ADVERTISEMENT

KSRTC Strike | ಬೆಳಗಾವಿ: ಬೆಳಿಗ್ಗೆ ಪರದಾಟ, ಮಧ್ಯಾಹ್ನ ನಿರಾಳ

ಸಾರಿಗೆ ಸಂಸ್ಥೆ ನೌಕರರ ಮುಷ್ಕರ ತಾತ್ಕಾಲಿಕ ಹಿಂದಕ್ಕೆ, ಸಂಚಾರ ವಿಳಂಬ, ಪರದಾಡಿದ ವಿದ್ಯಾರ್ಥಿಗಳು, ನೌಕರರು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 2:18 IST
Last Updated 6 ಆಗಸ್ಟ್ 2025, 2:18 IST
ಬೆಳಗಾವಿ ನಗರ ಸಾರಿಗೆ ಬಸ್‌ ನಿಲ್ದಾಣದಲ್ಲಿ ಮಂಗಳವಾರ, ವಿದ್ಯಾರ್ಥಿಗಳು ಬಸ್‌ಗಾಗಿ ಕಾದು ಕುಳಿತರು  ಪ್ರಜಾವಾಣಿ ಚಿತ್ರ
ಬೆಳಗಾವಿ ನಗರ ಸಾರಿಗೆ ಬಸ್‌ ನಿಲ್ದಾಣದಲ್ಲಿ ಮಂಗಳವಾರ, ವಿದ್ಯಾರ್ಥಿಗಳು ಬಸ್‌ಗಾಗಿ ಕಾದು ಕುಳಿತರು  ಪ್ರಜಾವಾಣಿ ಚಿತ್ರ   

ಬೆಳಗಾವಿ: ವೇತನ ಪರಿಷ್ಕರಣೆಯೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಮಂಗಳವಾರ ಬಸ್ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಪ್ರಯಾಣಿಕರು ಪರದಾಡಿದರು. ಬೆಳಿಗ್ಗೆ 11ರ ನಂತರ ಬಸ್‌ ಸಂಚಾರ ಆರಂಭವಾಯಿತು. ಆದರೆ, ಶಾಲೆ– ಕಾಲೇಜು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಹೋಗದೇ ಸಂಕಷ್ಟ ಅನುಭವಿಸಿದರು.

ಪ್ರತಿ ದಿನ ಬೆಳಿಗ್ಗೆ 6ಕ್ಕೂ ಮುನ್ನವೇ ಬಸ್‌ಗಳು ಡಿಪೊದಿಂದ ಹೊರಬಂದು ಆಯಾ ಪ್ಲ್ಯಾಟ್‌ಫಾರ್ಮ್‌ ಮುಂದೆ ನಿಲ್ಲುತ್ತಿದ್ದವು. ಆದರೆ, ಮಂಗಳವಾರ ಯಾವೊಂದು ಬಸ್ಸೂ ಹೊರಬರಲಿಲ್ಲ. ನಗರ ಹಾಗೂ ಗ್ರಾಮೀಣ ಸಾರಿಗೆಗೆ ಸೇರಿದ ಎಲ್ಲ ಚಾಲಕರು, ನಿರ್ವಾಹಕರು ಹಾಗೂ ಇತರೇ ಸಿಬ್ಬಂದಿ ಡಿಪೊಗೆ ಬಂದರೂ ಬಸ್‌ಗಳನ್ನು ಹೊರತೆಗೆಯಲಿಲ್ಲ.

ತುರ್ತು ಅವಶ್ಯಕತೆ ಇದ್ದ ಮಾರ್ಗಗಳಲ್ಲಿ ಶೇ 30ರಷ್ಟು ಬಸ್‌ಗಳನ್ನು ಓಡಿಸಲಾಯಿತು. ಆದರೆ, ಶಾಲೆ– ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ನೌಕರರು ಗಂಟೆಗಟ್ಟಲೇ ಕಾಯಬೇಕಾಯಿತು. ಗ್ರಾಮೀಣ ಭಾಗದಿಂದ ನಗರಕ್ಕೆ ಬರುವ ವಿದ್ಯಾರ್ಥಿಗಳಲ್ಲಿ ಕೆಲವರು ಖಾಸಗಿ ವಾಹನ ಆಶ್ರಯಿಸಿದರು. ಬಹುಪಾಲು ಮಂದಿ ಪಾಠ– ಪ್ರವಚನಗಳಿಂದ ವಂಚಿತರಾದರು.

ADVERTISEMENT

ಸ್ಥಳಕ್ಕೆ ಬಂದ ಸಾರಿಗೆ ಸಂಸ್ಥೆಯ ಮೇಲಧಿಕಾರಿಗಳು ಎಲ್ಲ ಬಸ್‌ಗಳ ಸಂಚಾರಕ್ಕೆ ಸೂಚನೆ ನೀಡಿದ್ದರಿಂದ, ಜನ ನಿರಾಳವಾದರು.

‘ಸರ್ಕಾರ ಆರು ತಿಂಗಳಿನಿಂದ ನೌಕರರ ವೇತನ ಪರಿಷ್ಕರಣೆಗೆ ಮೀನಮೇಷ ಎಣಿಸುತ್ತಿದೆ. ಕಳೆದ ವರ್ಷ ಡಿಸೆಂಬರ್ 31ರಂದು ಮುಷ್ಕರಕ್ಕೆ ನೌಕರರು ಕರೆ ನೀಡಿದ್ದರು. ಅಂದು ಸಮಾಧಾನ ಸಭೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಆದರೆ ಇದುವರೆಗೂ ನೌಕರರ ಬೇಡಿಕೆಗೆ ಈಡೇರಿಸಿಲ್ಲ. ಹಾಗಾಗಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದೇವೆ’ ಎಂದು ಮುಖಂಡ ಸಿ.ಎಸ್. ಬಿಡನಾಳ ತಿಳಿಸಿದರು.

ಬೆಳಿಗ್ಗೆ 10ರ ಸುಮಾರಿಗೆ ಬಸ್‌ ನಿಲ್ದಾಣದಲ್ಲಿ ಸೇರಿದ ಸಂಘಟನೆಯ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಸುರೇಶ ಯರಡ್ಡಿ, ರಾಜು ಪನ್ಯಾಗೋಳ, ಈರಣ್ಣ ಸಂಬರಗಿ, ಅಡಿವೆಪ್ಪ ಹೊಸಮನಿ, ನಾಗರಾಜ ಕಾಡೇಶನವರ, ವಿ.ವಿ. ಚಿಕ್ಕ ಮಠ, ಗಿರೀಶ ಕಾಂಬಳೆ, ಸುರೇಶ ಅರಿ ಬೆಂಚಿ, ಸಿದ್ದಪ್ಪ ಮಡಿವಾಳ, ರುದ್ರಪ್ಪ ಹುಚ್ಚನ್ನವರ, ಬಸು ಆಗಸರ, ಆರ್.ಎ ಪಾಟೀಲ, ನಾಗರಾಜ ಮುರ ಗೋಡ, ಸದಾ ಕಲಾಲ ಮುಷ್ಕರದ ನೇತೃತ್ವ ವಹಿಸಿದ್ದರು.

ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಕಾರಣ ಮಂಗಳವಾರ ಬೆಳಿಗ್ಗೆ ಹಲವು ಬಸ್‌ಗಳು ಬೆಳಗಾವಿಯ ಘಟಕದಲ್ಲೇ ನಿಂತವು  ಪ್ರಜಾವಾಣಿ ಚಿತ್ರ
ಶಕ್ತಿ ಯೋಜನೆ ಬಂದ ಮೇಲೆ ಚಾಲಕ ನಿರ್ವಾಹಕರಿಗೆ ಕೆಲಸದ ಹೊರೆ ಹೆಚ್ಚಿದೆ. ಅವರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಹೋರಾಟಕ್ಕೆ ನಮ್ಮ ಬೆಂಬಲವಿದೆ
ಶಿಲ್ಪಾ ರಾಮಣ್ಣವರ ‍ಪ್ರಯಾಣಿಕರು
ಮಂಗಳವಾರ ಬೆಳಿಗ್ಗೆ ಶೇ 30ರಷ್ಟು ಬಸ್‌ಗಳನ್ನು ಓಡಿಸಲಾಗಿದೆ. ಜನರ ಒತ್ತಾಯದ ಮೇರೆಗೂ ಬಿಡಲಾಗಿದೆ. ಮಧ್ಯಾಹ್ನದ ವೇಳೆ ಸಂಚಾರ ಸುಗಮವಾಗಿದೆ
ರಾಜೇಶ್‌ ಹುದ್ದಾರ ಹಿರಿಯ ವಿಭಾಗೀಯ ನಿಯಂತ್ರಕ ಎನ್‌ಡಬ್ಲ್ಯೂಕೆಆರ್‌ಟಿಸಿ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.