ADVERTISEMENT

ವಿಟಿಯುನಿಂದ ‘ಲ್ಯಾಬ್ಸ್ ಆನ್ ವ್ಹೀಲ್ಸ್’

ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿಜ್ಞಾನ ಕಲಿಸುವ ಉದ್ದೇಶ

ಎಂ.ಮಹೇಶ
Published 18 ಫೆಬ್ರುವರಿ 2021, 19:31 IST
Last Updated 18 ಫೆಬ್ರುವರಿ 2021, 19:31 IST
ಬೆಳಗಾವಿಯ ವಿಟಿಯುನಿಂದ ‘ಲ್ಯಾಬ್ಸ್ ಆನ್ ವ್ಹೀಲ್ಸ್’ ಯೋಜನೆಗಾಗಿ ಗುರುತಿಸಿರುವ ಬಸ್
ಬೆಳಗಾವಿಯ ವಿಟಿಯುನಿಂದ ‘ಲ್ಯಾಬ್ಸ್ ಆನ್ ವ್ಹೀಲ್ಸ್’ ಯೋಜನೆಗಾಗಿ ಗುರುತಿಸಿರುವ ಬಸ್   

ಬೆಳಗಾವಿ: ಲ್ಯಾಬ್ಸ್ ಆನ್ ವ್ಹೀಲ್ಸ್‌.

– ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಕಾರ್ಯಕ್ರಮದಲ್ಲಿ ರೂಪಿಸಿರುವ ವಿಶೇಷ ಯೋಜನೆ ಇದು.

ವಿಜ್ಞಾನದ ಕೆಲವು ಕಲ್ಪನೆಗಳನ್ನು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ತಿಳಿಸಲು ಈ ಯೋಜನೆಯನ್ನು ತನ್ನ ಎನ್‌ಎಸ್ಎಸ್‌ ಘಟಕದ ಸಹಯೋಗದಲ್ಲಿ ಜಾರಿಗೆ ತರುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಸ್ಸೊಂದನ್ನು ಗುರುತಿಸಲಾಗಿದೆ.  ಅದನ್ನು ವಿಜ್ಞಾನದ ಮಾಹಿತಿಯ ಕಣಜದ ರೀತಿಯಲ್ಲಿ ವಿನ್ಯಾಸಗೊಳಿಸಲಾಗುವುದು. ಮೂಲ ವಿಜ್ಞಾನದ ವಿಷಯ ಪರಿಣಿತರಿಂದ ವಿಜ್ಞಾನದ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುತ್ತದೆ ಎನ್ನುತ್ತಾರೆ ಕುಲಪತಿ ಪ್ರೊ.ಕರಿಸಿದ್ದಪ್ಪ.

ADVERTISEMENT

ಎಲ್ಲ ಭಾಗವನ್ನೂ ಬಳಸಿಕೊಂಡು:

ಬಸ್‌ನ ಕಿಟಕಿಗಳನ್ನು ಪ್ರದರ್ಶನದ ಪರದೆಗಳಾಗಿ ಮಾರ್ಪಾಡಿಸಿಕೊಂಡು ಅದರ ಮೇಲೆ ಟೆಂಟೆಡ್‌ ಗ್ಲಾಸ್‌ ಅಥವಾ ಡಾಟ್ ಪ್ರಿಂಟ್ ಮಾಡಿಸಿ ‘ವಿಜ್ಞಾನ ಬೆಳೆದು ಬಂದ ಹಾದಿ’ ವಿಷಯಕ್ಕೆ ಸಂಬಂಧಿಸಿದ ಅಂಶಗಳನ್ನು ಚಿತ್ರ ಮತ್ತು ಘಟನೆಯ ವಿವರಗಳನ್ನು ಹಾಕಲಾಗುವುದು. ವಿಶ್ವದ ರಚನೆಯಿಂದ ಇಂದಿನ ಕೃತಕ ಬುದ್ಧಿಮತ್ತೆವರೆಗೆ ಮಾಹಿತಿ ಇರಲಿದೆ. ಅದಕ್ಕೆ ತಕ್ಕಂತೆ ಪರಿಕರಗಳನ್ನು ಅಳವಡಿಸಲಾಗುವುದು. ಈ ಸಂಚಾರಿ ಪ್ರಯೋಗಾಲಯ ಜಿಲ್ಲೆಯಾದ್ಯಂತ ಶಾಲೆಗಳಿಗೆ ಸಂಚರಿಸಲಿದೆ.

ಕಿಟಕಿಯ ಮೇಲ್ಭಾಗದ ಅಂಚಿಗೆ ಹೊಂದಿಕೊಂಡು ಬಸ್‌ನ ಸುತ್ತಲೂ ಎರಡು ಅಡಿ ಅಗಲ ಹಾಗೂ ಮೂರು ಅಡಿ ಉದ್ದದ ಟ್ರಾನ್ಸ್‌ಪರೆಂಟ್ ಶೀಟ್ ವಿತ್ ಡಾಟ್‌ ಪ್ರಿಂಟ್‌ ಇರುವ ವ್ಯವಸ್ಥೆ ಮಾಡಿ, ಅಲ್ಲಿ ಸಂಪೂರ್ಣವಾಗಿ ಖಗೋಳವಿಜ್ಞಾನದ ಅಂಶಗಳನ್ನು ತೋರಿಸಲು ಉದ್ದೇಶಿಸಲಾಗಿದೆ. ಮುಖ್ಯವಾಗಿ ನಕ್ಷತ್ರಗಳ ಹುಟ್ಟು, ಅವುಗಳ ಜೀವನಚಕ್ರ ಮೊದಲಾದ ಅಂಶಗಳನ್ನು ಚಿತ್ರಿಸಲಾಗುವುದು. ಭೂಕೇಂದ್ರ ಸಿದ್ಧಾಂತ ಹಾಗೂ ಸೂರ್ಯಕೇಂದ್ರಿ ಸಿದ್ಧಾಂತಗಳನ್ನು ತಿಳಿಸಲಾಗುವುದು.

ಕಿಟಕಿಯ ಕೆಳಭಾಗದಲ್ಲಿ ಪೋಸ್ಟರ್‌ಗಳನ್ನು ಹಾಕಲು ವ್ಯವಸ್ಥೆ ಮಾಡಿ, ಅಲ್ಲಿ ಭೂಮಿಯ ಮೇಲೆ ಜೀವಿಯ ಉಗಮ ಹಾಗೂ ಬೆಳವಣಿಗೆ ಬಗ್ಗೆ ಚಿತ್ರಿಸಬಹುದು. ಮಾನವನ ಪ್ರಮುಖ ಅಂಗ ಹಾಗೂ ಅವುಗಳ ಕಾರ್ಯನಿರ್ವಹಣೆ ಬಗ್ಗೆ ತಿಳಿಸಿಕೊಡಬಹುದು. ಬಸ್‌ನ ಒಳಗೆ ಹೆಚ್ಚಾಗಿ ಭೌತವಿಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್‌ಗೆ ಸಂಬಂಧಿಸಿದಂತೆ ಮತ್ತು ಬೆಳಕು, ಶಕ್ತಿ ಹಾಗೂ ಒತ್ತಡ ಕುರಿತು ಪ್ರಯೋಗಗಳಿಗೆ ವ್ಯವಸ್ಥೆ ಮಾಡಲಾಗುವುದು ಎನ್ನುತ್ತಾರೆ ಅವರು.

ಏನಿರಲಿದೆ ಈ ಲ್ಯಾಬ್‌ನಲ್ಲಿ?

* ಟೆಲಿಸ್ಕೋಪ್, ಮೈಕ್ರೊಸ್ಕೋಪ್‌ ಜೊತೆಗೆ ಎಲೆಕ್ಟ್ರಾನ್ ಮೈಕ್ರೊಸ್ಕೋಪ್‌ ಕಾರ್ಯವೈಖರಿ ಪರಿಚಯ.

* ಮ್ಯಾಗ್ನೆಟ್ ಹಾಗೂ ಕಾಪರ್ ಕಾಯಿಲ್ ಬಳಸಿ ಸೂಪರ್‌ಕಂಡಕ್ಟಿವಿಟಿ ಬಗ್ಗೆ ತಿಳಿಸುವುದು.

* ಬುಲಟ್ ರೈಲು ಹಾಗೂ ಮ್ಯಾಗ್ನೆಟ್‌ ರೈಲಿನ ಮಾಹಿತಿ.

* ಸೆಮಿಕಂಡಕ್ಟರ್ ಹೇಗೆ ವಾಹಕಗಳಿಗಿಂತ ಭಿನ್ನ ಮತ್ತು ಅದರ ಉಪಯುಕ್ತ ಅಂಶಗಳೇನು, ಗುಣಲಕ್ಷಣಗಳೇನು ಎನ್ನುವುದನ್ನು ಸುಲಭವಾಗಿ ಕಂಡುಹಿಡಿಯುವ ಪ್ರಯೋಗಗಳು ಇರಲಿವೆ.

* ಸಣ್ಣ ಆಂಟೆನಾ ಅಳವಡಿಸಿ ಟಿವಿ‌, ಮೊಬೈಲ್‌ ಮೊದಲಾದವು ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನು ಪ್ರಯೋಗದ ಮೂಲತ ತೋರಿಸುವುದು.

* ಅಪಾಯಕಾರಿ ಅಲ್ಲದ ಕೆಲವು ಕೆಮಿಕಲ್‌ಗಳನ್ನು ಬಳಸಿ ಕೆಲವು ಪ್ರಯೋಗ.

* ವಿಜ್ಞಾನಕ್ಕೆ ಭಾರತೀಯರ ಕೊಡುಗೆಗಳ ಚಿತ್ರಣ.

* ಪ್ರೊಜೆಕ್ಟರ್‌ ಮೂಲಕ ವಿಜ್ಞಾನದ ವಿಸ್ಮಯಗಳ ವಿಡಿಯೊಗಳ ಪ್ರದರ್ಶನ.

* ಬಸ್‌ನ ಚಾವಣಿಯ ಒಳಬದಿಯಲ್ಲಿ ಗೆಲ್ಯಾಕ್ಸಿ ಗುಂಪಿನ ಚಿತ್ರಣ.


* ಬಸ್‌ನ ಹಿಂದಿನ ಗಾಜಿನ ಒಳಬದಿಯಲ್ಲಿ ಟಿವಿ ಅಥವಾ ಪ್ರೊಜೆಕ್ಟರ್ ಹಾಕಿ ಸ್ಮಾರ್ಟ್‌ ತರಗತಿಗೆ ವ್ಯವಸ್ಥೆ.

****

10 ಸರ್ಕಾರಿ ಶಾಲೆ ದತ್ತು

‘ವಿಟಿಯುನಿಂದ ಜಿಲ್ಲೆಯ 10 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲಾಗಿದೆ. ಅದರಲ್ಲಿ ಗೋಕಾಕ ತಾಲ್ಲೂಕು ಬೇಟಗೇರಿ ಹಾಗೂ ಕಲ್ಲೋಳಿ ಶಾಲೆಯಲ್ಲಿ ಎನ್‌ಎಸ್‌ಎಸ್‌ ಘಟಕ ಹಾಗೂ ಯುವಾ ಬ್ರಿಗೇಡ್ ಸಹಯೋಗದಲ್ಲಿ ವಿಜ್ಞಾನ ಉದ್ಯಾನ ಮತ್ತು ವಿಜ್ಞಾನ ಪ್ರಯೋಗಾಲಯದ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ’ ಎಂದು ಕುಲಪತಿ ತಿಳಿಸಿದರು.

***

ಈ ಸಂಚಾರಿ ಪ್ರಯೋಗಾಲಯದಲ್ಲಿ ಮಕ್ಕಳಿಗೆ ವಿಜ್ಞಾನದ ವಿಷಯಗಳನ್ನು ತಿಳಿಸಿಕೊಡಲು ವಿಶ್ವವಿದ್ಯಾಲಯದ ‍ಪ್ರಾಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸ್ವಯಂಸೇವಕರನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ
ಪ್ರೊ.ಕರಿಸಿದ್ದಪ್ಪ
ಕುಲಪತಿ, ವಿಟಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.