ADVERTISEMENT

ಕಿತ್ತೂರು ಕರ್ನಾಟಕ ನಾಮಕರಣ ಮಾಡಿ ಇಂದಿಗೆ ವರ್ಷ, ಸಿಎಂ ಮೇಲೆ ಹೆಚ್ಚಿದ ಭರವಸೆ

ಕಿತ್ತೂರು ಕರ್ನಾಟಕ ನಿಗಮ: ಗರಿಗೆದರಿದ ನಿರೀಕ್ಷೆ

ಪ್ರದೀಪ ಮೇಲಿನಮನಿ
Published 23 ಅಕ್ಟೋಬರ್ 2022, 2:14 IST
Last Updated 23 ಅಕ್ಟೋಬರ್ 2022, 2:14 IST
ಚನ್ನಮ್ಮನ ಕಿತ್ತೂರಿನಲ್ಲಿರುವ ಅಶ್ವಾರೂಢ ಕಿತ್ತೂರು ಚನ್ನಮ್ಮ ಪುತ್ಥಳಿ
ಚನ್ನಮ್ಮನ ಕಿತ್ತೂರಿನಲ್ಲಿರುವ ಅಶ್ವಾರೂಢ ಕಿತ್ತೂರು ಚನ್ನಮ್ಮ ಪುತ್ಥಳಿ   

ಚನ್ನಮ್ಮನ ಕಿತ್ತೂರು: ಮುಂಬೈ ಕರ್ನಾಟಕ ಪ್ರದೇಶವನ್ನು ಕಿತ್ತೂರು ಕರ್ನಾಟಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿ ಇದೇ ಅ. 23ಕ್ಕೆ ವರ್ಷ ತುಂಬಿದೆ. ಆದರೆ, ಭರವಸೆಯಂತೆ ಇದಕ್ಕೊಂದು ನಿಗಮ ಘೋಷಣೆ ಮಾಡದಿರುವುದು ಜನರಲ್ಲಿ ಬೇಸರ ಮೂಡಿಸಿದೆ.

ಕಳೆದ ವರ್ಷದ ರಾಣಿ ಚನ್ನಮ್ಮನ ಕಿತ್ತೂರು ಉತ್ಸವದ ಬೆಳ್ಳಿಹಬ್ಬದ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಈ ಘೋಷಣೆ ಮಾಡಿದ್ದರು. ನವೆಂಬರ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿತು. ಈ ಭಾಗದ ಭಾವನಾತ್ಮಕ ವಿಷಯವಾದ್ದರಿಂದ ಇಡೀ ಪ್ರದೇಶ ಸಂತಸದಿಂದ ಬೀಗಿತು.

ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಭಾಗಗಳನ್ನು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕೆಂದುಸಂಶೋಧಕ, ದಿವಂಗತ ಚಿದಾನಂದ ಮೂರ್ತಿ ಅವರು ಕಂಡ ಕನಸು ಈಗ ನನಸಾಗಿದೆ. ಆದರೆ, ಅವರು ನೀಡಿದ ಅಭಿವೃದ್ಧಿಯ ನೋಟ ಇನ್ನೂ ಈಡೇರಿಲ್ಲ.

ADVERTISEMENT

ಕಿತ್ತೂರು ಕರ್ನಾಟಕ ಘೋಷಣೆ ಮಾಡಿದ ನಂತರ ಇದಕ್ಕೊಂದು ನಿಗಮ ರಚನೆ ಮಾಡಲಾಗುವುದು, ಅನುದಾನ ನಿಗದಿ ಪಡಿಸಲಾಗುವುದು ಎಂಬ ಇಂಗಿತವನ್ನು ಬೊಮ್ಮಾಯಿ ವ್ಯಕ್ತಪಡಿಸಿದ್ದರು. ವರ್ಷವಾದರೂ ಘೋಷಣೆಗೆ ಮಾತ್ರ ಸೀಮಿತವಾಗಿದೆ ಎಂಬ ಅಸಮಾಧಾನ ಇಲ್ಲಿನ ಸಾರ್ವಜನಿಕರಲ್ಲಿ ಮನೆಮಾಡಿದೆ.

ಕಲ್ಯಾಣ ಕರ್ನಾಟಕ ಘೋಷಣೆಯಾದ ಕೂಡಲೇ ಈಶಾನ್ಯ ಸಾರಿಗೆ ನಿಗಮವು ‘ಕಲ್ಯಾಣ ಕರ್ನಾಟಕ ನಿಗಮ’ವಾಗಿ ಬದಲಾವಣೆಗೊಂಡಿತು. ಅನುದಾನವೂ ಸಿಕ್ಕಿತು. ಕಿತ್ತೂರು ಕರ್ನಾಟಕ ಭಾಗದ ವಾಯವ್ಯ ಸಾರಿಗೆ ಇನ್ನೂ ಅದೇ ಹೆಸರಿನಲ್ಲಿ ಮುಂದುವರೆದಿದೆ. ನಿಗಮದ ಕನಸು ಕನ್ನಡಿಯೊಳಗಿನ ಗಂಟಾಗಿದೆ ಎನ್ನುತ್ತಾರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ ಅಧ್ಯಕ್ಷ ಮಹಾಂತೇಶ ಕರಬಸನ್ನವರ.

ಕಿತ್ತೂರು ಉತ್ಸವ ಈ ಬಾರಿ ರಾಜ್ಯಮಟ್ಟದ ಉತ್ಸವವಾಗಿ ಆಚರಣೆ ಆಗುತ್ತಿದೆ. ಈ ಸಂದರ್ಭದಲ್ಲಾದರೂ ‘ಕಿತ್ತೂರು ಕರ್ನಾಟಕ ಸಾರಿಗೆ ನಿಗಮ’ವಾಗಿ ನಾಮಕರಣ ಮತ್ತು ಅಭಿವೃದ್ಧಿ ನಿಗಮ ಸ್ಥಾಪನೆಯ ಘೋಷಣೆ ಅವರಿಂದ ಮೊಳಗಬೇಕಿದೆ ಎಂಬ ಆಶಯ ವ್ಯಕ್ತ ಪಡಿಸುತ್ತಿದ್ದಾರೆ ಜನರು.

ಯಾವ ಜಿಲ್ಲೆ ಸೇರ್ಪಡೆ: ಬೆಳಗಾವಿ, ಉತ್ತರ ಕನ್ನಡ,‌ ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆ ಕಿತ್ತೂರು ಕರ್ನಾಟಕಕ್ಕೆ ಸೇರ್ಪಡೆ ಆಗುತ್ತವೆ ಎಂದು ಮುಖ್ಯಮಂತ್ರಿ ಐತಿಹಾಸಿಕ ಘೋಷಣೆ ಸಂದರ್ಭದಲ್ಲಿ ಪ್ರಕಟಿಸಿದ್ದರು. ಸಹಜವಾಗಿಯೇ ಎಲ್ಲ ಜಿಲ್ಲೆಗಳ ಜನ ನಿಗಮದ ಘೋಷಣೆಯ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.