ADVERTISEMENT

ಸಿ.ಎಂ ಭೇಟಿ ಹಿನ್ನೆಲೆ: ಬಿಮ್ಸ್ ನಿರ್ದೇಶಕರಿಂದ ರಜೆ ಅರ್ಜಿ!

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 7:37 IST
Last Updated 2 ಜೂನ್ 2021, 7:37 IST

ಬೆಳಗಾವಿ: ಇಲ್ಲಿನ ಬಿಮ್ಸ್‌ (ಜಿಲ್ಲಾಸ್ಪತ್ರೆ) ಅವ್ಯವಸ್ಥೆ ನಿವಾರಣೆಗಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಜೂನ್‌ 4ರಂದು ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ನಡುವೆಯೇ ಅಲ್ಲಿನ ನಿರ್ದೇಶಕಡಾ.ವಿನಯ ದಾಸ್ತಿಕೊಪ್ಪ ಒಂದು ತಿಂಗಳು ರಜೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ರಜೆ ಅರ್ಜಿ ಕಳುಹಿಸಿದ್ದಾರೆ. ವೈಯಕ್ತಿಕ ಕಾರಣ ನೀಡಿದ್ದಾರೆ. ‘ನನ್ನ ಅನುಪಸ್ಥಿತಿಯಲ್ಲಿ ಬಿಮ್ಸ್‌ ಅಂಗರಚನಾ ವಿಭಾಗದ ಮುಖ್ಯಸ್ಥರಾದ ಪ್ರಾಧ್ಯಾಪಕ ಡಾ.ಉಮೇಶ ಕುಲಕರ್ಣಿ ಅವರು ನಿರ್ದೇಶಕರ ಹುದ್ದೆಯ ಕಾರ್ಯಭಾರ ನೋಡಿಕೊಳ್ಳುತ್ತಾರೆ’ ಎಂದು ದಾಸ್ತಿಕೊಪ್ಪ ಪತ್ರದಲ್ಲಿ ತಿಳಿಸಿದ್ದಾರೆ.

‘ಮುಖ್ಯಮಂತ್ರಿಯು ಬಿಮ್ಸ್‌ ಬಗೆಗಿನ ವರದಿಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ನಗರ ಪ್ರವಾಸದ ವೇಳೆ ಅವರಿಗೆ ಮುಜುಗರ ಆಗಬಾರದೆಂಬ ಕಾರಣದಿಂದ ಬಿಮ್ಸ್‌ ನಿರ್ದೇಶಕರಿಗೆ ಕಡ್ಡಾಯ ರಜೆ ಮೇಲೆ ಕಳುಹಿಸಲಾಗುತ್ತಿದೆಯೇ?’ ಎಂಬ ಅನುಮಾನವೂ ಕಾಡುತ್ತಿದೆ.

ADVERTISEMENT

ಮುಖ್ಯಮಂತ್ರಿ ಪ್ರವಾಸ ಹಿನ್ನೆಲೆಯಲ್ಲಿ ಬಿಮ್ಸ್‌ನಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಕೆಲವು ವೈದ್ಯರಿಗೆ ನೋಟಿಸ್ ಕೊಡಲಾಗಿದ್ದು 24 ಗಂಟೆಗಳಲ್ಲಿ ವಿವರಣೆ ಕೇಳಲಾಗಿತ್ತು. ಆದರೆ, ಗಡುವು ಮುಗಿದರೂ ಉತ್ತರ ಬಂದಿಲ್ಲ ಎನ್ನಲಾಗುತ್ತಿದೆ. ಆಸ್ಪತ್ರೆಯಲ್ಲಿ ತಮಗೆ ನಿರ್ಬಂಧ ವಿಧಿಸಿರುವುದು ಕೂಡ ರೋಗಿಗಳ ಸಹಾಯಕರ (ಅಟೆಂಡರ್‌) ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಅಲ್ಲಿನ ಸಿಬ್ಬಂದಿ ರೋಗಿಗಳನ್ನು ಸರಿಯಾಗಿ ಆರೈಕೆ ಮಾಡುತ್ತಿಲ್ಲ ಎನ್ನುವ ದೂರುಗಳು ಕೂಡ ಅವರಿಂದ ಬರುತ್ತಿವೆ. ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುವುದು ಸಾಮಾನ್ಯವಾಗಿದೆ.

‘ಕೋವಿಡ್ ಹರಡುವಿಕೆ ತಡೆಯುವ ಉದ್ದೇಶದಿಂದ ರೋಗಿಗಳ ಸಹಾಯಕರಿಗೆ ವಾರ್ಡ್‌ಗಳಿಗೆ ಹೋಗುವುದಕ್ಕೆ ಅವಕಾಶ ಕೊಟ್ಟಿಲ್ಲ’ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.