
ಚಿಕ್ಕೋಡಿ: ಕೃಷಿಕ ವಿಜ್ಞಾನಿಯಾಗಿ, ಕೃಷಿಯನ್ನು ಉದ್ಯಮವನ್ನಾಗಿ ಮಾಡಿಕೊಂಡಲ್ಲಿ ಹೊಲವೇ ಟಂಕಶಾಲೆಯಾಗಲು ಸಾಧ್ಯವಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಬೇಸಾಯ ಮಾಡಲು ರೈತ ಸಮೂಹ ಮುಂದಾಗಬೇಕಿದೆ ಎಂದು ಚಿಕ್ಕೋಡಿಯ ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಹೇಳಿದರು.
ತಾಲ್ಲೂಕಿನ ಡೋಣವಾಡ ಗ್ರಾಮದ ಕಲ್ಮೇಶ್ವರ ದೇವಸ್ಥಾನ ಆವರಣದಲ್ಲಿ ಕೃಷಿ ಇಲಾಖೆ ಹಾಗೂ ಚಿಕ್ಕೋಡಿ ತಾಲ್ಲೂಕು ಕೃಷಿಕ ಸಮಾಜ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕೃಷಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊಲದಲ್ಲಿ ಅನ್ನ ಚೆನ್ನಾಗಿ ಇದ್ದರೆ, ತಟ್ಟೆಯಲ್ಲಿಯೂ ಅನ್ನ ಚೆನ್ನಾಗಿರುತ್ತದೆ. ಹಾಗಾಗಿ ಹೊಲ ಗದ್ದೆಗಳಲ್ಲಿ ಕಬ್ಬು ಸೇರಿದಂತೆ ಏಕ ಬೆಳೆಗೆ ಅಂಟಿಕೊಳ್ಳದೆ ವೈವಿದ್ಯಮಯ ಬೆಳೆಯನ್ನು ರೈತರು ಬೆಳೆಯಬೇಕು. ಕಬ್ಬಿನ ರವದಿ ಸುಡಬೇಡಿ. ಸಾವಯವ ಕೃಷಿ ಬಿಡಬೇಡಿ ಎಂದರು.
ಚಿಕ್ಕೋಡಿ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ ಮಾತನಾಡಿ, ಸಂಘಟನೆಯಲ್ಲಿ ಶಕ್ತಿ ಇದೆ ಎಂಬುವುದು ಇತ್ತೀಚೆಗೆ ಕಬ್ಬು ಬೆಳೆಗಾಗಿ ನಡೆದ ರೈತರ ಹೋರಾಟವೇ ನಿದರ್ಶನವಾಗಿದೆ. ಪ್ರತಿಯೊಬ್ಬರೂ ತಮ್ಮ ಮದುವೆ ವಾರ್ಷಿಕೋತ್ಸವ, ಜನ್ಮದಿನ, ಜಾತ್ರೆ, ಉತ್ಸವ ಸೇರಿದಂತೆ ವಿವಿಧ ವಿಶೇಷ ಸಂದರ್ಭದಲ್ಲಿ ಸಸಿ ನೆಟ್ಟು ಬೆಳೆಸುವ ಹೊಣೆಗಾರಿಕೆ ಹೊರಬೇಕು ಎಂದು ತಿಳಿಸಿದರು.
ಚಿಕ್ಕೋಡಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಟಿ.ಎಸ್. ಮೋರೆ ಮಾತನಾಡಿದರು. ಸಿರಿಧಾನ್ಯ ಬೆಳೆದ ರೈತ ಶಂಕರ ಚೌಗಲಾ ಹಾಗೂ ಕೃಷಿ ಮಹಿಳೆ ಲಲಿತಾ ಕಮತೆ ಅವರನ್ನು ಕೃಷಿ ಇಲಾಖೆಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.
ಚಿಕ್ಕೋಡಿ ತಾಲ್ಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಅನಿಲ ಮಾನೆ, ಸಹಾಯಕ ಕೃಷಿ ನಿರ್ದೇಶಕ ಡಿ.ಬಿ. ಚವ್ಹಾಣ, ಪಿಎಸ್‍ಐ ಬಸಗೌಡ ನೇರ್ಲಿ, ಕಲ್ಲಪ್ಪ ಕಿವಡ, ರವೀಂದ್ರ ರಾಮನಗೋಳ, ಅರ್ಜುನ ಕಿವಡ, ಶಂಕರಗೌಡ ಪಾಟೀಲ ಇದ್ದರು. ರಮೇಶ ಚಡಚಾಳ ಸ್ವಾಗತಿಸದರು. ರಾಚಪ್ಪ ಮಗದುಮ್ಮ ನಿರೂಪಿಸಿದರು. ಅನುಪಮಾ ಮಹಾಜನ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.