ADVERTISEMENT

ಸಿಂಹಗಳಿಗೆ ಗೋಮಾಂಸ ಬದಲಿಗೆ ಕೋಳಿ ಮಾಂಸ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 14:23 IST
Last Updated 2 ಮಾರ್ಚ್ 2021, 14:23 IST

ಬೆಳಗಾವಿ: ತಾಲ್ಲೂಕಿನ ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಮೃಗಾಲಯಕ್ಕೆ ಕೆಲವು ದಿನಗಳ ಹಿಂದೆ ಮೂರು ಸಿಂಹಗಳನ್ನು ತರಿಸಲಾಗಿದ್ದು, ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯ ಪರಿಣಾಮ ಅವುಗಳಿಗೆ ಗೋಮಾಂಸದ ಬದಲಿಗೆ ಕೋಳಿ ಮಾಂಸವನ್ನು ಆಹಾರವಾಗಿ ನೀಡಲಾಗುತ್ತಿದೆ.

‘ಬನ್ನೇರಘಟ್ಟ ಜೈವಿಕ ಉದ್ಯಾನದಿಂದ ತರಲಾಗಿರುವ ‘ನಕುಲ’, ‘ಕೃಷ್ಣ’ ಹಾಗೂ ‘ನಿರುಪಮಾ’ ಹೆಸರಿನ 11 ವರ್ಷದ ಸಿಂಹಗಳಿಗೆ ದಿನಕ್ಕೆ ತಲಾ 7ರಿಂದ 9 ಕೆ.ಜಿ. ದನದ ಮಾಂಸ ಬೇಕು. ಆದರೆ, ಕಾಯ್ದೆ ಜಾರಿ ಪರಿಣಾಮ ಆ ಮಾಂಸ ಸಿಗುತ್ತಿಲ್ಲ. ಪರಿಣಾಮ ಚಿಕನ್ ಹಾಗೂ ಚಿಕನ್ ಲಿವರ್ ಕೊಡಲಾಗುತ್ತಿದೆ. ಇಲ್ಲಿಗೆ ಬಂದ ಮೊದಲೆರಡು ದಿನ ಕಡಿಮೆ ಆಹಾರ ತಿನ್ನುತ್ತಿದ್ದವು. ಕ್ರಮೇಣ ಹೆಚ್ಚಿನ ಆಹಾರ ತಿನ್ನುತ್ತಿವೆ’ ಎಂದು ಬೆಳಗಾವಿ ವೃತ್ತದ ಸಿಸಿಎಫ್‌ ಬಸವರಾಜ ಪಾಟೀಲ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

‘ದನದ ಮಾಂಸ ಪೂರೈಕೆಗೆ ವಿಶೇಷ ಅನುಮತಿ ನೀಡುವಂತೆ ಸರ್ಕಾರವನ್ನು ಕೋರಲಾಗಿದೆ. ಕಾಯ್ದೆಯಲ್ಲಿ, 13 ವರ್ಷ ಮೀರಿದ ವಯಸ್ಸಿನ ದನಗಳ ಮಾಂಸ ಪೂರೈಕೆಗೆ ಅವಕಾಶವಿದ್ದು, ಅದನ್ನು ಆಧರಿಸಿ ಟೆಂಡರ್ ಕರೆಯಲಾಗಿದೆ. ಆ ಮಾಂಸ ಸಿಗುವವರೆಗೂ ಕೋಳಿ ಮಾಂಸ ಕೊಡುವುದು ಅನಿವಾರ್ಯವಾಗಿದೆ. ಹೊಸ ವಾತಾವರಣಕ್ಕೆ ಅವು ನಿಧಾನವಾಗಿ ಒಗ್ಗಿಕೊಳ್ಳುತ್ತಿವೆ. ಅವುಗಳ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ’ ಎಂದರು.

ADVERTISEMENT

‘ಸಿಂಹಗಳಿಗೆ ದನದ ಮಾಂಸ ಪೂರೈಕೆಗೆ ಸರ್ಕಾರವೇ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.