
ಸವದತ್ತಿ: 44 ವರ್ಷಗಳ ಬಳಿಕ ನಡೆಸಲಾಗುತ್ತಿರುವ ಗ್ರಾಮದೇವಿ ಜಾತ್ರಾ ಮಹೋತ್ಸವವನ್ನು 2026ರ ಮೇ 4ರಿಂದ 12ರ ವರೆಗೆ ಅದ್ದೂರಿಯಾಗಿ ನಡೆಸಲು ಇಲ್ಲಿನ ಮಾಮನಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿದ ತೃತೀಯ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಾತ್ರಾ ಮಹೋತ್ಸವದ ಗೌರವಾಧ್ಯಕ್ಷ ಹಾಗೂ ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ‘ಜಾತ್ರೆಗೆ ಅವಶ್ಯವಿರುವ ಅಭಿವೃದ್ಧಿಗಾಗಿ ಈಗಾಗಲೇ 1.5 ಕೋಟಿ ಅನುದಾನವನ್ನು ಸರ್ಕಾರದಿಂದ ಅನುಮೋದಿಸಲಾಗಿದೆ. ರಸ್ತೆ, ಚರಂಡಿ, ದೇವಸ್ಥಾನ ಅಭಿವೃದ್ಧಿ ಹಾಗೂ ಅವಶ್ಯವಿರುವ ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸಲು ಅಧಿಕಾರಿಗಳಿಗೆ ಸೂಚಿಲಾಗಿದೆ. ವೈಯಕ್ತಿಕವಾಗಿಯೂ ಸಹಕರಿಸಲಾಗುವದು. ಸುತ್ತಲಿನ ಗ್ರಾಮಗಳ ಹಾಗೂ ನಗರದ ಹಿರಿಯರು ಒಟ್ಟಾಗಿ ಜಾತ್ರೆಯನ್ನು ಸಂಭ್ರಮದಿಂದ ಆಚರಿಸೋಣ’ ಎಂದು ಹೇಳಿದರು.
ಜಾತ್ರಾ ಮಹೋತ್ಸವದ ರೈತ ಪ್ರಮುಖ ಅಡಿವೆಪ್ಪ ಬೀಳಗಿ ಮಾತನಾಡಿ, ‘ಹಲವು ಪ್ರಮುಖರಿಗೆ ಆಯಾ ಮಹತ್ವದ ಕಾರ್ಯಗಳನ್ನು ನೀಡಿ ಜಾತ್ರೆ ಯಶಸ್ವಿಗೊಳಿಸಲು ತಿಳಿಸಲಾಗಿದೆ. ಜಾತ್ರೆಯ 9 ದಿನಗಳ ಪರ್ಯಂತ ಜರುಗಲಿರುವ ವಿವಿಧ ಧಾರ್ಮಿಕ ಕಾರ್ಯಗಳಿಗೆ ಎಲ್ಲರ ಸಹಕಾರ ಅವಶ್ಯ. ನಂತರ ಒಂದು ವರ್ಷದವರೆಗೆ ಗೃಹಪ್ರವೇಶ, ಮದುವೆ ಇತರ ದೇವಕಾರ್ಯಗಳನ್ನು ಮುಂದೂಡುವಂತೆ ತೀರ್ಮಾನಿಸಲಾಗಿದ್ದು ಸಾರ್ವಜನಿಕರು ಸಹಕರಿಸಬೇಕು’ ಎಂದು ಮನವಿ ಮಾಡಿದರು.
ಜಾತ್ರಾ ಕಮಿಟಿ ಅಧ್ಯಕ್ಷ ವಿರೂಪಾಕ್ಷ ಮಾಮನಿ ಮಾತನಾಡಿ, ‘ನಗರದ ಪ್ರತಿ ಗಲ್ಲಿಗೂ ಐವರು ಪುರುಷ ಹಾಗೂ ಐವರು ಮಹಿಳೆಯರನ್ನು ಸಲಹಾ ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಲು ತೀರ್ಮಾನಿಸಲಾಗಿದೆ. ಖಜಾಂಚಿ ಸೇರಿ ಎಲ್ಲ ಪ್ರಮುಖ ಕಾರ್ಯ ನೆರವೇರಿಸಲು ಅವಶ್ಯ ಸದಸ್ಯರನ್ನು ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು.
‘ಜಾತ್ರೆಯ ಸಕಲ ಸಿದ್ಧತೆಗಳನ್ನು ಶೀಘ್ರದಲ್ಲೇ ಅಚ್ಚುಕಟ್ಟಾಗಿ ನಡೆಸಲು ಸಕಲರು ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವದು ಸಂಭ್ರಮದ ಸಂಕೇತವಾಗಿದೆ. ಗ್ರಾಮದೇವಿ ದೇವಸ್ಥಾನ ಹಾಗೂ ದ್ಯಾಮವ್ವ ದೇವರ ಕಟ್ಟೆಯ ಅಭಿವೃದ್ಧಿ ಭಕ್ತರು ನೀಡಿದ ಕಾಣಿಕೆಯಿಂದ ನಡೆಯಲಿ. ರಸ್ತೆ, ಚರಂಡಿ, ಸ್ವಚ್ಛತೆ ಸೇರಿ ನಗರದ ಪ್ರಮುಖ ದೇವಸ್ಥಾನಗಳ ಅಭಿವೃದ್ಧಿ ಸರ್ಕಾರದಿಂದ ನಡೆಸುವಂತಾಗಲಿ’ ಎಂದು ತಿಳಿಸಿದರು.
16 ರೈತ ಮನೆತನದ ಪ್ರಮುಖರು, ಬಾಬುದಾರರು, ಕೆ.ಕೆ. ಪುಣೇದ, ಲಕ್ಷ್ಮಣರಾವ ಕುಲಕರ್ಣಿ, ಬಸವರಾಜ ಅರಮನಿ, ಮಂಜುನಾಥ ಪಾಚಂಗಿ, ಬರಮಪ್ಪ ಅಣ್ಣಿಗೇರಿ, ಡಾ. ಎನ್.ಸಿ. ಬೆಂಡಿಗೇರಿ, ಶ್ರೀಶೈಲ ಮುತಗೊಂಡ, ಎಮ್.ಕೆ. ಬೇವೂರ, ಮಲ್ಲು ಬೀಳಗಿ, ಯಲ್ಲಪ್ಪ ಗೊರವನಕೊಳ್ಳ, ನಿಂಗಪ್ಪ ಮೇಟಿ, ಬಸವರಾಜ ಆಯಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.