ADVERTISEMENT

ಬೆಳಗಾವಿ: ಕೋವಿಡ್ ಲಸಿಕೆ ಸಂಗ್ರಹಕ್ಕೆ ಸಿದ್ಧತೆ

ಪ್ರತ್ಯೇಕ ಕೂಲರ್‌, ರೆಫ್ರಿಜರೇಟರ್ ವ್ಯವಸ್ಥೆ

ಎಂ.ಮಹೇಶ
Published 5 ನವೆಂಬರ್ 2020, 14:42 IST
Last Updated 5 ನವೆಂಬರ್ 2020, 14:42 IST
ಬೆಳಗಾವಿಯಲ್ಲಿ ಕೋವಿಡ್–19 ಲಸಿಕೆ ಸಂಗ್ರಹಿಸಲು ಗುರುತಿಸಿರುವ ಸ್ಥಳ
ಬೆಳಗಾವಿಯಲ್ಲಿ ಕೋವಿಡ್–19 ಲಸಿಕೆ ಸಂಗ್ರಹಿಸಲು ಗುರುತಿಸಿರುವ ಸ್ಥಳ   

ಬೆಳಗಾವಿ: ಜಿಲ್ಲೆಗೆ ಸರ್ಕಾರದಿಂದ ಪೂರೈಕೆಯಾಗಲಿರುವ ಕೋವಿಡ್–19 ಲಸಿಕೆಗಳನ್ನು ಸುರಕ್ಷಿತ ಹಾಗೂ ವೈಜ್ಞಾನಿಕವಾಗಿ ಸಂಗ್ರಹಿಸಿಡಲು ಆರೋಗ್ಯ ಇಲಾಖೆಯಿಂದ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

‘ಲಸಿಕೆ ಯಾವಾಗ ಬರುತ್ತದೆ ಎನ್ನುವ ಮಾಹಿತಿ ಇಲ್ಲ. ಆದರೆ, ಸಂಗ್ರಹಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ವ್ಯಾಕ್ಸಿನ್ ಡಿಪೊದಲ್ಲಿರುವ ನಮ್ಮ ಕಚೇರಿಯಲ್ಲಿ ಪ್ರತ್ಯೇಕ ಲಸಿಕಾ ಕೊಠಡಿ (ವಾಕ್‌ ಇನ್ ಕೂಲರ್, ವಾಕ್‌ ಇನ್ ಫ್ರೀಜರ್ ಇರುವಂಥ) ಸಿದ್ಧಪಡಿಸಲಾಗುತ್ತಿದೆ. ಅಲ್ಲಿ ಸಂಪೂರ್ಣ ಹವಾ ನಿಯಂತ್ರಣ ಸೌಲಭ್ಯದ ಮೂಲಕ ಲಸಿಕೆಗಳನ್ನು ಸಂಗ್ರಹಿಸಿಡಲಾಗುವುದು’ ಎಂದು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯಕ್ಕೆ ವ್ಯಾಕ್ಸಿನ್ ಡಿಪೊದಲ್ಲಿ ತಲಾ ಒಂದು ವಾಕ್‌ ಇನ್ ಕೂಲರ್ ಹಾಗೂ ವಾಕ್ ಇನ್ ಫ್ರೀಜರ್‌ ಲಭ್ಯವಿದೆ. ತಲಾ ಇನ್ನೊಂದನ್ನು ದೆಹಲಿಯಿಂದ ತರಿಸಲಾಗುತ್ತಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಜಿಲ್ಲಾ ಲಸಿಕಾ ಸ್ಟೋರ್‌ಗೆಂದು 4ಸಾವಿರ ಚ.ಅಡಿ ಜಾಗದಲ್ಲಿ ಕಟ್ಟಡ ನಿರ್ಮಿಸಿದ್ದೇವೆ. ಅದನ್ನು ಕೋವಿಡ್ ಲಸಿಕೆ ಸಂಗ್ರಹಿಸಲೆಂದು ಬಳಸಲಾಗುವುದು. ಕೆಲವೇ ದಿನಗಳಲ್ಲಿ ಕಟ್ಟಡದಲ್ಲಿ ಎಲ್ಲ ಸಿದ್ಧತೆ ಪೂರ್ಣಗೊಳ್ಳಲಿದೆ’ ಎಂದು ಜಿಲ್ಲಾ ಸಂತಾನೋತ್ಪತಿ ಮತ್ತು ಮಕ್ಕಳ ಅಧಿಕಾರಿ (ಆರ್‌ಸಿಎಚ್‌) ಡಾ.ಐ.ಪಿ. ಗಡಾದ ಮಾಹಿತಿ ನೀಡಿದರು.

ADVERTISEMENT

ಸಂಗ್ರಹ ಸಾಮರ್ಥ್ಯ:‘ಪ್ರಸ್ತುತ 12 ಲಕ್ಷ ಡೋಸ್ ಲಸಿಕೆಯನ್ನು ಸಂಗ್ರಹಿಸಬಹುದಾದ ಸಾಮರ್ಥ್ಯವಿದೆ. ಹೊಸದಾಗಿ ಕೂಲರ್ ಹಾಗೂ ಫ್ರೀಜರ್ ಬಂದರೆ ಸಾಮರ್ಥ್ಯ ದ್ವಿಗುಣಗೊಳ್ಳಲಿದೆ. 180 ಪಿಎಚ್‌ಸಿ, ಸಿಎಚ್‌ಸಿ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಸರಾಸರಿ 140ರಿಂದ 160 ಲೀಟರ್‌ ಸಾಮರ್ಥ್ಯದ ತಲಾ ಎರಡು ಘಟಕ ಐಎಲ್‌ಆರ್‌ (ಐಸ್ ಲೈನ್ಡ್ ರೆಫ್ರಿಜರೇಟರ್) ಸೌಲಭ್ಯವಿದೆ. ವಿದ್ಯುತ್‌ ಕೈಕೊಟ್ಟ ಪಕ್ಷದಲ್ಲಿ 72 ಗಂಟೆಗಳವರೆಗೂ ತೊಂದರೆ ಆಗದಂತೆ ವ್ಯವಸ್ಥೆ ಇದೆ. ಜಿಲ್ಲೆಯಾದ್ಯಂತ 180 ಕೋಲ್ಡ್‌ ಚೈನ್ ಸಿಸ್ಟಂ ಮಾಡಿಕೊಳ್ಳಲಾಗಿದೆ. ಈ ಮೂಲಕ ತಾಪಮಾನ ಏರುಪೇರಾಗದಂತೆ ನೋಡಿಕೊಳ್ಳಲಾಗುವುದು’ ಎಂದು ವಿವರಿಸಿದರು.

‘ಸಂಗ್ರಹ ಕೊಠಡಿಯಲ್ಲಿ 2ರಿಂದ 8 ಡಿಗ್ರಿ ತಾಪಮಾನ ಇರುವಂತೆ ನೋಡಿಕೊಳ್ಳುವುದಕ್ಕೂ ಸಿದ್ಧತೆ ನಡೆದಿದೆ. ವಿಶ್ವಸಂಸ್ಥೆಯ ಯುಎನ್‌ಡಿಪಿ ಯೋಜನೆಯಲ್ಲಿ ಆನ್‌ಲೈನ್‌ನಲ್ಲಿ ತಾಪಮಾನ ನಿಗಾಕ್ಕೆ ವ್ಯವಸ್ಥೆ ಮಾಡಲಾಗಿದೆ. ತಾಪಮಾನದಲ್ಲಿ ಏರುಪೇರು ಉಂಟಾದರೆ ನಿಯೋಜಿಸಿದ್ದ ಫಾರ್ಮಸಿಸ್ಟ್‌ಗಳ ಮೊಬೈಲ್‌ ಫೋನ್‌ಗೆ ಅಲರ್ಟ್‌ ಮೆಸೇಜ್ ಬರುತ್ತದೆ. ದಿನದ 24 ಗಂಟೆಯೂ ಇದು ಕಾರ್ಯನಿರ್ವಹಿಸುತ್ತದೆ. ತಾಪಮಾನ ಕಾಯ್ದುಕೊಳ್ಳುವುದು ಇದರ ಉದ್ದೇಶವಾಗಿದೆ’ ಎನ್ನುತ್ತಾರೆ ಅವರು.

‘ಲಸಿಕೆಗಳ ಸಾಗಣೆಗೆ ಸದ್ಯ ಒಂದು ವ್ಯಾನ್ ಲಭ್ಯವಿದೆ. ಇನ್ನೊಂದು ರೆಫ್ರಿಜರೇಟರ್‌ ವಾಹನಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಪ್ರತಿ ಪಿಎಚ್‌ಸಿಗಳಲ್ಲೂ 1500ಕ್ಕೂ ಹೆಚ್ಚು ಐಸ್ ಪ್ಯಾಕ್‌ಗಳು ಲಭ್ಯ ಇವೆ. ಲಸಿಕೆ ಸಂಗ್ರಹ ಹಾಗೂ ಸಾಗಣೆಗೆ ಬೇಕಾದ ಎಲ್ಲ ಪೂರ್ವ ಸಿದ್ಧತೆಯನ್ನೂ ಮಾಡಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಮೊದಲಿಗೆ ಆರೋಗ್ಯ ಸಿಬ್ಬಂದಿಗೆ

ಲಸಿಕೆಯನ್ನು ಮೊದಲಿಗೆ ಆರೋಗ್ಯ ಸಿಬ್ಬಂದಿಗೆ ಅಂದರೆ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಹಂತದ ನೌಕರರಿಗೆ ನೀಡಲು ಯೋಜಿಸಲಾಗಿದೆ.

‘ಈ ಕಾರಣದಿಂದ ಜಿಲ್ಲೆಯಲ್ಲಿರುವ ನೋಂದಾಯಿತ 1,312 ಖಾಸಗಿ ಆಸ್ಪತ್ರೆಗಳು, 185 ಸರ್ಕಾರಿ ಆರೋಗ್ಯ ಸಂಸ್ಥೆಗಳ ಸಿಬ್ಬಂದಿಯ ಮಾಹಿತಿಯನ್ನು ಆರೋಗ್ಯ ಇಲಾಖೆಯಿಂದ ಕಲೆ ಹಾಕಲಾಗುತ್ತಿದೆ. ಬಹುತೇಕ ಆಸ್ಪತ್ರೆಗಳವರು ಮಾಹಿತಿ ಒದಗಿಸಿದ್ದಾರೆ. 185 ಆಸ್ಪತ್ರೆಗಳಿಂದ ಮಾಹಿತಿ ಬರುವುದು ಬಾಕಿ ಇದೆ. 45 ಖಾಸಗಿ ಆಸ್ಪತ್ರೆಗಳವರು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಅವರಿಗೆ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಸೂಚನೆ ನೀಡುವ ಸಾಧ್ಯತೆ ಇದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.