ADVERTISEMENT

ರಮೇಶ ಮೋಸ ಮಾಡ್ತಿದ್ದಾರೆಂದು ಲಕ್ಷ್ಮಿ ಆಗ ಹೇಳಲಿಲ್ಲವೇಕೆ: ಈಶ್ವರಪ್ಪ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 7:19 IST
Last Updated 28 ನವೆಂಬರ್ 2021, 7:19 IST
ಕೆ.ಎಸ್. ಈಶ್ವರಪ್ಪ ಮತ್ತು ಲಕ್ಷ್ಮಿ ಹೆಬ್ಬಾಳಕರ
ಕೆ.ಎಸ್. ಈಶ್ವರಪ್ಪ ಮತ್ತು ಲಕ್ಷ್ಮಿ ಹೆಬ್ಬಾಳಕರ   

ಬೆಳಗಾವಿ: ‘ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಕಾಂಗ್ರೆಸ್‌ನಲ್ಲಿದ್ದಾಗ ಆ ಪಕ್ಷಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಆಗಲೇ ಹೇಳಲಿಲ್ಲವೇಕೆ?’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರಮೇಶ ಕಾಂಗ್ರೆಸ್‌ ಬಿಟ್ಟು ಬಂದ ನಂತರ ಅವರಿಗೆ ಎಲ್ಲವೂ ನೆನಪಾಗಿದೆ. ಸತ್ಯವನ್ನು ಯಾವಾಗಲೂ ಸ್ಪಷ್ಟವಾಗಿ ಹೇಳಿದರೆ ಸತ್ಯ. ತಮಗೆ ಬೇಕಾದಂತೆ ತಿರುಚಿದರೆ ಅದು ಸತ್ಯವಾಗುವುದಿಲ್ಲ’ ಎಂದು ತಿರುಗೇಟು ನೀಡಿದರು.

‘ರಮೇಶ ಯಾವುದೇ ಕಾರಣಕ್ಕೂ ಪಕ್ಷಕ್ಷೆ ಮೋಸ ಮಾಡುವುದಿಲ್ಲ. ಜಿಲ್ಲೆಯಲ್ಲಿ ವಿಧಾನಪರಿಷತ್‌ ಚುನಾವಣೆಯಲ್ಲಿ ದ್ವಿಸದಸ್ಥ ಸ್ಥಾನಗಳಿವೆ. ಮೊದಲನೇ ಪ್ರಾಶಸ್ತ್ಯದ ಮತ ಬಿಜೆಪಿಗೆ ಕೊಡಿ; 2ನೇ ಪ್ರಾಶಸ್ತ್ಯದ ಮತವನ್ನು ತಮ್ಮ ಲಖನ್‌ ಜಾರಕಿಹೊಳಿ ಅವರಿಗೆ ಕೊಡಿ ಎಂದು ಮುಕ್ತವಾಗಿಯೇ ಹೇಳುತ್ತಿದ್ದಾರೆ. ಲಕ್ಷ್ಮಿಗೆ ಇದನ್ನು ತಡೆದುಕೊಳ್ಳಲಾಗದೆ ಏನೇನೋ ಆರೋಪ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಅಭ್ಯರ್ಥಿಯಾಗಿ ಲಖನ್‌ ಪ್ರಥಮ ಪ್ರಾಶಸ್ತ್ಯದ ಮತ ಕೇಳಿಕೊಳ್ಳಬಹುದು. ಆದರೆ, ಬಿಜೆಪಿಯವರು ನಮ್ಮ ಅಭ್ಯರ್ಥಿ ಬೆಂಬಲಿಸುತ್ತಾರೆ. ಪಕ್ಷದ ಕಾರ್ಯಕರ್ತರು ಮತ್ತು ಮತದಾರರಲ್ಲಿ ಯಾವುದೇ ಗೊಂದಲವಿಲ್ಲ. ಹೀಗಾಗಿಯೇ ಹಳ್ಳಿಯಿಂದ ದೆಹಲಿಯವರೆಗೂ ಪಕ್ಷ ಗೆಲ್ಲುತ್ತಿದೆ’ ಎಂದು ಹೇಳಿದರು.

‘ಎಲ್ಲ ಇಲಾಖೆಗಳಲ್ಲೂ ಅಭಿವೃದ್ಧಿ ಕಾರ್ಯಗಳೂ ವ್ಯವಸ್ಥಿತವಾಗಿ ನಡೆಯುತ್ತಿವೆ. ಕಾಂಗ್ರೆಸ್‌ನವರು ಟೀಕೆಗೋಸ್ಕರ ಟೀಕೆ ಮಾಡುತ್ತಿದ್ದಾರೆ. ಅವರ ಟೀಕೆಗಳಲ್ಲಿ ಸತ್ಯವಿದ್ದರೆ ಪರಿಗಣಿಸಿ ತಿದ್ದಿಕೊಳ್ಳುತ್ತೇವೆ. ಇಲ್ಲದಿದ್ದರೆ ಅತ್ತ ಗಮನ ಕೊಡುವುದಿಲ್ಲ’ ಎಂದು ಸಮರ್ಥಿಸಿಕೊಂಡರು.

‘ಕಾಮಗಾರಿಗಳ ಟೆಂಡರ್‌ ನೀಡುವಾಗ ಶೇ 40ರಷ್ಟು ಲಂಚ ಪಡೆಯಲಾಗುತ್ತಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈಗಿನ ಹಾಗೂ ಹಿಂದಿನ ಸರ್ಕಾರದಲ್ಲಿ ಕೊಡಲಾದ ಟೆಂಡರ್‌ಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಯಾರು ತಪ್ಪಿತಸ್ಥರಿದ್ದಾರೋ ಅವರು ಅನುಭವಿಸುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT