ADVERTISEMENT

ಬೆಳಗಾವಿ: ಹಿಜಾಬ್‌ ಧರಿಸಲು ಅವಕಾಶ ಕೊಡುವಂತೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 6:49 IST
Last Updated 7 ಫೆಬ್ರುವರಿ 2022, 6:49 IST
ಹಿಜಾಬ್‌ ಧರಿಸಲು ಅವಕಾಶ ಕೊಡುವಂತೆ ಪ್ರತಿಭಟನೆ
ಹಿಜಾಬ್‌ ಧರಿಸಲು ಅವಕಾಶ ಕೊಡುವಂತೆ ಪ್ರತಿಭಟನೆ   

ಬೆಳಗಾವಿ: 'ಶಾಲಾ–ಕಾಲೇಜುಗಳಲ್ಲಿ ನಮ್ಮ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಲು ಅವಕಾಶ ಕೊಡಬೇಕು' ಎಂದು ಆಗ್ರಹಿಸಿ ಹಾಗೂ ಕಡ್ಡಾಯವಾಗಿ ಸಮವಸ್ತ್ರ ಸಂಹಿತೆ ಪಾಲಿಸುವಂತೆ ಸರ್ಕಾರ ಹೊರಡಿಸಿರುವ ಆದೇಶ ಖಂಡಿಸಿ ಅಖಿಲ ಭಾರತ ಮಜಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ನೇತೃತ್ವದಲ್ಲಿ ಮುಸ್ಲಿಮರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

'ಹಿಜಾಬ್ ಧರಿಸುವುದು ನಮ್ಮ ಮೂಲಭೂತ ಹಕ್ಕು. ಆದರೆ, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳಿಗೆ ತರಗತಿಗೆ ಹೋಗಲು ರಾಜಕೀಯ ಕಾರಣಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ. ಸರ್ಕಾರದ ಈ ನಡೆ ಸರಿಯಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಹಿಜಾಬ್ ಸಮಾಜಕ್ಕೆ ಉತ್ತಮ ಸಂದೇಶ ಸಾರುತ್ತದೆ. ಹಾಗಾಗಿ ಹಿಜಾಬ್ ಧರಿಸಿಯೇ ನಮ್ಮ ವಿದ್ಯಾರ್ಥಿನಿಯರು ಶಾಲಾ-ಕಾಲೇಜಿಗೆ ಹೋಗುತ್ತಾರೆ. ಮುಂದೆಯೂ ಅದನ್ನು ಪಾಲಿಸುತ್ತಾರೆ. ಹಾಗಾಗಿ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು' ಎಂದು ಆಗ್ರಹಿಸಿದರು.

ADVERTISEMENT

ಮಹಿಳೆಯರು, ಪುರುಷರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. 'ಭಾರತ ಬಿಡುವುದಿಲ್ಲ; ಪಾಕಿಸ್ತಾನಕ್ಕೆ ಹೋಗುವುದಿಲ್ಲ' ಎಂದು ಘೋಷಣೆ ಕೂಗಿದರು.

ಮೌಲಾನಾ ಸಲೀಂ, ಮೌಲಾನಾ ಆರೀಫ್, ಮುಫ್ತಿ ಕಾಶೀಮ್, ಆಜಾದ್ ಮುಲ್ಲಾ, ಇಮ್ರಾನ್ ಪೀರಜಾದೆ, ಲತೀಫ್‌ ಪಠಾಣ, ಫಜಲ್ ಪಠಾಣ, ಶಾಹೀನ್ ಶೇಖ್, ತಮನ್ನಾ ಸನದಿ, ಶಮೀನಾ ಅನ್ಸಾರಿ, ಶಬಾನಾ ಚೋಪದಾರ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.