ADVERTISEMENT

ಐಟಿ–ಬಿಟಿ ಕಂಪನಿಗಳ ಸ್ಥಾಪನೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 4:42 IST
Last Updated 31 ಅಕ್ಟೋಬರ್ 2025, 4:42 IST
ಬೆಳಗಾವಿಯ ರಾಣಿ ಚನ್ನಮ್ಮನ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು 
ಬೆಳಗಾವಿಯ ರಾಣಿ ಚನ್ನಮ್ಮನ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು    

ಬೆಳಗಾವಿ: ಇಲ್ಲಿ ಐಟಿ–ಬಿಟಿ ಕಂಪನಿಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ರಾಣಿ ಚನ್ನಮ್ಮನ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

‘ಬೆಳಗಾವಿಯಲ್ಲಿ ಐಟಿ–ಬಿಟಿ ಕಂಪನಿಗಳಿಲ್ಲ. ಹಾಗಾಗಿ ಪ್ರತಿವರ್ಷ 20 ಸಾವಿರ ಯುವಕ–ಯುವತಿಯರು ಉದ್ಯೋಗ ಅರಸಿ ಬೆಂಗಳೂರು, ಪುಣೆಯಂಥ ಮಹಾನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಹಾಗಾಗಿ ಇಲ್ಲಿ ಐಟಿ–ಬಿಟಿ ಕಂಪನಿ ಸ್ಥಾಪಿಸಿದರೆ ದುಡಿಯುವ ಕೈಗಳಿಗೆ ಕೆಲಸ ಸಿಗುತ್ತದೆ. ಬೆಳಗಾವಿ ಮಹಾನಗರದ ಸರ್ವಾಂಗೀಣ ಅಭಿವೃದ್ಧಿಯೂ ಆಗುತ್ತದೆ’ ಎಂದರು.

ADVERTISEMENT

ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಅಭಿಲಾಷ, ರಾಜು ಕಲಪತ್ರಿ, ಕಣ್ಣಪ್ಪ ಬಡಕನ್ನವರ, ರಾಜು ಗಲಗಲಿ, ಅರುಣ ಪಾಟೀಲ, ಬಾಳಾಸಾಹೇಬ ಉದಗಟ್ಟಿ, ಗುರುಗೌಡ ಪಾಟೀಲ ಇತರರಿದ್ದರು.

ಕರ್ನಾಟಕದಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ:  ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕು ಎಂದು ಆಗ್ರಹಿಸಿ ಮದ್ಯ ನಿಷೇಧ ಆಂದೋಲನ–ಕರ್ನಾಟಕ ಸಂಘಟನೆಯವರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ರಾಣಿ ಚನ್ನಮ್ಮನ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ನಂತರ, ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಯಾವುದೇ ರಾಜ್ಯದಲ್ಲಿ ಮದ್ಯದ ಅಂಗಡಿಗೆ ಪರವಾನಗಿ ನೀಡಲು ಮತ್ತು ರದ್ದುಪಡಿಸಲು ಮಹಿಳಾ ಗ್ರಾಮ ಸಭೆಯಲ್ಲಿ ಒಪ್ಪಿಗೆ ಸಿಗಬೇಕು. ಮಹಿಳಾ ಗ್ರಾಮಸಭೆಯ ಠರಾವಿಗೆ ಮಾನ್ಯತೆ ನೀಡಬೇಕು. ಮನೆಗಳು, ಪಾನ್‌ಶಾಪ್‌ಗಳು, ಕಿರಾಣಿ ಅಂಗಡಿಗಳು ಮತ್ತು ಗೂಡಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

‘ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಬೆಂಗಳೂರಿನಲ್ಲಿ ನವೆಂಬರ್‌ 25ರಿಂದ ಅನಿರ್ದಿಷ್ಟಾವಧಿ ಅವಧಿಯವರೆಗೆ ಸತ್ಯಾಗ್ರಹ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.

ಮುಖಂಡರಾದ ಅಶೋಕ, ಮಹಾದೇವಿ, ಸುವರ್ಣ, ಲಕ್ಷ್ಮಿ, ರೂಪಾ, ವನಿತಾ, ರಾಧಿಕಾ, ಕಸ್ತೂರಿ ಇತರರಿದ್ದರು.

ಬೆಳಗಾವಿ: ₹400 ಕೂಲಿ ನೀಡಲು ಆಗ್ರಹ

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವವರಿಗೆ ದಿನಕ್ಕೆ ₹400 ಕೂಲಿ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯವರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವವರ ಪೈಕಿ ಅಂಗವಿಕಲರು ಹಿರಿಯ ನಾಗರಿಕರ ಇ–ಕೆವೈಸಿ ಮಾಡಲಾಗುತ್ತಿಲ್ಲ. ಅಂಥವರಿಗೆ ಬಯೊಮೆಟ್ರಿಕ್‌ ವ್ಯವಸ್ಥೆ ಜಾರಿಗೆ ತರಬೇಕು. ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವಾರ್ಷಿಕ 200 ದಿನಗಳ ಕೆಲಸ ನೀಡಬೇಕು ಎಂದು ಆಗ್ರಹಿಸಿದರು. ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಮುಖಂಡ ವಿಶ್ವೇಶ್ವರಯ್ಯ ಹಿರೇಮಠ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಬೆಳಗಾವಿ: ‘ಮಹಾರಾಷ್ಟ್ರ ಮಾದರಿಯಲ್ಲಿ ಕಬ್ಬಿಗೆ ದರ ನಿಗದಿಪಡಿಸಿ’

ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು 2025–26ನೇ ಸಾಲಿನ ಹಂಗಾಮಿನಲ್ಲಿ ಪ್ರತಿ ಟನ್‌ ಕಬ್ಬಿಗೆ ₹3750 ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ಮತ್ತು ರೈತರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ರೈತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ರಾಣಿ ಚನ್ನಮ್ಮನ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದ ನಂತರ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರ ಸಾಲಮನ್ನಾ ಮಾಡಬೇಕು. ಚೆಕ್‌ಡ್ಯಾಂ ನಿರ್ಮಾಣಕ್ಕೆ ಭೂಮಿ ನೀಡಿದ ಬೆಳಗಾವಿ ತಾಲ್ಲೂಕಿನ ಬಸುರ್ತೆ ಅತವಾಡ ಗ್ರಾಮಗಳ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಗಣಪತಿ ಇಳಿಗೇರ ಸುರೇಶ ಬರಗನ್ನವರ ಮೋತಿಲಾಲ್‌ ಚವ್ಹಾಣ ಧರೇಖಾನ್‌ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.