ಪ್ರಮೋದ ಮುತಾಲಿಕ
ಬೆಳಗಾವಿ: ‘ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಭಾನುವಾರ ನಿಗದಿಯಾಗಿರುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ರದ್ದುಪಡಿಸಬೇಕು’ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಒತ್ತಾಯಿಸಿದರು.
ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೆಹಲ್ಗಾಮ್ ಘಟನೆ ನಡೆದು ಐದು ತಿಂಗಳಷ್ಟೇ ಆಗಿದೆ. ಅದರಲ್ಲಿ ಹತ್ಯೆಯಾದ 26 ಕುಟುಂಬದವರು ಇನ್ನೂ ಕಣ್ಣೀರು ಸುರಿಸುತ್ತಲೇ ಇದ್ದಾರೆ. ಪಾಕ್ ವಿರುದ್ಧ ಅವರ ಸಿಟ್ಟು ಇನ್ನೂ ಜೀವಂತವಾಗಿದೆ. ಹೀಗಿರುವಾಗ ಇಷ್ಟು ಆತುರದಲ್ಲಿ ಪಾಕಿಸ್ತಾನ ತಂಡದೊಂದಿಗೆ ಭಾರತ ತಂಡದವರು ಆಟವಾಡುವ ಅವಶ್ಯಕತೆ ಮತ್ತು ಅನಿವಾರ್ಯತೆ ಏನಿತ್ತು’ ಎಂದು ಪ್ರಶ್ನಿಸಿದರು.
‘ಪಾಕಿಸ್ತಾನ ತಂಡದೊಂದಿಗೆ ಆಟವಾಡಲು ನಮಗೆ ದೇಶಾಭಿಮಾನ ಇಲ್ಲವೇ? ಮತ್ತು ಕೇಂದ್ರ ಸರ್ಕಾರಕ್ಕೆ ಸ್ವಾಭಿಮಾನ ಇಲ್ಲವೇ? ಭಯೋತ್ಪಾದಕ ರಾಷ್ಟ್ರಕ್ಕೆ ಆಟವಾಡಲು ಏಕೆ ಹೋಗಿದ್ದೀರಿ. ಈ ನಾಟಕ ಆಡುವುದನ್ನು ಬಿಡಬೇಕು’ ಎಂದು ಆಗ್ರಹಿಸಿದರು.
‘ಪಾಕಿಸ್ತಾನದ ಜತೆ ಆಟವಾಡುವ ಮಾನಸಿಕತೆ ಏನು? ಕೇವಲ ಹಣದ ಅವಶ್ಯಕತೆಯೇ’ ಎಂದು ಪ್ರಶ್ನಿಸಿದ ಮುತಾಲಿಕ, ‘ನಿಮಗೆ ಹಣ ಬೇಕಾದರೆ ಹೇಳಿ. 100 ಕೋಟಿ ಹಿಂದೂಗಳು ಸೇರಿಕೊಂಡು ಸಾಕಷ್ಟು ಹಣ ನೀಡುತ್ತೇವೆ. ನಾವು ಈ ಪಂದ್ಯ ಬಹಿಷ್ಕರಿಸುತ್ತೇವೆ’ ಎಂದರು.
‘ಹಿಂದೂಗಳ ಸುರಕ್ಷತೆ ದೃಷ್ಟಿಯಿಂದ ದೇಶದಲ್ಲಿ ಮೂರು ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಂತರ, ಎಲ್ಲವನ್ನೂ ಬಹಿಷ್ಕರಿಸಿದ್ದೀರಿ. ಪಾಕ್ ಜತೆಗಿನ ಎಲ್ಲ ಸಂಬಂಧ ಕಡಿತಗೊಳಿಸಿದ್ದೀರಿ. ಈಗ ಕ್ರಿಕೆಟ್ ಆಡುತ್ತಿರುವುದು ದೇಶಕ್ಕೆ ಮಾಡಿದ ದ್ರೋಹ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.