ADVERTISEMENT

ರಾಮನಗರಕ್ಕೆ ನಿಮ್ಮ ಕೊಡುಗೆ ಏನು?: ಡಿಕೆ ಸಹೋದರರಿಗೆ ಅಶ್ವತ್ಥನಾರಾಯಣ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 7:29 IST
Last Updated 5 ಜನವರಿ 2022, 7:29 IST
ಸಚಿವ ಅಶ್ವತ್ಥನಾರಾಯಣ–ಸಂಸದ ಡಿ.ಕೆ. ಸುರೇಶ್ ನಡುವೆ ಜಟಾಪಟಿ
ಸಚಿವ ಅಶ್ವತ್ಥನಾರಾಯಣ–ಸಂಸದ ಡಿ.ಕೆ. ಸುರೇಶ್ ನಡುವೆ ಜಟಾಪಟಿ    

ಬೆಳಗಾವಿ: ರಾಮನಗರದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳೇನು ಎನ್ನುವ ಪ್ರಶ್ನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಸಂಸದ ಡಿ.ಕೆ. ಸುರೇಶ್ ಉತ್ತರಿಸಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸವಾಲು ಹಾಕಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಇದುವರೆಗೂ ಮನಬಂದಂತೆ ಮತ್ತು ಏನು ಮಾಡಿದರೂ ಜಯಿಸಿಕೊಳ್ಳುತ್ತೇವೆ ಎನ್ನುವಂತೆ ಅವರು ನಡೆದುಕೊಂಡು ಬಂದಿದ್ದಾರೆ. ನಮ್ಮ ತಾಳ್ಮೆಯ ಮಿತಿ ಮೀರುವಂತೆ ಮಾಡಿದ್ದಾರೆ. ಆದ್ದರಿಂದ ಬಹಳ ಸ್ಪಷ್ಟವಾಗಿ ಅವರಿಗೆ ಸಂದೇಶ ಕೊಡಬೇಕಾಗಿತ್ತು, ಕೊಟ್ಟಿದ್ದೇನೆ’ ಎಂದರು.

ಕೇವಲ ನಿಮ್ಮ ವರ್ಚಸ್ಸು, ಪ್ರತಿಷ್ಠೆ, ಸ್ವಾರ್ಥಕ್ಕೆ ಆದ್ಯತೆ ಕೊಟ್ಟು ಬದುಕಿದವವರು ನೀವು. ಅದು ಸಾಕಾಗಿದೆ. ಸಾಧನೆ ಏನಾದರೂ ಇದ್ದರೆ ಅದನ್ನು ಕೆಲಸದಲ್ಲಿ ತೋರಿಸಬೇಕು; ಏನಾದರೂ ಕೆಲಸ ಮಾಡಿದ್ದರೆ ತೋರಿಸಿ ಎಂದು ಕೇಳಿದ್ದೇನೆ. ಆದರೆ, ಅವರಿಂದ ಉತ್ತರವಿಲ್ಲ ಎಂದು ಟಾಂಗ್‌ ನೀಡಿದರು.

ADVERTISEMENT

ನಾವು ರಾಮನಗರದಲ್ಲಿ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇವೆ. ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇವೆ. ಮುಂದೇನು ಮಾಡುತ್ತೇವೆ ಎನ್ನುವುದನ್ನೂ ತಿಳಿಸಿದ್ದೇವೆ. ಹೀಗಾಗಿಯೇ, ನಾನು ಬಹಳಷ್ಟು ಆತ್ಮವಿಶ್ವಾಸ ಮತ್ತು ಧೈರ್ಯ–ಸ್ಥೈರ್ಯದಿಂದ ಮಾತನಾಡಿದ್ದೇನೆ. ಮುಖ್ಯಮಂತ್ರಿ ಬಂದಾಗ ಗಲಾಟೆ ಮಾಡುವುದಲ್ಲ; ಪುಂಡಾಟಿಕೆ ನಡೆಸುವುದಲ್ಲ ಎಂದು ಹೇಳಿದ್ದೇನೆ. ಅದನ್ನು ಸಹಿಸಿಕೊಳ್ಳಲು ಅವರಿಗೆ ಆಗಲಿಲ್ಲ ಎಂದು ಪ್ರತಿಕ್ರಿಯಿಸಿದರು.

ರಾಮನಗರದಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ–ಸಂಸದ ಡಿ.ಕೆ. ಸುರೇಶ್ ನಡುವೆ ಜಟಾಪಟಿ ನಡೆದಿತ್ತು.

ಉಲ್ಲಂಘಿಸಿದರೆ ಕ್ರಮ:
ಮೇಕೆದಾಟು ಯೋಜನೆ ವಿಚಾರವಾಗಿ ಕಾಂಗ್ರೆಸ್‌ನವರು ಪಾದಯಾತ್ರೆ ನಡೆಸುತ್ತಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿದರೆ, ಅಂಥವರು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳುತ್ತೇವೆ. ಇಡೀ ಸಮಾಜದ ಆರೋಗ್ಯದ ಹಿತದೃಷ್ಟಿಯಿಂದ ನಿರ್ಬಂಧಗಳನ್ನು ಜಾರಿಗೊಳಿಸಿದ್ದೇವೆ. ಅದನ್ನು ಎಲ್ಲರೂ ಪಾಲಿಸಬೇಕಾಗುತ್ತದೆ ಎಂದರು.

ಓಮೈಕ್ರಾನ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 1ರಿಂದ 9ನೇ ತರಗತಿವರೆಗೆ ಭೌತಿಕ ತರಗತಿಗಳು ಇರುವುದಿಲ್ಲ. ಓಮೈಕ್ರಾನ್‌ ವೇಗವಾಗಿ ಹರಡುವ ವೈರಸ್ ಆಗಿದೆ. ಪರಿಸ್ಥಿತಿ ನೋಡಿಕೊಂಡು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಪೂರ್ಣ ಲಾಕ್‌ಡೌನ್ ಮಾಡಬಾರದು ಎನ್ನುವುದು ನಮ್ಮ ಉದ್ದೇಶ. ಮುಂಜಾಗ್ರತಾ ಕ್ರಮವಾಗಿ ಕೆಲವು ಸಣ್ಣ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಜನರ ಬದುಕಿಗೆ ಸಮಸ್ಯೆ ಆಗಬಾರದು ಎಂದು ನಿಗಾ ವಹಿಸಲಾಗುತ್ತಿದೆ. ನೆರೆಯ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಆದರೆ, ಗಡಿಗಳನ್ನು ಬಂದ್ ಮಾಡಲು ಅವಕಾಶ ಇಲ್ಲ. ನಿರ್ವಹಣೆ ಮಾಡಬಹುದಷ್ಟೆ. ಹೆಚ್ಚಿನ ಪರೀಕ್ಷೆ ನಡೆಸಿ, ಸೋಂಕು ಹರಡದಂತೆ ಕಡಿವಾಣ ಹಾಕಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.