
ಬೆಳಗಾವಿ: ‘ಸುಪ್ರೀಂಕೋರ್ಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರ ದಾಖಲಿಸಿರುವ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಪರ ಗಟ್ಟಿಯಾಗಿ ವಾದ ಮಂಡಿಸಲು ರಾಜ್ಯ ಸರ್ಕಾರವು ತನ್ನ ಕಾನೂನು ತಂಡ ಬಲಪಡಿಸಬೇಕು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಗ್ರಹಿಸಿದರು.
‘ಪ್ರಕರಣದ ಮುಂದಿನ ವಿಚಾರಣೆಯನ್ನು 2026ರ ಜನವರಿ 21ರಂದು ಸುಪ್ರೀಂಕೋರ್ಟ್ ನಿಗದಿಪಡಿಸಿದೆ. ಆ ವೇಳೆಗೆ ಕಾನೂನು ತಂಡಕ್ಕೆ ಮಾರ್ಗದರ್ಶನ ನೀಡಲು ತಜ್ಞರ ಸಮಿತಿಯನ್ನು ಸರ್ಕಾರ ನೇಮಿಸಬೇಕು’ ಎಂದು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
‘2004ರಲ್ಲಿ ಮಹಾರಾಷ್ಟ್ರ ಸುಪ್ರೀಂಕೋರ್ಟ್‌ನಲ್ಲಿ ದಾಖಲಿಸಿದ ಪ್ರಕರಣ ಕಳೆದ ಮೂರು ವರ್ಷಗಳಿಂದ ವಿಚಾರಣೆಗೆ ಬಂದಿರಲಿಲ್ಲ. ಆ ಪೀಠದಲ್ಲಿದ್ದ ನ್ಯಾಯಾಧೀಶರಲ್ಲಿ ಕರ್ನಾಟಕದವರೊಬ್ಬರು ವಿಚಾರಣೆಗೆ ಹಿಂದೆ ಸರಿದಿದ್ದರು. ಈಗ ಪ್ರಕರಣ ವಿಚಾರಣೆಗೆ ಬರುತ್ತಿರುವುದರಿಂದ ಸರ್ಕಾರ ಕಾನೂನು ತಂಡ ಬಲಪಡಿಸಬೇಕಿದೆ’ ಎಂದರು.
‘ಗಡಿ ವಿವಾದ ಪ್ರಕರಣದಲ್ಲಿ ವಾದ ಮಂಡಿಸಲು ಒಬ್ಬ ವಕೀಲರನ್ನು ಹೊರತುಪಡಿಸಿ, ಉಳಿದ ವಕೀಲರು ಉತ್ತರ ಭಾರತದವರಿದ್ದಾರೆ. ಹಾಗಾಗಿ ಈ ಪ್ರಕರಣದ ಸಮರ್ಥನೆಗೆ ನಾವು ರಾಜ್ಯದ ಹೆಚ್ಚಿನ ವಕೀಲರನ್ನು ಬಯಸುತ್ತೇವೆ. ಕನ್ನಡ ಸಂಘಟನೆಗಳ ಬೇಡಿಕೆ ನಂತರ ಸರ್ಕಾರವು ಕಾನೂನು ಸಚಿವ ಎಚ್.ಕೆ.ಪಾಟೀಲ ಅವರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಿಸಿತು. ಪ್ರಸ್ತುತ ಅವರಿಗೆ ಮತ್ತೆ ಅದೇ ಜವಾಬ್ದಾರಿ ನೀಡಲಾಗಿದೆ’ ಎಂದು ತಿಳಿಸಿದರು.
‘ರಾಜ್ಯದ ಕಾನೂನು ತಂಡ ಬಲಪಡಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಹಿರಿಯ ವಕೀಲರಾದ ಮೋಹನ ಕಾತರಕಿ, ಅಶೋಕ ಹಾರನಹಳ್ಳಿ ಮತ್ತು ಕಪಿಲ್ ಸಿಬಲ್ ಅವರ ಸಭೆಯನ್ನು ರಾಜ್ಯ ಸರ್ಕಾರ ಕರೆಯಬೇಕು’ ಎಂದು ಆಗ್ರಹಿಸಿದರು.
‘ಕರ್ನಾಟಕ ಗಡಿ ಮತ್ತು ನದಿಗಳ ಸಂರಕ್ಷಣಾ ಆಯೋಗದ ಕಚೇರಿಯನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಿ, ಈ ಭಾಗದ ನಿವೃತ್ತ ಐಎಎಸ್ ಅಧಿಕಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು’ ಎಂದು ಚಂದರಗಿ ಒತ್ತಾಯಿಸಿದರು.
ಮಹಾರಾಷ್ಟ್ರ ಏಕೀಕರಣ ಸಮಿತಿ ಕರಾಳ ದಿನ ಆಚರಿಸುವುದನ್ನು ತಡೆಯಲು ಕರ್ನಾಟಕ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿರುವ ಮಲ್ಲಪ್ಪ ಅಕ್ಷರದ, ‘ಕರಾಳ ದಿನ ಆಚರಣೆಗೆ ಎಂಇಎಸ್‌ಗೆ ಅವಕಾಶ ಕೊಟ್ಟಿರುವ ಜಿಲ್ಲಾಡಳಿತದ ದ್ವಂದ್ವ ನೀತಿಯನ್ನು ನ್ಯಾಯಾಲಯದ ಗಮನಕ್ಕೆ ತರುತ್ತೇನೆ’ ಎಂದರು.
ಮುಖಂಡ ಮಹಾದೇವ ತಳವಾರ, ‘ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕವು ಗಡಿಯಲ್ಲಿ ಕಾರ್ಯಕ್ರಮಗಳ ಆಯೋಜನೆ ಜತೆಗೆ, ಗಡಿಗೆ ಸಂಬಂಧಿಸಿದ ವಿದ್ಯಮಾನಗಳಿಗೂ ಪ್ರತಿಕ್ರಿಯಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.