ADVERTISEMENT

ಯಲ್ಲಮ್ಮನ ಗುಡ್ಡದಲ್ಲಿ ಹೊಸ್ತಿಲ ಹುಣ್ಣಿಮೆ ಆಚರಣೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 11:35 IST
Last Updated 30 ಡಿಸೆಂಬರ್ 2020, 11:35 IST
ಯಲ್ಲಮ್ಮನಗುಡ್ಡದಲ್ಲಿ ಹೊಸ್ತಿಲ ಹುಣ್ಣಿಮೆ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು
ಯಲ್ಲಮ್ಮನಗುಡ್ಡದಲ್ಲಿ ಹೊಸ್ತಿಲ ಹುಣ್ಣಿಮೆ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು   

ಉಗರಗೋಳ (ಸವದತ್ತಿ ತಾ.): ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಬುಧವಾರ ಹೊಸ್ತಿಲ ಹುಣ್ಣಿಮೆ ಆಚರಿಸಲಾಯಿತು.

ಕೋವಿಡ್ ಹಿನ್ನೆಲೆಯಲ್ಲಿ ರೇಣುಕಾ ಯಲ್ಲಮ್ಮ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿತ್ತು. ಅಗತ್ಯ ಸುರಕ್ಷತಾ ಕ್ರಮ ಕೈಗೊಂಡು ಅಧಿಕಾರಿಗಳು, ಗಣ್ಯರು ಹಾಗೂ ಅರ್ಚಕರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಮಂಗಳವಾರ ದೇವಿಯ ಕಂಕಣ ಮಂಗಳಸೂತ್ರ ವಿಸರ್ಜನೋತ್ಸವ ಜರುಗಿತು. ಬುಧವಾರ ಹೊಸ್ತಿಲ ಹುಣ್ಣಿಮೆಯಂದು ಲೋಕ ಕಲ್ಯಾಣಾರ್ಥವಾಗಿ ಹೋಮ ಹಾಗೂ ಪೂರ್ಣಾಹುತಿ, ಮಹಾಮಂಗಳಾರತಿ ನೆರವೇರಿತು.

ADVERTISEMENT

10 ತಿಂಗಳಿಂದ ದೇವಸ್ಥಾನಕ್ಕೆ ಪ್ರವೇಶವಿಲ್ಲದಿದ್ದರೂ ಸಹ ಭಕ್ತರು ದೇವಿಯ ನಾಮಸ್ಮರಣೆ ಮಾಡುತ್ತಿದ್ದ ದೃಶ್ಯಗಳು ಸವದತ್ತಿ, ಧಾರವಾಡ ರಸ್ತೆ, ಉಗರಗೋಳ, ಮುನವಳ್ಳಿ ಹಾಗೂ ಜೋಗಳಬಾವಿ ಸುತ್ತಮುತ್ತ ಕಂಡುಬಂದವು.

‘ಪ್ರತಿ ವರ್ಷ ಯಲ್ಲಮ್ಮದೇವಿಯ ತವರು ಮನೆಯಾದ ಹರಳಕಟ್ಟಿಯಿಂದ ನೂರಾರು ಗ್ರಾಮಸ್ಥರು, ಹಿರಿಯರು ಸೇರಿಕೊಂಡು ವಾದ್ಯಮೇಳದೊಂದಿಗೆ ಸೀರೆ, ದಂಡಿನ ಮಾಲೆ, ಬಳೆಗಳು, ಅರಿಸಿನ, ಕುಂಕುಮದೊಂದಿಗೆ ಬಂದು ವಿಧಿ ವಿಧಾನಗಳನ್ನು ಪೂರೈಸಲಾಗುತ್ತಿತ್ತು. ಈ ಬಾರಿ ಕೋವಿಡ್ ಕಾರಣದಿಂದ ಗ್ರಾಮದ ಐವರು ಹಿರಿಯರನ್ನು ಮಾತ್ರ ಕಳುಹಿಸಲಾಯಿತು’ ಎಮದು ಮುಖಂಡ ಬಸನಗೌಡ ಗದ್ದಿಗೌಡ್ರ ಹೇಳಿದರು.

ಹೂಲಿಯ ಅಜ್ಜಯ್ಯಶಾಸ್ತ್ರಿ ಹಿರೇಮಠ, ಕೆ.ಎಸ್. ಯಡೂರಯ್ಯ, ಪಿ. ರಾಜಶೇಖರಯ್ಯ, ವೀರೇಶ್ವರ ಶಾಸ್ತ್ರಿ, ಮಹಾಂತೇಶ ಶಾಸ್ತ್ರಿ, ವಿಶ್ವನಾಥಗೌಡ ರೇಣಗೌಡ್ರ ವೈದಿಕತ್ವದಲ್ಲಿ ಕಾರ್ಯಕ್ರಮಗಳು ನಡೆದವು.

ಏಕನಾಥ ಜೋಗಿನಾಥ ಪೀಠಾಧಿಪತಿ ಯೋಗಿ ಶಿವನಾಥ ಬಾಬಾ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಮಾಳಗೆ, ಚಿನ್ಮಯ ಆನಂದ ಮಾಮನಿ, ಕೊಲ್ಹಾಪುರದ ದೇವಸ್ಥಾನಗಳ ಪಶ್ಚಿಮ ಮಹಾರಾಷ್ಟ್ರ ಸಮಿತಿ ವಕೀಲ ಆನಂದಕುಮಾರ ಸಾವಂತ, ಹರಳಕಟ್ಟಿಯ ಅಂದಾನಿಗೌಡ ಗದ್ದಿಗೌಡ್ರ, ಬಾಪುಗೌಡ ಚವನಗೌಡ್ರ, ಮಂಜುನಾಥಗೌಡ ಚವನಗೌಡ್ರ, ಅಲ್ಲಮಪ್ರಭು ಪ್ರಭುನವರ, ಎಎಸ್‌ಐ ಎಸ್.ಆರ್. ಗಿರಿಯಾಲ, ಬಿ. ಬಾರ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.