ಬೆಳಗಾವಿ: ಖಾದಿ ಪ್ರಚಾರಕ್ಕಾಗಿ 1937ರಲ್ಲಿ ತಾಲ್ಲೂಕಿನ ಹುದಲಿಗೆ ಬಂದಿದ್ದ ಮಹಾತ್ಮ ಗಾಂಧೀಜಿ, ಸ್ವದೇಶಿ ಉತ್ಪನ್ನಗಳನ್ನೇ ಬಳಸುವಂತೆ ಕರೆಕೊಟ್ಟಿದ್ದರು. ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರಿ ಸರದಾರ್ಸ್ ಪ್ರೌಢಶಾಲೆ ಮೈದಾನದಲ್ಲಿ ವಿಶಿಷ್ಟವಾದ ಖಾದಿ ಉತ್ಸವ ಆಯೋಜಿಸಲಾಗಿದೆ. ಇಲ್ಲಿ ನಮಗೆ ಖಾದಿ ಏಕೆ ಅಗತ್ಯ ಮತ್ತು ಮುಖ್ಯ ಎಂದು ತಿಳಿಪಡಿಸುವುದರ ಜತೆಗೆ, ಅದರ ತಯಾರಿಕೆ ಬಗ್ಗೆಯೂ ವಿವರಿಸಲಾಗುತ್ತಿದೆ.
‘ಬೆಳಗಾವಿಯಲ್ಲಿ 2018ರಲ್ಲಿ ಖಾದಿ ಉತ್ಸವ ನಡೆದಿತ್ತು. ಅದಾದ ನಂತರ ಈ ಸಲ ಹಮ್ಮಿಕೊಂಡಿದ್ದೇವೆ. 50 ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯವರು ತಾವು ಸಿದ್ಧಪಡಿಸುವ ವಸ್ತುಗಳನ್ನು ಮಾರುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲ; ಬಿಹಾರ, ಜಮ್ಮು–ಕಾಶ್ಮೀರ, ಆಂಧ್ರಪ್ರದೇಶದವರು ಪಾಲ್ಗೊಂಡಿದ್ದಾರೆ’ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಸಾವಿತ್ರಮ್ಮ ದಳವಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.
ಉತ್ಸವದ ಪೆಂಡಾಲ್‌ನ ಮುಂಭಾಗದಲ್ಲೇ 8 ಖದರ್‌ನ ಚರಕದಿಂದ ಬಟ್ಟೆ ನೂಲುತ್ತಿದ್ದ ಹುದಲಿಯ ಸುವರ್ಣ ಚಿನಗುಡಿ ಅವರು ಖಾದಿ ಬಟ್ಟೆ ಧರಿಸುವುದರ ಮಹತ್ವ ಸಾರಿದರು. ಪಕ್ಕದಲ್ಲೇ ನಿಂತಿದ್ದ ಬೇರೆ ಕಾರ್ಮಿಕರು ಕೈಮಗ್ಗದಲ್ಲಿ ಬಟ್ಟೆ ನೇಯುವುದನ್ನೂ ತೋರಿಸಿದರು. ಖಾನಾಪುರದ ಕೇಂದ್ರ ಗ್ರಾಮೀಣ ಕುಂಬಾರಿಕೆ ಸಂಸ್ಥೆಯವರು ಪ್ರಾತ್ಯಕ್ಷಿಕೆ ಮೂಲಕ ಮಣ್ಣಿನಿಂದ ಮಡಿಕೆಗಳ ತಯಾರಿಕೆ ಕಲಿಸಿದರು.
‘ನಮ್ಮೂರಿಗೆ ಗಾಂಧಿ ಭೇಟಿ ಕೊಟ್ಟಿದ್ದರು. ಹಾಗಾಗಿ ಇಲ್ಲಿ ನಡೆಯುತ್ತಿರುವ ಖಾದಿ ಉತ್ಸವದಲ್ಲಿ ಪಾಲ್ಗೊಂಡಿದ್ದಕ್ಕೆ ಖುಷಿಯಾಗಿದೆ. ಖಾದಿ ಉತ್ಪನ್ನಗಳಿಗೆ ಗ್ರಾಹಕರಿಂದ ಬೇಡಿಕೆಯೂ ಇದೆ. ಸ್ವತಃ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೂರು ಧೋತಿ ಖರೀದಿಸಿದ್ದಾರೆ’ ಎಂದು ಹುದಲಿಯ ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರಿ ಸಂಘದ ಕಾರ್ಯದರ್ಶಿ ರಾಘವೇಂದ್ರ ಹಮ್ಮಣ್ಣವರ ತಿಳಿಸಿದರು.
‘ನಮ್ಮಲ್ಲಿ 8 ಕೈಮಗ್ಗ, 40 ಚರಕಗಳಿವೆ. 50 ಕಾರ್ಮಿಕರಿದ್ದೇವೆ. ನಾವು ತಯಾರಿಸಿದ ಖಾದಿಯ ಪ್ಯಾಂಟ್, ಶರ್ಟ್, ಕುರ್ತಾ, ಪೈಜಾಮ್‌ಗಳನ್ನು ಮಾರುತ್ತಿದ್ದೇವೆ. ಉತ್ಸವದ ಮೊದಲ ದಿನವೇ ಗ್ರಾಹಕರ ಸ್ಪಂದನೆ ಉತ್ತಮವಾಗಿದೆ’ ಎಂದು ಬಿಹಾರದ ಮಾಧುಬಾನಿಯ ನಾರಾಯಣಪುರ ಗ್ರಾಮೀಣ ವಿಕಾಸ ಕೇಂದ್ರದ ಮೊಹಮ್ಮದ್‌ಜುಬೇರ್ ಅನ್ಸಾರಿ ಹೇಳಿದರು.
‘ನಾವು ಹತ್ತಿಯ ದಾರದಲ್ಲಿ ಸಿದ್ಧಪಡಿಸಿದ ಉಡುಪುಗಳ ಮಾರಾಟಕ್ಕೆ ಮೊದಲ ಸಲ ಬೆಳಗಾವಿಗೆ ಬಂದಿದ್ದೇವೆ. ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ’ ಎಂದು ಆಂಧ್ರ ಪ್ರದೇಶದ ಏಲೂರಿನ ಅಮೀನಾಬೇಗಂ ತಿಳಿಸಿದರು.
‘ಈಗ ಚಳಿ ಹೆಚ್ಚಿದ್ದು ಕುರಿ ಉಣ್ಣೆಯಿಂದ ತಯಾರಿಸಿದ ಕಂಬಳಿಗೂ ಬೇಡಿಕೆ ಬಂದಿದೆ. ಆರೋಗ್ಯದ ಜತೆಗೆ ಧಾರ್ಮಿಕ ಕಾರ್ಯಕ್ರಮಕ್ಕಾಗಿಯೂ ಹಲವರು ಕಂಬಳಿ ಖರೀದಿಸುತ್ತಿದ್ದಾರೆ. ಅವುಗಳ ದರ ₹700 ರಿಂದ ₹2800ರವರೆಗೆ ಇದೆ. ಉತ್ಸವದ ಪ್ರಯುಕ್ತ ಶೇ 35 ರಿಯಾಯಿತಿ ಕೊಟ್ಟಿದ್ದೇವೆ’ ಎಂದು ತಾಲ್ಲೂಕಿನ ಶಿಂಧೊಳ್ಳಿ ಕನಕದಾಸ ಕುರಿ ಸಂಗೋಪನ ಮತ್ತು ಉಣ್ಣೆ ಉತ್ಪಾದಕ ಸಹಕಾರಿ ಸಂಘದ ಗಿರಿಜಾ ವಗ್ಗರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.