗಳನ್ನು ಇಟ್ಟು ಜನರು ಸಾಲಾಗಿ ಹೋಗುವಂತೆ ವ್ಯವಸ್ಥೆ ಮಾಡಿದ್ದಾರೆ. ಬಹುಪಾಲು ಎಲ್ಲ ಕಡೆ ಇ– ಹುಂಡಿಗಳು ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಮತ್ತೆ ಕೆಲವು ಮಂಡಳಗಳು ಬೃಹತ್ ಶಾಮಿಯಾನ ಹಾಕಿ ಗೊಂಬೆಗಳ ಆಟ ಏರ್ಪಡಿಸಿದ್ದಾರೆ. ನೃತ್ಯ, ಸಂಗೀತ ಹಾಗೂ ರಂಗೋಲಿ ಸ್ಪರ್ಧೆಗಳೂ ನಿರಂತರ ನಡೆದಿವೆ.
ಮೇಲಿಂದ ಮೇಲೆ ಮಳೆ ಸುರಿಯುತ್ತಿದ್ದರೂ ಗಣಪತಿ ಸಂಭ್ರಮ ಮಾತ್ರ ಕುಂದಿಲ್ಲ. ಕೊಡೆಗಳನ್ನು ಹಿಡಿದು, ಜರ್ಕಿನ್‌ಗಳನ್ನ ಧರಿಸಿಯೇ ಯುವಜನರು ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಹಳ್ಳಿಗಳಿಂದ ಕೂಡ ಜನ ವಾಹನಗಳನ್ನು ಬಾಡಿಗೆ ಮಾಡಿಕೊಂಡು ಬಂದು ವೈಭವ ಕಣ್ತುಂಬಿಕೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.