ಭರಮಗೌಡ (ರಾಜು) ಕಾಗೆ ಮತ್ತು ಅಭಯ ಪಾಟೀಲ
ಬೆಳಗಾವಿ: ‘ತಮ್ಮ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಂದಿಲ್ಲ ಎಂದು ಕಾಂಗ್ರೆಸ್‌ನ ಶಾಸಕ ರಾಜು ಕಾಗೆ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ವಾಸ್ತವವಾಗಿ ಮುಖ್ಯಮಂತ್ರಿಗಳು ನಿಮಗೆ ಬೋಗಸ್ ಪತ್ರ ನೀಡಿ ಸಮಾಧಾನದಿಂದ ಇರುವಂತೆ ಹೇಳಿದ್ದಾರೆ. ಒಂದುವೇಳೆ ಅನುದಾನ ನೀಡಿದ್ದು ನಿಜವಾಗಿದ್ದರೆ, ನೀವು ಲಂಚ ಕೊಟ್ಟಿಲ್ಲ. ಅದಕ್ಕಾಗಿ ಹಣ ಬಿಡುಗಡೆಯಾಗಿಲ್ಲ’ ಎಂದು ಶಾಸಕ ಅಭಯ ಪಾಟೀಲ ಲೇವಡಿ ಮಾಡಿದರು.
ಇಲ್ಲಿ ಸೊಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜು ಕಾಗೆ ಸತ್ಯವನ್ನೇ ಹೇಳಿದ್ದಾರೆ. ಕಾಂಗ್ರೆಸ್‌ನ ಶಾಸಕರು ಪ್ರತಿನಿಧಿಸುವ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗಿಲ್ಲ ಎಂದರೆ ಏನರ್ಥ. ಮುಖ್ಯಮಂತ್ರಿಗಳ ವಿಶೇಷ ಅನುದಾನವೇ ಬೋಗಸ್ ಇರುವಾಗ, ಬೇರೆ ಯೋಜನೆಗಳ ಅನುದಾನ ಹೇಗೆ ಬರುತ್ತದೆ. ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ’ ಎಂದು ಒತ್ತಾಯಿಸಿದರು.
‘ಹಿಂದಿನ ಬಿಜೆಪಿ ಸರ್ಕಾರ ಬಿಡುಗಡೆಗೊಳಿಸಿದ್ದ ಅನುದಾನ ಬಳಸಿಕೊಂಡು ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಕೈಗೊಂಡಿದ್ದೇನೆ. ಕೆಲವು ಯೋಜನೆಗಳಡಿ ಬಿಜೆಪಿ ಸರ್ಕಾರ ಕೊಟ್ಟಿದ್ದ ಅನುದಾನವನ್ನೂ ಈಗಿನ ಸರ್ಕಾರ ವಾಪಸ್ ಪಡೆದಿದೆ. ಜನರು ಸರ್ಕಾರದ ವಿರುದ್ಧ ತಿರುಗಿಬೀಳುವ ಸ್ಥಿತಿ ನಿರ್ಮಾಣವಾಗಿದ್ದು, ಮುಂಬರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರಕ್ಕೆ ಕಪ್ಪು ಬಾವುಟ ತೋರಿಸುತ್ತೇವೆ’ ಎಂದು ಎಚ್ಚರಿಕೆ ಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.