ADVERTISEMENT

ಹುಕ್ಕೇರಿ: ಇಲ್ಲಿದ್ದಾನೆ 31 ಅಡಿ ಎತ್ತರದ ಗಣನಾಯಕ

ಪ್ರೊ.ಪಿ.ಜಿ.ಕೊಣ್ಣೂರ
Published 25 ಸೆಪ್ಟೆಂಬರ್ 2023, 4:39 IST
Last Updated 25 ಸೆಪ್ಟೆಂಬರ್ 2023, 4:39 IST
<div class="paragraphs"><p>ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಡ್ಯಾಂ ಬಳಿಯ ಲೇಬರ್ ಕ್ಯಾಂಪ್‌ನಲ್ಲಿ ಪ್ರತಿಷ್ಠಾಪಿಸಲಾದ 31 ಅಡಿ ಎತ್ತರದ ಗಣೇಶ ಮೂರ್ತಿಯೊಂದಿಗೆ ಮಂಡಳಿಯ ಸದಸ್ಯರು ಮತ್ತು ಗ್ರಾಮ ಪಂಚಾಯಿತಿ ಸದಸ್ಯೆ ಭಾರತಿ ಬೆಣ್ಣಿ ಇದ್ದಾರೆ.</p></div>

ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಡ್ಯಾಂ ಬಳಿಯ ಲೇಬರ್ ಕ್ಯಾಂಪ್‌ನಲ್ಲಿ ಪ್ರತಿಷ್ಠಾಪಿಸಲಾದ 31 ಅಡಿ ಎತ್ತರದ ಗಣೇಶ ಮೂರ್ತಿಯೊಂದಿಗೆ ಮಂಡಳಿಯ ಸದಸ್ಯರು ಮತ್ತು ಗ್ರಾಮ ಪಂಚಾಯಿತಿ ಸದಸ್ಯೆ ಭಾರತಿ ಬೆಣ್ಣಿ ಇದ್ದಾರೆ.

   

- ಪ್ರಜಾವಾಣಿ ಚಿತ್ರ

ಹುಕ್ಕೇರಿ: ತಾಲ್ಲೂಕಿನ ಹಿಡಕಲ್ ಜಲಾಶಯಕ್ಕೆ ಈಗ ದೈವೀ ಕಳೆ ಬಂದಿದೆ. ಈ ಜಲಾಶಯದ ಬಳಿಯ ಲೇಬರ್ ಕ್ಯಾಂಪಿನ ಮರೆಮ್ಮ ದೇವಸ್ಥಾನದ ಬಳಿ ಬೃಹತ್‌ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಮೂರ್ತಿ ತಳದಿಂದ ಕಿರೀಟದವರೆಗೆ ಬರೋಬ್ಬರಿ 31 ಅಡಿ ಎತ್ತರವಿದೆ!

ADVERTISEMENT

ಗ್ರಾಮೀಣ ಭಾಗದಲ್ಲೂ ಗಣೇಶ ಹಬ್ಬದ ಅಂಗವಾಗಿ ಈ ವಿಶೇಷ ರೀತಿಯ ಮೂರ್ತಿ ಪ್ರತಿಷ್ಠಾಪನೆ ಮಾಡುವ ಪರಂಪರೆ ಬೆಳೆಯತೊಡಗಿದೆ. ಅಣೆಕಟ್ಟೆ ನೋಡಲು ಬರುವ ಪ್ರವಾಸಿಗರನ್ನೆಲ್ಲ ಈಗ ಗಣೇಶ ಸೆಳೆಯುತ್ತಿದ್ದಾನೆ.

ಸ್ಥಳೀಯ ಸಾರ್ವಜನಿಕ ಗಣೇಶೋತ್ಸವ ಮಂಡಳಿ ರಾಜ್ಯದಲ್ಲೇ ಅತಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಕೀರ್ತಿಗೆ ಪಾತ್ರವಾಗಿದೆ. ಈ ಮಂಡಳಿ ಪ್ರತಿಷ್ಠಾಪಿಸಿರುವ 31 ಅಡಿ ಎತ್ತರದ ಮೂರ್ತಿಯ ಬೆಲೆ ₹2.10 ಲಕ್ಷ.

ಈ ವಿಶೇಷ ಗಣೇಶನ ಶಿರದ ಮೇಲೆ ಗರುಡ ಮೂರ್ತಿಯಿದೆ. ಅದಕ್ಕೆ ಬಣ್ಣವನ್ನು ಕಾಕತಿಯ ಕಲಾವಿದ ಶ್ರೀಧರ ಪಾಟೀಲ ನೀಡಿದ್ದಾರೆ. ಅವರ ಕುಂಚದ ಕಲೆಯಲ್ಲಿ ವಿಶೇಷ ಆಕರ್ಷಕವಾಗಿ ಗಣೇಶ ಮೂಡಿ ಬಂದಿದ್ದಾನೆ.

ದಾಖಲೆ: ಪ್ರಥಮ ವರ್ಷದಲ್ಲಿ 11 ಅಡಿಯ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ದ್ವಿತೀಯ ವರ್ಷದಲ್ಲಿ 21 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಈ ವರ್ಷ 31 ಅಡಿಗೆ ಏರಿಸಲಾಗಿದೆ. ಪ್ರತಿ ವರ್ಷ 10 ಅಡಿಗಳಷ್ಟು ಎತ್ತರದ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಈ ಮಂಡಳಿಯ ಉದ್ದೇಶ. ಈ ದೃಷ್ಟಿಯಲ್ಲಿ ಮುಂದಿನ ವರ್ಷಗಳಲ್ಲಿ ಇದು ಇನ್ನಷ್ಟು ಗಮನಾರ್ಹವಾಗಲಿದೆ ಎನ್ನುತ್ತಾರೆ ಜನ.

ಸವಾಲೆನಿಸಿದ ಮೂರ್ತಿ ಸಾಗಣೆ: ಈ ಬೃಹತ್‌ ಗಣೇಶನ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸುವುದೇ ಗಣೇಶ ಮಂಡಳಿಯವರಿಗೆ ಸವಾಲಾಗಿತ್ತು. ಏಕೆಂದರೆ ರಸ್ತೆಯಲ್ಲಿ ಜನದಟ್ಟಣೆ ಮತ್ತು ಚಿಕ್ಕ ಮಾರ್ಗದಲ್ಲಿ ಸಾಗಣೆಯ ಸಮಸ್ಯೆ ತಲೆದೋರಿತ್ತು. ಮರಗಳ ಟೊಂಗೆ, ವಿದ್ಯುತ್‌ ತಂತಿಗಳ ಅಡಚಣೆ ಹೀಗೆ ಎಲ್ಲ ಅಡೆಗಡೆಗಳ ಮಧ್ಯೆಯೂ ಅತ್ಯಂತ ನಾಜೂಕಿನಿಂದ ಮೂರ್ತಿ ತಂದು ಪ್ರತಿಷ್ಠಾಪಿಸಿದ್ದಾರೆ.

‘ಭಾರತಿ ಬೆಣ್ಣಿ, ರವಿ ಬೆಣ್ಣಿ, ಸಂದೀಪ, ಬಾಳಕೃಷ್ಣ ಸೇರಿ ಹೆಚ್ಚಿನ ಹಣ ಸೇರಿಸಿದ್ದಾರೆ. ಗ್ರಾಮದ 15 ಜನ ದೇಣಿಗೆ ನೀಡಿದ್ದಾರೆ. ಇವರೆಲ್ಲರ ಆರ್ಥಿಕ ಸಹಾಯದಿಂದ ಹಬ್ಬ ಆಚರಿಸುತ್ತೇವೆ. ಸ್ಥಾಪನೆ ಆದಾಗಿನಿಂದ ಬೇಡಿಕೆಗಳು ಈಡೇರಿವೆ. ಜನರಿಗೆ ಒಳ್ಳೆಯದಾಗುತ್ತಿದೆ’ ಎನ್ನುತ್ತಾರೆ ಯುವಕ ಮಂಡಳ ಅಧ್ಯಕ್ಷ ರವಿ ಬೆಣ್ಣಿ.

ನಾನು ಗ್ರಾಮ ಪಂಚಾಯಿತಿ ಸದಸ್ಯೆಯಾದ ಬಳಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾದೆವು. ಮೂರು ವರ್ಷಗಳಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ನಮ್ಮ ಯುವಕರ ಹಾಗೂ ಸಾರ್ವಜನಿಕರ ಶ್ರಮ ಹೆಚ್ಚಾಗಿದೆ. ನಮಗೂ ಒಳ್ಳೆಯಾಗಿದೆ’ ಎಂದರು ಹೊಸಪೇಟ ಗ್ರಾಮ ಪಂಚಾಯಿತಿ ಸದಸ್ಯೆ ಭಾರತಿ ಬೆಣ್ಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.