
ಬೆಳಗಾವಿ: ‘ಭಾರತೀಯರ ಬಾಹ್ಯಾಕಾಶ ವಿಜ್ಞಾನ ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಅದರೊಂದಿಗೆ ಜಾಗತಿಕ ಬದಲಾವಣೆಯ ವೇಗವೂ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ದೇಶದ ಯುವಜನರಿಗೆ ಬಾಹ್ಯಾಕಾಶ ವಿಜ್ಞಾನವು ದೊಡ್ಡ ಅವಕಾಶಗಳನ್ನು ತೆರೆದಿದೆ’ ಎಂದು ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್. ಕಿರಣಕುಮಾರ್ ಹೇಳಿದರು.
ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ‘ಭಾರತವು ಈಗ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕಶಕ್ತಿ ಆಗುವತ್ತ ಮುನ್ನುಗ್ಗುತ್ತಿದೆ. ಇಂಥ ಸಂದರ್ಭದಲ್ಲಿ ಅವಕಾಶಗಳೂ ಹೆಚ್ಚುತ್ತಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಸುಸ್ಥಿರ ಅಭಿವೃದ್ಧಿಯ ಪ್ರಯತ್ನಗಳನ್ನು ಮುಂದುವರಿಸಬೇಕಿದೆ’ ಎಂದರು.
‘ಬಾಹ್ಯಾಕಾಶವು ನಮ್ಮ ನಾಲ್ಕನೇ ಗಡಿಯಾಗಿದೆ. ಭೂಮಿ, ಸಮುದ್ರ, ಆಕಾಶಕ್ಕಿಂತ ಹೆಚ್ಚು ಪ್ರಭಾವಿಯಾಗಿದೆ. ನಮ್ಮ ಅನ್ವೇಷಣೆಗಳು ಜ್ಞಾನ, ವ್ಯಾಪಾರ, ಪ್ರವಾಸೋದ್ಯಮ, ವಾಸಸ್ಥಳ ಹಾಗೂ ಶಕ್ತಿ ಉತ್ಪಾದನೆ ಸೇರಿದಂತೆ ವಿವಿಧ ಅವಕಾಶಗಳನ್ನು ಬೆಳೆಸುತ್ತಿವೆ’ ಎಂದು ಹೇಳಿದರು.
‘ಚಂದ್ರಯಾನದ ಯಶಸ್ಸು ಜಗತ್ತಿನ ಮುಂದೆ ಭಾರತದ ದೊಡ್ಡ ಸಾಧನೆಯಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶ ಯಾನ ಸಾಧ್ಯ ಎಂಬುದನ್ನು ನಮ್ಮ ವಿಜ್ಞಾನಿಗಳು ಜಗತ್ತಿಗೆ ತೋರಿಸಿದ್ದಾರೆ. ಸ್ವಾತಂತ್ರ್ಯಾ ನಂತರದ ಭಾರತ ವೈಜ್ಞಾನಿಕ ದಿಕ್ಕು ಬದಲಾಗುವಲ್ಲಿ ಡಾ.ವಿಕ್ರಂ ಸಾರಾಭಾಯಿ ಅವರ ಪಾತ್ರ ದೊಡ್ಡದು. ದೇಶದ ಪುನರುತ್ಥಾನದ ದಿಕ್ಕನ್ನೇ ಅವರು ಬದಲಾಯಿಸಿದರು. ಆರು ದಶಕಗಳಲ್ಲಿ ಭಾರತ ತನ್ನದೇ ಉಪಗ್ರಹಗಳನ್ನು ಮಾತ್ರವಲ್ಲದೆ, 34 ದೇಶಗಳ 400ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾಯಿಸುವ ಮೂಲಕ ದೊಡ್ಡ ಸಾಧನೆ ಮಾಡಿದೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಮಾತನಾಡಿ, ‘ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಬಹಳ ಮಹತ್ವದ್ದು, ಭಾರತ ಸದ್ಯ ಅತಿ ಹೆಚ್ಚು ಯುವ ಸಮೂಹ ಹೊಂದಿದ ದೇಶವಾಗಿದೆ. ಯುವ ಪೀಳಿಗೆ ಕೇವಲ ಉದ್ಯೋಗ ನಿರೀಕ್ಷಿಸದೆ ಉದ್ಯೋಗ ಸೃಷ್ಟಿಸುವ ಮಟ್ಟಕ್ಕೆ ಬೆಳವಣಿಗೆ ಗುರಿ ಹೊಂದಬೇಕು’ ಎಂದರು.
‘ರಾಣಿ ಚನ್ನಮ್ಮ ಅವರ ಹೆಸರಿನಲ್ಲಿ ಸ್ಥಾಪನೆಗೊಂಡ ವಿಶ್ವವಿದ್ಯಾಲಯ ಅವರ ತ್ಯಾಗ ಬಲಿದಾನದ ಸ್ಮರಣಾರ್ಥವಾಗಿದೆ. ವಿದ್ಯಾರ್ಥಿಗಳು ಪದವಿ ನಂತರ ಉನ್ನತ ಸ್ಥಾನ ಪಡೆದು ಭಾರತದ ಏಳಿಗೆಯಲ್ಲಿ ಪಾಲ್ಗೊಳ್ಳಬೇಕು. ಭಾರತ ಈಗ ಕೃಷಿ, ವಿಜ್ಞಾನ, ತಂತ್ರಜ್ಞಾನ ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಮುಂದುವರಿದ ರಾಷ್ಟ್ರವಾಗಿದೆ’ ಎಂದರು.
‘ಪದವಿ ಬಳಿಕ ಪ್ರಮಾಣ ಪತ್ರ ಪಡೆಯುವುದು ಮಾತ್ರವಲ್ಲದೇ ಕಲಿತ ಜ್ಞಾನದಿಂದ ಬಡ ಮತ್ತು ಮಧ್ಯಮ ವರ್ಗದ ಜನರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ದೊಡ್ಡ ಕಂಪನಿಗಳಿಗೆ ಸೇರುವುದಕ್ಕಿಂತ ಸ್ವಯಂ ಉದ್ಯೋಗ ಸೃಷ್ಟಿಯ ಮೂಲಕ ಉತ್ತಮ ವೃತ್ತಿಜೀವನ ಕಟ್ಟಿಕೊಳ್ಳಬೇಕು. ಬಲಿಷ್ಠ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿಗಳು, ಯುವಕರ ಪಾತ್ರ ಬಹು ಮುಖ್ಯವಾಗಿದೆ’ ಎಂದರು.
ಕುಲಪತಿ ಪ್ರೊ.ಸಿ.ಎಂ ತ್ಯಾಗರಾಜ ಅತಿಥಿಗಳನ್ನು ಸ್ವಾಗತಿಸಿದರು. ಕುಲಸಚಿವ ಸಂತೋಷ ಕಾಮಗೌಡರ, ಮೌಲ್ಯಮಾಪನ ಕುಲಸಚಿವ ಪ್ರೊ.ಡಿ.ಎನ್ ಪಾಟೀಲ, ಹಣಕಾಸು ಅಧಿಕಾರಿ ಎಂ.ಎ ಸ್ವಪ್ನ, ಎಲ್ಲ ವಿಭಾಗಗಳ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.
ಮೂವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪರಿಸರ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿವಾಜಿ ಛತ್ರು ಕಾಗಣಿಕರ್ ಶಿಕ್ಷಣ ಸಮಾಜ ಸೇವೆ ಪರಂಪರೆ ಸಂರಕ್ಷಣೆ ಕ್ಷೇತ್ರದಲ್ಲಿ ವಿನೋದ ಸುರೇಂದ್ರ ದೊಡ್ಡಣ್ಣವರ ಹಾಗೂ ಸಾಹಿತ್ಯ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಬಸವರಾಜ ಯಲಿಗಾರ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಒಟ್ಟು 38485 ವಿದ್ಯಾರ್ಥಿಗಳು (36642 ಸ್ನಾತಕ ಹಾಗೂ 1843 ಸ್ನಾತಕೋತ್ತರ) ಪದವಿ 125 ವಿದ್ಯಾರ್ಥಿಗಳು ರ್‍ಯಾಂಕ್ 39 ಮಂದಿಗೆ ಸುವರ್ಣ ಪದಕ 4 ವಿಷಯವಾರು ಅಗ್ರ ಶ್ರೇಯಾಂಕಿತರು ಹಾಗೂ ಒಂದು ನಗದು ಬಹುಮಾನ 28 ಪಿ.ಎಚ್.ಡಿ ಪದವಿಗಳನ್ನು ಪ್ರದಾನ ಮಾಡಲಾಯಿತು.
ಸಿಡಿಮಿಡಿಗೊಂಡ ರಾಜ್ಯಪಾಲ ಘಟಿಕೋತ್ಸವ ಸಮಾರಂಭದಲ್ಲಿ ಶಿಸ್ತು ಪಾಲಿಸದ ಕಾರಣ ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ತುಸು ಸಿಡಿಮಿಡಿಗೊಂಡರು. ವೇದಿಕೆಯಲ್ಲೇ ಚಾಟಿ ಬೀಸಿದರು. ಘಟಿಕೋತ್ಸವಕ್ಕೆ ಅನುಮತಿ ಕೋರಲು ಕುಲಪತಿ ಪ್ರೊ.ತ್ಯಾಗರಾಜ್ ಮುಂದೆ ಬಂದರು. ಸಿಬ್ಬಂದಿಯೊಬ್ಬರು ಅವರ ಕೈಯಲ್ಲಿ ಪೇಪರ್‌ಗಳನ್ನು ಕೊಟ್ಟು ಹಿಂದೆ ಸರಿದರು. ಕುಲಪತಿ ಒಂದು ಕೈಯಲ್ಲಿ ಮೈಕ್ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಪೇಪರ್‌ಗಳನ್ನು ತೆರೆಯಲು ಮುಂದಾದಾಗ ಪೇಪರ್‌ಗಳು ಕೆಳಗೆ ಬಿದ್ದವು. ಆಗ ಕೋಪಗೊಂಡ ರಾಜ್ಯಪಾಲರು ‘ಅವುಗಳನ್ನು ಓಪನ್ ಮಾಡಿ ಕೊಡಿ. ನಾನೇ ಓಪನ್ ಮಾಡಿ ಕೊಡಬೇಕೆ?’ ಎಂದರು.
ಚಿನ್ನ ಬಾಚಿಕೊಂಡ ಬಡವರ ಮಕ್ಕಳು ಒಟ್ಟು 39 ವಿದ್ಯಾರ್ಥಿಗಳು ಚಿನ್ನದ ಬೇಟೆಯಾಡಿದರು. ಅವರಲ್ಲಿ ಹಲವರು ಬಡತನದ ಮೂಲದಿಂದ ಬಂದಿದ್ದು ಅವರ ಸಾಧನೆ ಕಂಡು ಪಾಲಕರು ಕಣ್ಣೀರಾದರು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಉಚನೂರು ಗ್ರಾಮದವರಾದ ವಸಂತ ಮೇಲಿನಮನಿ ಎಂ.ಇಡಿ– ಶಿಕ್ಷಣದಲ್ಲಿ ಚಿನ್ನದ ಪದಕ ಪಡೆದರು. ವಸಂತ ಅವರ ತಂದೆ ತೀರಿಕೊಂಡಿದ್ದು ತಾಯಿಯೇ ಕೂಲಿ ಮಾಡಿ ಅವರನ್ನು ಓದಿಸಿದ್ದಾರೆ. ಅದಕ್ಕೆ ತಕ್ಕಂತೆ ಓದಿನಲ್ಲಿ ಸಾಧನೆ ತೋರಿದ ವಿದ್ಯಾರ್ಥಿ ಚಿನ್ನದ ಪದಕ ಪಡೆದಾಗ ತಾಯಿ ಕಣ್ಣಲ್ಲಿ ಆನಂದ ಬಾಷ್ಪ ಜಿನುಗಿತು. ನೆಟ್ ಕೆಸೆಟ್ ಪಾಸಾಗಿರುವ ವಸಂತ ಉಪನ್ಯಾಸಕರಾಗುವ ಕನಸು ಕಂಡಿದ್ದಾರೆ. ವಿಜಯಪುರದ ಗಾಯತ್ರಿ ಕುಲಕರ್ಣಿ ಎಂ.ಎಸ್‌ಸಿ. ಬಯೊಕೆಮೆಸ್ಟ್ರಿ ವಿಷಯದಲ್ಲಿ ಚಿನ್ನದ ಪದಕ ಪಡೆದರು. ಅವರ ತಂದೆ ಬೋರ್‌ವೆಲ್ ಕೊರೆಸುವ ಖಾಸಗಿ ಕೆಲಸ ಮಾಡಿಕೊಂಡಿದ್ದು ತಾಯಿ ಗೃಹಿಣಿಯಾಗಿದ್ದಾರೆ. ಬಾಲ್ಯದಿಂದಲೂ ಓದಿನಲ್ಲಿ ಮುಂದಿರುವ ಗಾಯತ್ರಿ ಐಎಎಸ್ ಓದುವ ಕನಸು ಕಂಡಿದ್ದಾರೆ. ‘ನಮ್ಮ ಕುಟುಂಬದಲ್ಲಿ ಕಾಲೇಜಿಗೆ ಹೋದ ಮೊದಲನೆಯವಳು ನಾನೇ ಮತ್ತು ಈ ಚಿನ್ನದ ಪದಕವನ್ನು ಸಂಪಾದಿಸಿದ್ದೇನೆ. ನನ್ನ ಪೋಷಕರು ಮತ್ತು ಪ್ರಾಧ್ಯಾಪಕರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಅಪ್ಪ ಟ್ರೇಲರ್ ಅಮ್ಮ ಮನೆ ಕೆಲಸ ಮಾಡುತ್ತಾರೆ. ಐಎಎಸ್ ಅಧಿಕಾರಿಯಾಗಬೇಕು ಅಂದುಕೊಂಡಿದ್ದೇನೆ. ನಾನು ಓದಿದ್ದು ಉರ್ದು ಮಾಧ್ಯಮದಲ್ಲಿ. ಇಂದು ನನಗೆ ಇಂಗ್ಲಿಷ್‌ನಲ್ಲಿ ಚಿನ್ನದ ಪದಕ ದೊರೆತಿದ್ದು ಖುಷಿಯಾಗಿದೆ’ ಎಂದು ಮುಷಾಬ್ಬಹರೀನ್ ಕಡಲಗಿ ಖುಷಿ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.