ADVERTISEMENT

ನೀರಾವರಿ ಯೋಜನೆಗಳ ಅನುಷ್ಠಾನ ನಿಧಾನಗತಿ: ಸಚಿವ ಸತೀಶ ಜಾರಕಿಹೊಳಿ ಅಸಮಾಧಾನ

ಪ್ರಗತಿ ಪರಿಶೀಲನೆ ಸಭೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 12:54 IST
Last Updated 8 ಜುಲೈ 2025, 12:54 IST
<div class="paragraphs"><p> ಸಭೆಯಲ್ಲಿ&nbsp;ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು</p></div>

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು

   

ಬೆಳಗಾವಿ: ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನ ನಿಧಾನಗತಿಯಲ್ಲಿ ಸಾಗಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯದ ಜಿಲ್ಲಾ ವ್ಯಾಪ್ತಿಯ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

‘ಜಿಲ್ಲೆಯಲ್ಲಿ ಹಲವು ಯೋಜನೆಗಳು ನಿಧಾನಗತಿಯಲ್ಲಿ ಸಾಗಿವೆ. ಹೊಸ ಯೋಜನೆಗಳು ಇನ್ನೂ ಆರಂಭವಾಗಿಲ್ಲ. ಯಾವುದೇ ನೀರಾವರಿ ಯೋಜನೆ 200 ಕಿ.ಮೀ.ವರೆಗಿನ ಅಗತ್ಯತೆ ಪೂರೈಸಬೇಕು. ಆ ಮಾದರಿಯಲ್ಲಿ ವಿನ್ಯಾಸ ಮಾಡಿ’ ಎಂದು ನಿರ್ದೇಶನ ನೀಡಿದರು.

‘ವಿವಿಧ ವಿಧಾನಸಭಾ ಕ್ಷೇತ್ರಗಳ ಬೇಡಿಕೆಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿದ ಯೋಜನೆಗಳು ಮತ್ತು ಪ್ರಗತಿಯಲ್ಲಿರುವ ಯೋಜನೆಗಳನ್ನು ಬೇಗ ಪೂರ್ಣಗೊಳಿಸದಿದ್ದರೆ,  ಯಾವುದೇ ಉದ್ದೇಶ ಈಡೇರುವುದಿಲ್ಲ. ತ್ವರಿತವಾಗಿ ಯೋಜನೆಗಳನ್ನು ಪೂರ್ಣಗೊಳಿಸಿ’ ಎಂದು ಸೂಚಿಸಿದರು.

‘ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ, ಕೆಳಭಾಗದ ಇತರೆ ಕೆರೆಗಳನ್ನು ತುಂಬಿಸಲು ಅನುಕೂಲವಾಗುವಂತೆ ಒಂದು ಕೆರೆ ಗುರುತಿಸಿ’ ಎಂದು ಹೇಳಿದರು.

ಕರ್ನಾಟಕ ನೀರಾವರಿ ನಿಗಮ ನಿಯಮಿತದ ಉತ್ತರ ವಲಯದ ಮುಖ್ಯ ಎಂಜಿನಿಯರ್ ಬಿ.ಆರ್.ರಾಠೋಡ ಅವರು, ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಹಾಗೂ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದಿಂದ ಹೆಚ್ಚಿನ ಸಮಯ ಕೇಳಿರುವ ಯೋಜನೆಗಳ ವಿವರ ನೀಡಿದರು.

ಶಾಸಕ ದುರ್ಯೋಧನ ಐಹೊಳೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ ಇತರರಿದ್ದರು.

‘5 ಸಾವಿರ ಕ್ಯೂಸೆಕ್‌ ಬಿಡುಗಡೆ’

‘ಗರಿಷ್ಠ 51 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಜಲಾಶಯದಲ್ಲಿ ಜುಲೈ 8ರಂದು 41.90 ಟಿಎಂಸಿ ಅಡಿ (ಶೇ 82.16) ಸಂಗ್ರಹವಾಗಿದೆ. 20,032 ಕ್ಯೂಸೆಕ್‌ ಒಳಹರಿವು ಇದ್ದು, ಜಲಾಶಯ ಭರ್ತಿಯಾಗುವತ್ತ ಸಾಗಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಜುಲೈ 9ರಿಂದ ಜಲಾಶಯದಿಂದ 5 ಸಾವಿರ ಕ್ಯೂಸೆಕ್ ಹೊರಬಿಡಲಾಗುವುದು’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ಬುಧವಾರದ ನಂತರ ಒಳಹರಿವಿನ ಪ್ರಮಾಣ ಹೆಚ್ಚುತ್ತ ಸಾಗಿದರೆ, ಜಲಾಶಯದಿಂದ ಹೆಚ್ಚಿನ ನೀರು ಹೊರಬಿಡಲಾಗುವುದು. ಒಳಹರಿವಿನ ಪ್ರಮಾಣ ಕುಸಿದರೆ, ಹೊರಹರಿವು ಇಳಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.