
ಬೆಳಗಾವಿ: ಚಿನ್ನ ಹಾಗೂ ಬೆಳ್ಳಿಯ ದರಗಳ ಸ್ಥಿರವಾಗಿ ಇಲ್ಲದಿರುವ ಕಾರಣ ಗಡಿ ಜಿಲ್ಲೆಯ ಅಕ್ಕಸಾಲಿಗರು, ಚಿನ್ನಾಭರಣ ವ್ಯಾಪಾರಿಗಳು ದಿಕ್ಕು ತೋಚದಾಗಿದ್ದಾರೆ. ಇದರ ಬಿಸಿ ಗ್ರಾಹಕರಿಗೂ ತಟ್ಟಿದ್ದರಿಂದ ಖರೀದಿಗೆ ಸುಳಿಯುತ್ತಿಲ್ಲ. ಹೀಗಾಗಿ, ಚಿನ್ನ– ಬೆಳ್ಳಿ ತಯಾರಿಕೆಯನ್ನೇ ನಂಬಿಕೊಂಡಿದ್ದ ಅಪಾರ ಸಂಖ್ಯೆಯ ಕಾರ್ಮಿಕರು ಈಗ ಹೊಟ್ಟೆ ಹೊರೆದುಕೊಳ್ಳಲು ಪರದಾಡುವ ಸ್ಥಿತಿ ಬಂದಿದೆ.
ಬೆಳಗಾವಿ ನಗರದ ಸರಾಫ್ ಬಜಾರ್‌ಗೆ ಕಾಲಿಟ್ಟರೆ ಅಕ್ಕಸಾಲಿಗರ ಪರಿಸ್ಥಿತಿಯ ನೈಜ ಚಿತ್ರಣ ಸಿಗಲಿದೆ. ಮಾತ್ರವಲ್ಲ; ಆಭರಣ ಹಾಗೂ ಮೂರ್ತಿ ತಯಾರಿಕೆಗೆ ಹೆಸರಾದ ಗೋಕಾಕ ನಗರ, ನಿಪ್ಪಾಣಿ ತಾಲ್ಲೂಕಿನ ಹಳ್ಳಿಗಳಲ್ಲೂ ಅಕ್ಕಸಾಲಿಗರು ಕೆಲಸವಿಲ್ಲದೇ ಖಾಲಿ ಕುಳಿತಿದ್ದಾರೆ.
ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ತಯಾರು ಮಾಡುವಲ್ಲಿ ಗಡಿ ಜಿಲ್ಲೆ ಬೆಳಗಾವಿಯೂ ಮುಂಚೂಣಿಯಲ್ಲಿದೆ. ಒಂದೆಡೆ ಮಹಾರಾಷ್ಟ್ರ, ಇನ್ನೊಂದೆಡೆ ಗೋವಾ ರಾಜ್ಯದ ಗಡಿಗಳನ್ನು ಹಂಚಿಕೊಂಡ ಜಿಲ್ಲೆಯಲ್ಲಿ ಅಂತರರಾಜ್ಯ ವ್ಯಾಪಾರವೂ ಹೆಚ್ಚಾಗಿದೆ. ಆದರೆ, ಕಳೆದ ಮೂರು ತಿಂಗಳಿಂದ ಚಿನ್ನ ಹಾಗೂ ಬೆಳ್ಳಿಯ ದರ ವಿಪರೀತ ಏರಿದ್ದರಿಂದ ಸಣ್ಣಪುಟ್ಟ ಕಾರ್ಖಾನೆಗಳು ಬಂದ್ ಆಗಿವೆ. ಯಂತ್ರಗಳು ತುಕ್ಕು ಹಿಡಿದಿವೆ. ಅಕ್ಕಸಾಲಿಗರಲ್ಲಿ ಹಲವರು ಕಾರ್ಖಾನೆ, ಹೊಲ–ಗದ್ದೆ ಅಥವಾ ತಳ್ಳುವ ಗಾಡಿಗಳ ವ್ಯಾಪಾರದಲ್ಲಿ ತೊಡಗಿದ್ದಾರೆ.
ನಗರದ ವಡಗಾವಿ ಹಾಗೂ ಶಹಾಪುರ ಪ್ರದೇಶದಲ್ಲಿ ಸುಮಾರು 100ಕ್ಕೂ ಹೆಚ್ಚು ಚಿನ್ನ– ಬೆಳ್ಳಿ ಸಾಮಗ್ರಿಗಳನ್ನು ತಯಾರು ಮಾಡುವ ಯೂನಿಟ್‌ಗಳಿವೆ. ‘ಸರಾಫ್ ಬಜಾರ್’ ಎಂಬ ಮಾರುಕಟ್ಟೆಯೇ ಇಲ್ಲಿದೆ. ದರ ಏರಿಕೆ ಆದಾಗಿನಿಂದ ವ್ಯಾಪಾರಿಗಳು, ಕಾರ್ಮಿಕರು, ಸರಬರಾಜುದಾರರೂ ಕೆಲಸವಿಲ್ಲದೇ ಕುಳಿತಿದ್ದಾರೆ.
ಶುಕ್ರವಾರ (ಫೆ.13)ದ ಹೊತ್ತಿಗೆ ತೊಲಿ ಚಿನ್ನದ ದರ ₹1.52 ಲಕ್ಷ ದಾಟಿದೆ. ಒಂದು ಕೆಜಿ ಬೆಳ್ಳಿಯ ದರ ಬರೋಬ್ಬರಿ ₹2.25 ಲಕ್ಷದ ದಾಖಲಾಗಿದೆ. ಇದೂ ಕೂಡ ಶೇ 38ರಷ್ಟು ದರ ಇಳಿಕೆಯಾದ ಮೇಲೆ ಸಿಗುತ್ತಿರುವ ದರ. ಇದಕ್ಕೂ ಮುನ್ನ; ಅಂದರೆ ಎರಡು ವಾರದ ಹಿಂದಷ್ಟೇ ಬೆಳ್ಳಿಯ ದರ ₹4.20 ಲಕ್ಷದವರೆಗೂ ಏರಿತ್ತು. ತಿಂಗಳ ಹಿಂದೆ ₹3.70 ಲಕ್ಷ ದರ ಇತ್ತು.
ದಿನದಿಂದ ದಿನಕ್ಕೆ ಚಿನ್ನ– ಬೆಳ್ಳಿಯ ದರಗಳು ಏರುಪೇರು ಆಗುತ್ತಲೇ ಇವೆ. ಸದ್ಯಕ್ಕೆ ಇಳುಮುಖವಾಗಿದೆ. ಆದರೂ ಇದು ತೃಪ್ತಿದಾಯವಾಗಿಲ್ಲ. ಅಂದರೆ, ಪ್ರತಿ ದಿನ ₹10 ಸಾವಿರದಷ್ಟು ಹೆಚ್ಚು– ಕಡಿಮೆ ಆಗುತ್ತಲೇ ಇದೆ. ಈ ರೀತಿ ಏರುಪೇರಿನಿಂದ ಖರೀದಿದಾರರು ಹಿಂಜರಿಯುತ್ತಿದ್ದಾರೆ.
ವಾರದ ಹಿಂದೆ ಒಂದು ಕೆಜಿ ಬೆಳ್ಳಿ ಖರೀದಿಸಿದವರಿಗೆ ಈ ವಾರ ಕನಿಷ್ಠ ₹1 ಲಕ್ಷದಷ್ಟು ಹಾನಿ ಸಂಭವಿಸಿದೆ. ಹೀಗೆ ದರ ಸ್ಥಿರವಾಗಿ ಇಲ್ಲದ ಕಾರಣ ಜನ ಖರೀದಿಗೆ ‘ಆರ್ಡರ್’ ಕೊಡುತ್ತಿಲ್ಲ. ಆರ್ಡ್ ಬಾರದ ಕಾರಣ ಅಕ್ಕಸಾಲಿಗರು ಕೈ ಕೆಲಸವಿಲ್ಲದೇ ಪರದಾಡುವ ಸ್ಥಿತಿ ಬಂದಿದೆ ಎನ್ನುತ್ತಾರೆ ಅಕ್ಕಸಾಲಿಗರು.
‘ದೀಪಾವಳಿಗೂ ಮುನ್ನ ಒಂದು ದಿನಕ್ಕೆ ಮಾರುತ್ತಿದ್ದ ಆಭರಣಗಳು ಈಗ ಒಂದು ತಿಂಗಳಿಗೂ ಮಾರುತ್ತಿಲ್ಲ. ಚಿನ್ನ– ಬೆಳ್ಳಿ ದರಗಳು ₹1 ಲಕ್ಷ ದಾಟಬಹುದು ಎಂದು ನಾವು ಊಹಿಸಲೂ ಇಲ್ಲ. ಆದರೆ, ಈಗ ಕೆಜಿ ಬೆಳ್ಳಿಯ ದರವೇ ₹4.20 ಲಕ್ಷ ಮೀರಿದೆ. ನಮ್ಮ ಕಾರ್ಖಾನೆಯಲ್ಲಿದ್ದ ಕೆಲಸಗಾರರನ್ನು ಬಿಡಿಸಿದ್ದೇವೆ. ಅವರಿಗೆ ತಲಾ ₹700 ಸಂಬಳವಿತ್ತು. ವರ್ಷಪೂರ್ತಿ ಕೆಲಸ ಕೊಡುವುದಾಗಿ ಹೇಳಿದ್ದರಿಂದ ಒಬ್ಬೊಬ್ಬರು ₹2 ಲಕ್ಷ ಮುಂಗಡ ಹಣ ಪಡೆದಿದ್ದಾರೆ. ನಮ್ಮ ₹20 ಲಕ್ಷ ಕಾರ್ಮಿಕರ ಬಳಿ ಇದೆ. ಈಗ ಅದನ್ನು ಕೇಳಲೂ ಆಗುತ್ತಿಲ್ಲ, ಕೆಲಸವನ್ನೂ ನೀಡಲು ಆಗತ್ತಿಲ್ಲ’ ಎಂದು ಬೇಸರಗೊಂಡರು ವಡಗಾವಿಯ ಅಕ್ಕಸಾಲಿಗ ಆನಂದ ಹಾವನೂರ.
ಬೆಳ್ಳಿಯ ಮೂರ್ತಿ, ಗಂಟೆ, ಆರತಿ ತಟ್ಟೆ, ಕರಂಡಿಕೆ, ದೀಪಗಳು, ದೇವರ ಮುಖವಾಡ, ತಾಯತ ಮುಂತಾದ ವಸ್ತುಗಳನ್ನು ತಯಾರು ಮಾಡುತ್ತಿದ್ದ ಕಾರ್ಮಿಕರಿಗೆ ಈಗ ಕೆಲಸವೇ ಇಲ್ಲ ಎನ್ನುವುದು ಅವರ ನೋವು.
ಶೇ 90ರಷ್ಟು ಅಕ್ಕಸಾಲಿಗರಿಗೆ ಬೇರೆ ಕೆಲಸ– ವ್ಯಾಪಾರ ಬರುವುದಿಲ್ಲ. ಕೆಲವು ಕಾರ್ಮಿಕರು ವಡಾ–ಪಾವ್ ಮಾರುವ ಗೂಡಂಗಡಿ ಇಟ್ಟುಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ‘ಬುದ್ಧಿ’ ಕಲಿತ ನಾನು ಕಷ್ಟಕಾಲಕ್ಕೆ ಬರಲಿ ಎಂದು ಒಂದಷ್ಟು ಸಂಗ್ರಹ ಮಾಡಿಕೊಂಡಿದ್ದೆ. ಈಗ ಅದಷ್ಟೇ ಆಧಾರ.ಆನಂದ ಹಾವನೂರ ಅಕ್ಕಸಾಲಿಗ ಬೆಳಗಾವಿ
ದರಗಳು ಕನಿಷ್ಠ ಮೂರು ತಿಂಗಳು ಸ್ಥಿರವಾಗಿ ನಿಲ್ಲದಿರುವುದೂ ದೊಡ್ಡ ಸಮಸ್ಯೆ. ಉದಾಹರಣೆಗೆ; ಜ.25ರಂದು ಒಬ್ಬ ಗ್ರಾಹಕರು 20 ತೊಲಿ ಬಂಗಾರದ ಆರ್ಡರ್ ಕೊಟ್ಟರು. ನಾವು ಆಭರಣ ಸಿದ್ಧಪಡಿಸಿ ಜ.28ಕ್ಕೆ ಕೊಟ್ಟೆವು. ಅಷ್ಟರೊಳಗೆ ಶೇ 20ರಷ್ಟು ದರ ಹೆಚ್ಚಾಗಿದೆ. ಹೆಚ್ಚಾದ ದರ ನಮಗೆ ಹಾನಿ ತಂದಿದೆ. ಹೀಗಾಗಿ ಕಡ್ಡಾಯವಾಗಿ ಪೂರ್ಣ ಹಣ ಪಾವತಿಸಬೇಕು ಎಂದು ಅಂಗಡಿಗೆ ಬೋರ್ಡ್ ಹಾಕಿದ್ದೇವೆ.ರಂಗನಾಥ ಚಿಪ್ಪಲಕಟ್ಟಿ ವ್ಯಾಪಾರಿ ಗೋಕಾಕ
ನಮ್ಮ ಕುಟುಂಬ ಹಾಗೂ ಐವರು ಕಾರ್ಮಿಕರು ಸೇರಿ ಪ್ರತಿ ವರ್ಷ ಕನಿಷ್ಠ 300 ಕೆ.ಜಿ ಬೆಳ್ಳಿಯ ಸಾಮಗ್ರಿ ಮಾರಾಟ ಮಾಡುತ್ತಿದ್ದೇವು. ಕಳೆದ ಮೂರು ತಿಂಗಳಿನಿಂದ ಒಂದು ಗ್ರಾಂ ಕೂಡ ಬೇಡಿಕೆ ಬಂದಿಲ್ಲ. ಚಿನ್ನದ ದರ ಏರುವುದು ಸಹಜವೇ. ಆದರೆ ಬೆಳ್ಳಿಯ ದರವೂ ಈಗ ವಿಪರೀತ ಏರಿದ್ದರಿಂದ ನಮ್ಮ ಬದುಕೂ ಕಷ್ಟಕ್ಕೆ ಸಿಲುಕಿದೆ.ಪ್ರಫುಲ್ ಕಮತೆ ಅಕ್ಕಸಾಲಿಗ ಮಾಂಗೂರ
ನಮಗೆ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ತಯಾರು ಮಾಡಲು ಮಾತ್ರ ಬರುತ್ತದೆ. ಇದನ್ನು ಬಿಟ್ಟರೆ ಬೇರೆ ಉದ್ಯೋಗ ಏನೂ ಬರುವುದಿಲ್ಲ. ವ್ಯಾಪಾರವೂ ಸಾಧ್ಯವಿಲ್ಲ. ಆದರೆ ಬೆಳ್ಳಿ ದುಬಾರಿ ಆದಾಗಿನಿಂದ ಮಾಲೀಕರಿಗೆ ಆರ್ಡರ್ ಬರುತ್ತಿಲ್ಲ. ಕೆಲಸವಿಲ್ಲದೇ ನಾವು ಕೂಡ ಖಾಲಿ ಕುಳಿತಿದ್ದೇವೆ. ಈಗ ವಡಾಪಾವ್ ಮಾರಾಟ ಮಾಡಬೇಕು ಎಂದು ಯೋಚಿಸಿದ್ದೇನೆ.ವಿಶ್ವನಾಥ ಪತ್ತಾರ ಸರಾಫ್ ಬಜಾರ್ ಬೆಳಗಾವಿ
* * *
Cut-off box -
ನಿಪ್ಪಾಣಿ ತಾಲ್ಲೂಕಿನ ಮಾಂಗೂರು ಗ್ರಾಮವು ಬೆಳ್ಳಿ ಸಾಮಗ್ರಿಗಳ ತಯಾರಿಕೆಯನ್ನೇ ನಂಬಿಕೊಂಡ ಊರು. 10 ಸಾವಿರ ಜನಸಂಖ್ಯೆ ಇರುವ ಈ ಊರಿನಲ್ಲಿ ಶೇ 80ಕ್ಕೂ ಹೆಚ್ಚು ಕುಟುಂಬಗಳು ಬೆಳ್ಳಿಯನ್ನೇ ನಂಬಿವೆ. 200ಕ್ಕೂ ಹೆಚ್ಚು ಯೂನಿಟ್ (ಚಿಕ್ಕ ಕಾರ್ಖಾನೆ) ಇಲ್ಲಿವೆ. ಬೆಳ್ಳಿ ದರ ಗಗನಕ್ಕೇರಿದ್ದರಿಂದ ಊರಿನ ಜನ ಕೆಲಸವಿಲ್ಲದೇ ಕಂಗಾಲಾಗಿದ್ದಾರೆ. ಮಾಂಗೂರು ಮಾತ್ರವಲ್ಲ; ಸುತ್ತಲಿನ ಕಾರದಗಾ ಬಾರವಾಡ ಕುನ್ನೂರ ಗ್ರಾಮಗಳದ್ದೂ ಇದೇ ಕಥೆ.
ಈ ಹಳ್ಳಿಗಳು ಮಹಾರಾಷ್ಟ್ರದ ಗಡಿಗೆ ಅಂಟಿಕೊಂಡಿವೆ. ಮುಂಬೈ ಪುಣೆ ಕೊಲ್ಹಾಪುರ ಸೊಲ್ಲಾಪುರ ಮೀರಜ್ ಬಹುಪಾಲು ಚಿನ್ನ– ಬೆಳ್ಳಿ ವ್ಯಾಪಾರಿಗಳು ಈ ಊರುಗಳ ಕಾರ್ಮಿಕರನ್ನೇ ಅವಲಂಬಿಸಿದ್ದಾರೆ. ಇವರಿಗೆ ಬೇಡಿಕೆ ಬರುವುದೂ ಮಹಾರಾಷ್ಟ್ರದಿಂದ ಸರಬರಾಜು ಆಗುವುದೂ ಅಲ್ಲಿಗೇ. ಮಾಂಗೂರಿನ ಪ್ರತಿ ಮನೆಯಲ್ಲಿ ಬೆಳ್ಳಿಯ ಸಾಮಗ್ರಿ ತಯಾರು ಮಾಡುವ ಸಣ್ಣ ಘಟಕಗಳಿವೆ. ಕುಟುಂಬದ ಸದಸ್ಯರ ಜತೆಗೆ ಐದಾರು ಕೆಲಸಗಾರರನ್ನು ಇಟ್ಟುಕೊಂಡು ಪುಟ್ಟ ಕಾರ್ಖಾನೆಗಳನ್ನು ಅವರು ನಡೆಸುತ್ತಿದ್ದರು. ಕಳೆದ ದೀಪಾವಳಿಯ ನಂತರ ಬೆಳ್ಳಿಯ ದರ ಊಹೆಗೂ ಮೀರಿ ಹೆಚ್ಚಾಗಿದೆ.
ಇದರಿಂದ ‘ಆರ್ಡರ್’ಗಳು ಬಂದ್ ಆಗಿವೆ. ಮೂರು ತಿಂಗಳಿಂದ ಅಕ್ಕಸಾಲಿಗರಿಗೆ ಕೆಲಸವಿಲ್ಲ. ಅದರಲ್ಲಿ ಕೆಲವರು ಮುಂಬೈ ಪುಣೆ ಕಡೆಗೆ ಬೇರೆ ಉದ್ಯೋಗ ಅರಸಿ ವಲಸೆ ಹೋದರೆ ಮತ್ತೆ ಕೆಲವರು ಹೊಲಗಳತ್ತ ಮುಖ ಮಾಡಿದ್ದಾರೆ. ಬೇರೆ ಯಾವುದೂ ಕೆಲಸ ಬಾರದವರು ದಿನದೂಡುವುದೇ ದುಸ್ತರವಾಗಿದೆ. ‘ಬೆಳ್ಳಿ ಕಾಲುಂಗುರ ಕಾಲುಚೈನು ಕೈಗಡ ಬಳೆ ಕಾಲ್ಗಡ ಕುಂಕುಮ ಭರಣಿ ಬೆಳ್ಳಿ ತಟ್ಟೆ ಮುಂತಾದ 15ಕ್ಕೂ ಹೆಚ್ಚು ನಮೂನೆಯ ವಸ್ತುಗಳನ್ನು ಈ ಊರಿನ ಜನ ತಯಾರು ಮಾಡುವ ಕೌಶಲ ಹೊಂದಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನಮ್ಮ ಬಳಿ 20 ಮಂದಿ ಕೆಲಸಕ್ಕೆ ಇದ್ದರು. ಈಗ ಮನೆಯ ಸದಸ್ಯರಿಗೇ ಕೆಲಸವಿಲ್ಲ’ ಎನ್ನುತ್ತಾರೆ ಮಾಂಗೂರಿನ ವಿನೋದ ಪಾಟೀಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.