ADVERTISEMENT

ಬುದ್ಧ ತತ್ವಗಳ ಪ್ರೇರಣೆಯಿಂದ ಸಂವಿಧಾನ ರಚಿಸಿದ ಅಂಬೇಡ್ಕರ್: ನ್ಯಾ. ಪ್ರಸನ್ನ ವರಾಳೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 4:22 IST
Last Updated 22 ಡಿಸೆಂಬರ್ 2025, 4:22 IST
<div class="paragraphs"><p>ಚಿಕ್ಕೋಡಿ ಪಟ್ಟಣದಲ್ಲಿ ₹ 32 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ನೂತನ ನ್ಯಾಯಾಲಯ ಸಂಕೀರ್ಣ, ವಕೀಲರ ಸಂಘದ ಕಟ್ಟಡ ಹಾಗೂ ಉಬ್ಬು ಶಿಲ್ಪ ಅನಾವರಣವನ್ನು ಜ್ಯೋತಿ ಬೆಳಗಿಸುವ ಮೂಲಕ ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಉದ್ಘಾಟಿಸಿದರು. </p></div>

ಚಿಕ್ಕೋಡಿ ಪಟ್ಟಣದಲ್ಲಿ ₹ 32 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ನೂತನ ನ್ಯಾಯಾಲಯ ಸಂಕೀರ್ಣ, ವಕೀಲರ ಸಂಘದ ಕಟ್ಟಡ ಹಾಗೂ ಉಬ್ಬು ಶಿಲ್ಪ ಅನಾವರಣವನ್ನು ಜ್ಯೋತಿ ಬೆಳಗಿಸುವ ಮೂಲಕ ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಉದ್ಘಾಟಿಸಿದರು.

   

ಚಿಕ್ಕೋಡಿ: ಜಾತಿ ಪದ್ಧತಿಯಿಂದ ನೊಂದಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಭಗವಾನ್ ಬುದ್ಧನ ತತ್ವಗಳಿಂದ ಪ್ರಭಾವಿತರಾಗಿ ಜಗತ್ತೇ ಮೆಚ್ಚುವಂತಹ ಸಂವಿಧಾನವನ್ನು ರಚಿಸಿ ಭಾರತಕ್ಕೆ ನೀಡಿದ್ದು ಭಾರತೀಯರ ಹೆಮ್ಮೆಯಾಗಿದೆ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘ ಚಿಕ್ಕೋಡಿ ಸಹಯೋಗದಲ್ಲಿ ₹ 32 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ನ್ಯಾಯಾಲಯ ಸಂಕೀರ್ಣ ಮತ್ತು ವಕೀಲರ ಸಂಘದ ಕಟ್ಟಡದ ಉದ್ಘಾಟನೆ ಹಾಗೂ ಗೋಡೆ ಭಿತ್ತಿಚಿತ್ರ ಅನಾವರಣವನ್ನು ಭಾನುವಾರ ನೆರವೇರಿಸಿ ಮಾತನಾಡಿದರು.

ADVERTISEMENT

’ವಾಸ್ತುಶಾಂತಿ ಮೂಲಕ ಮನೆ ಪ್ರವೇಶ, ವಿಗ್ರಹ ಪ್ರತಿಷ್ಠಾಪನೆಯಿಂದ ದೇವಾಲಯಕ್ಕೆ ಕಳೆ ಬರವ ಹಾಗೆಯೇ ನ್ಯಾಯಾಲಯದ ನೂತನ ಕಟ್ಟಡದಲ್ಲಿ ಡಾ.ಅಂಬೇಡ್ಕರ್ ಅವರು ಸಂವಿಧಾನ ಸಭೆಗೆ ಭಾರತದ ಸಂವಿಧಾನ ಹಸ್ತಾಂತರಿಸುತ್ತಿರುವ ಗೋಡೆಯ ಉಬ್ಬು ಶಿಲ್ಪದಿಂದ ಹೊಸ ಚೈತನ್ಯ ಬಂದಂತಾಗಿದೆ‘ ಎಂದರು.

’ಡಾ. ಅಂಬೇಡ್ಕರ್ ಅವರೊಂದಿಗೆ ತಮ್ಮ ತಂದೆಯ ಒಡನಾಟ ಹೆಚ್ಚಾಗಿತ್ತು. ಅವರಿಂದ ಮಾರ್ಗದರ್ಶನ ಪಡೆದ ನಮ್ಮ ತಂದೆ ನಮಗೆಲ್ಲ ಒಳ್ಳೆಯ ಶಿಕ್ಷಣ ನೀಡಿದರು. ಹೀಗಾಗಿಯೇ ತಾನು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾಗಲು ಸಾಧ್ಯವಾಯಿತು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿ ಭಾವುಕರಾದರು.

ಕಾನೂನು ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ‘ನೂತನ ನ್ಯಾಯಾಲಯ ಸಂಕೀರ್ಣದಲ್ಲಿ ಶಿಶು ಪಾಲನಾ ಕೇಂದ್ರ ತೆರೆದಿದ್ದು ಹೆಮ್ಮೆ ತಂದಿದ್ದು, ಕಕ್ಷಿದಾರರ ರಕ್ಷಣೆ ಸರ್ಕಾರದ ಹೊಣೆಯಾಗಿದೆ ಎಂಬುವುದಕ್ಕೆ ಇದು ನಿದರ್ಶನವಾಗಿದೆ. ದಿವಾಣಿ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ಸಿವಿಲ್ ಪ್ರೊಸ್ಯೂಜರ್ ಕೋಡ್ (ಸಿಪಿಸಿ) ವನ್ನು ರಾಜ್ಯದಲ್ಲಿ ತರಲಾಗಿದ್ದು, ಇದು ದೇಶದಲ್ಲಿಯೇ ಕರ್ನಾಟಕದ ದಿಟ್ಟ ಹೆಜ್ಜೆ‘ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ‘ರಾಜ್ಯದಲ್ಲಿ ಬಹುತೇಕ ನ್ಯಾಯಾಲಯಗಳಿಗೆ ನೂತನ ಕಟ್ಟಡ ನಿರ್ಮಾಣ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದ್ದು, ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಚಿಕ್ಕೋಡಿಯ ವಕೀಲರ ಸಂಘದ ಕಟ್ಟಡದ ಮೇಲೆ ₹ 2 ಕೋಟಿ ಮೊತ್ತದಲ್ಲಿ ಮಹಿಳಾ ವಕೀಲರಿಗೆ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಲಾಗುವುದು. ಕೃಷ್ಣಾ ಕಿತ್ತೂರು-ಖೆಮಲಾಪೂರದವರೆಗೆ ₹ 70 ಕೋಟಿ ಮೊತ್ತದಲ್ಲಿ ಬೃಹತ್ ಸೇತುವೆ ನಿರ್ಮಾಣ ಮಾಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮಾತನಾಡಿ, ಚಿಕ್ಕೋಡಿಯಲ್ಲಿ 5 ನ್ಯಾಯಾಲಯಗಳು ಇರುವುದು ಹೆಮ್ಮೆಯ ಸಂಗತಿಯಾಗಿದೆ. ನ್ಯಾಯಾಧೀಶರು, ಕಕ್ಷಿದಾರರು ಹಾಗೂ ವಕೀಲರನ್ನು ಗಮನದಲ್ಲಿಟ್ಟುಕೊಂಡು ನ್ಯಾಯಲಯ ಸಂಕೀರ್ಣ ನಿರ್ಮಿಸಲಾಗಿದೆ ಎಂದು ಹೇಳಿದರು.

ಹೈಕೋರ್ಟ್‌ ನ್ಯಾಯಧೀಶರಾದ ಕೆ.ಎಸ್ ಮುದಗಲ್, ಸಚಿನ ಮಗದುಮ, ಕೆ.ಎಸ್‌.ಹೇಮಲೇಖಾ, ವಿಜಯಕುಮಾರ ಪಾಟೀಲ, ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ವಿ.ಡಿ.ಕಾಮರೆಡ್ಡಿ ಮಾತನಾಡಿದರು.

ಹೈಕೋರ್ಟ್‌ನ ಮಹಾ ವಿಲೇಖಾಧಿಕಾರಿ ಕೆ.ಎಸ್‌. ಭರತಕುಮಾರ, ಚಿಕ್ಕೋಡಿ ಸದಲಗಾ ಶಾಸಕ ಗಣೇಶ ಹುಕ್ಕೇರಿ, ಧಾರವಾಡದ ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಶಿವಾನಂದ ನಾಯ್ಕ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕಲ್ಮೇಶ್ವರ ಕಿವಡ ಇದ್ದರು. ಬೆಳಗಾವಿ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಧೀಶ ಮಂಜುನಾಥ ನಾಯಕ ಸ್ವಾಗತಿಸಿ, ವಕೀಲ ಎಂ.ಬಿ. ಪಾಟೀಲ ನಿರೂಪಿಸಿ, ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಆರ್‌.ಬಿ. ಹಿತ್ತಲಮನಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.