ಘಟಪ್ರಭಾ ನದಿ
ಯಮಕನಮರಡಿ (ಬೆಳಗಾವಿ ಜಿಲ್ಲೆ): ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ವಿಪರೀತ ಮಳೆ ಸುರಿಯುತ್ತಿರುವ ಕಾರಣ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಹುಕ್ಕೇರಿ ತಾಲ್ಲೂಕಿನ ದಡ್ಡಿ, ಸಲಾಮವಾಡಿ, ಮೊದಗಾ, ಶೆಟ್ಟಿಹಳ್ಳಿ ಗ್ರಾಮದಲ್ಲಿನ ನಾಲ್ಕು ಸೇತುವೆಗಳು ಶನಿವಾರ ಮುಳುಗಿದ್ದು, ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ನದಿಯ ದಡದ ರೈತರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ.
ಸೇತುವೆಳ ಮೇಲೆ ಜನ ಓಡಾಡದಂತೆ ಪೊಲೀಸರು ಬ್ಯಾರಿಗೇಡ್ ಇಟ್ಟು ಕಾವಲು ಕಾಯುತ್ತಿದ್ದಾರೆ ಎಂದು ಸಲಾಮವಾಡಿ ಪಿಡಿಒ ಸಂತೋಷ ಕಬ್ಬಗೋಳ ಮಾಹಿತಿ ನೀಡಿದರು.
ಘಟಪ್ರಭಾ ನದಿ ತೀರದಲ್ಲಿ ದನ–ಕರುಗಳನ್ನು ಬಿಡಬಾರದು ಎಂದು ಡಂಗೂರ ಸಾರಲಾಗಿದೆ. ಹಲವಾರು ರೈತರ ಹೊಲ– ಗದ್ದೆಗೆ ನೀರು ನುಗ್ಗಿದ್ದರಿಂದ ಹೊಲಗಳಿಗೂ ಹೋಗದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಮೋದಗಾ ಗ್ರಾಮದ ಹೊರವಲಯದಲ್ಲಿ ಭಾವೇಶ್ವರಿ ದೇವಸ್ಥಾನಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ. ನದಿಯ ಆಚೆಗಿನ ಮರಣಹೋಳ ರೈತರಿಗೆ ಹಾಗೂ ಶಾಲಾ ಮಕ್ಕಳಿಗೆ ಬೇರೆ ಮಾರ್ಗದಲ್ಲಿ ಸಂಚರಿಸಲು ಬಸ್ ಸೌಕರ್ಯ ಒದಗಿಸಲಾಗಿದೆ ಎಂದು ತಿಳಿಸಿದರು.
ಬೆಳಗಾವಿ ತಾಲ್ಲೂಕಿನ ಮಾರ್ಕಂಡೇಯ ಜಲಾಶಯಕ್ಕೆ ರಾಕಸಕೊಪ್ಪದಿಂದ 3,000 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಇದರೊಂದಿಗೆ ಮಳೆ ನೀರೂ ಸೇರಿ ನದಿ ನೀರಿನ ಮಟ್ಟ ಏರಿಕೆಯಾಗಿದೆ ಎಂದು ಅವರು ಹೇಳಿರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.