ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹರ್ಲಾಪುರ ಗ್ರಾಮದಲ್ಲಿ ಜಮೀನಿಗಾಗಿ ನಡೆದ ಜಗಳದಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ‘ತಂಟೆ ನಡೆದಿದ್ದು ನಿಜ. ವಿವಸ್ತ್ರಗೊಳಿಸಿ ಹಲ್ಲೆ ಮಾಡಲಾಗಿಲ್ಲ’ ಎಂದಿದ್ದಾರೆ.
‘10 ಎಕರೆ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನನ್ನ ಪತಿಯ ಸಹೋದರಿಯರು ಹಾಗೂ ಇತರ 15 ಜನ ಸೇರಿ ಫೆಬ್ರುವರಿ 20ರಂದು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ. ಅರೆಬೆತ್ತಲೆಯಾಗಿಯೇ ನಾನು ಸವದತ್ತಿ ಪೊಲೀಸ್ ಠಾಣೆಗೆ ಹೋಗಿದ್ದೆ. ಆದರೆ, ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ. ಬೆತ್ತಲೆ ಮಾಡಿ, ಹೊಡೆದಿದ್ದಕ್ಕೆ ಸಾಕ್ಷಿ ಕೊಡಿ ಎಂದು ಕೇಳಿದರು. ಜಗಳದಲ್ಲಿ ನನ್ನ ಹೊಟ್ಟೆಗೆ ತೀವ್ರ ಪೆಟ್ಟಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಲು ನಾನು ಧಾರವಾಡಕ್ಕೆ ಹೋದೆ’ ಎಂದು ಸಂತ್ರಸ್ತೆ ರತ್ನಾ ಪಟ್ಟಣಶೆಟ್ಟಿ ನಗರದಲ್ಲಿ ಮಂಗಳವಾರ ಮಾಧ್ಯಮಗಳ ಮುಂದೆ ದೂರಿದ್ದಾರೆ.
ಇದನ್ನು ಅಲ್ಲಗಳೆದ ಎಸ್ಪಿ, ‘ಫೆ.20ರಂದು ಜಮೀನಿಗೆ ಸಂಬಂಧಿಸಿದಂತೆ ಗಲಾಟೆ ನಡೆದ ಬಗ್ಗೆ 112 ನಂಬರ್‌ಗೆ ಜನ ಕರೆ ಮಾಡಿ ತಿಳಿಸಿದ್ದರು. ಪೊಲೀಸರು ಸ್ಥಳಕ್ಕೆ ಹೋಗಿ ವಿಚಾರಿಸಿದ್ದಾರೆ. ಜಗಳವಾಗಿದ್ದು ನಿಜ. ಆದರೆ, ಬೆತ್ತಲೆ ಮಾಡಿ ಹೊಡೆದ ಘಟನೆ ನಡೆದಿಲ್ಲ. ಆಸುಪಾಸಿನ ಜನರಿಂದಲೂ ಹೇಳಿಕೆ ಪಡೆಯಲಾಗಿದೆ. ಅದೇ ದಿನ ಮಹಿಳೆಯನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆಗ ಅವರು ದೂರು ನೀಡಲು ನಿರಾಕರಿಸಿದ್ದರು. ನಂತರ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. 10 ದಿನಗಳ ಬಳಿಕ ಪೊಲೀಸರೇ ಆಸ್ಪತ್ರೆಗೆ ಹೋಗಿ ಕೇಳಿದರೂ ಅವರು ದೂರು ನೀಡಿಲ್ಲ. ಊರ ಹಿರಿಯರ ಮಾತು ಕೇಳುತ್ತೇನೆ ಅಂದಿದ್ದಾರೆ’ ಎಂದು ತಿಳಿಸಿದರು.
‘4 ಎಕರೆ 19 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಕಳೆದ ಕೆಲವು ವರ್ಷಗಳಿಂದ ತಕರಾರು ನಡೆದೇ ಇದೆ. 2024ರ ಜೂನ್ 15ರಂದು ಜಮೀನಿನಲ್ಲಿ ಬಿತ್ತಲು ಮುಂದಾದಾಗ ಏಳು ಜನ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ಸಂತ್ರಸ್ತೆ ಜೂನ್ 18ರಂದು ದೂರು ನೀಡಿದ್ದರು. ಅದೇ ರೀತಿ, ಡಿಸೆಂಬರ್ 19ರಂದು ಹೊಲದಲ್ಲಿ ಕಳೆ ತೆಗೆಯುತ್ತಿದ್ದಾಗ ಯಲ್ಲಪ್ಪ ಉರೂಫ್ ಪಟ್ಟಣಗೌಡ ಪಾಟೀಲ ಎಂಬುವರು ಹೊಲಕ್ಕೆ ಬಂದು ಜಗಳ ತೆಗೆದು, ಬಟ್ಟೆ ಹರಿದು ಮಾನಭಂಗ ಮಾಡಲು ಯತ್ನಿಸಿದರು ಎಂದೂ 2025ರ ಜನವರಿ 1ರಂದು ದೂರು ದಾಖಲಿಸಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ಜಾರ್ಜ್‌ಶೀಟ್ ಸಲ್ಲಿಸಲಾಗಿದೆ’ ಎಂದರು.
‘ರತ್ನಾ ಅವರ ಪತಿ ತೀರಿಕೊಂಡಿದ್ದಾರೆ. ವಿವಾದಕ್ಕೆ ಒಳಪಟ್ಟ ಜಮೀನನ್ನು ರತ್ನಾ ಅವರ ನಾದಿನಿಯರ (ಗಂಡನ ಸಹೋದರಿಯರು) ಹೆಸರಿಗೆ ಗೇಣಿ ನೀಡಲಾಗಿದೆ. ಹೀಗಾಗಿ, ಅವರು ಉಳುಮೆ ಮಾಡುತ್ತಿದ್ದಾರೆ. ಅದರಲ್ಲೂ ತಮಗೆ ಪಾಲು ಬರುತ್ತದೆ ಎಂದು ರತ್ನಾ ಅವರು ವ್ಯಾಜ್ಯ ಹೂಡಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.