ADVERTISEMENT

ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗುತ್ತಾರೆ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 12:34 IST
Last Updated 29 ಅಕ್ಟೋಬರ್ 2025, 12:34 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ಬೆಳಗಾವಿ: ‘ರಾಜ್ಯದ ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ನಡೆಯಲಿದೆ. ಮುಖ್ಯಮಂತ್ರಿ ಹುದ್ದೆಗಾಗಿ ಲಾಬಿ ಮಾಡುವವರಿಗೆ ಅದು ಸಿಗುವುದಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗುತ್ತಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಜಟಾಪಟಿ ಆರಂಭವಾಗಿದೆ. ಪ್ರತಿ ಆಕಾಂಕ್ಷಿ ಲಾಬಿ ನಡೆಸುತ್ತಿದ್ದಾರೆ. ಬೆಂಬಲಿಗರೂ ಅವರ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ ಚಿತ್ರದಲ್ಲಿ ಕಾಣಿಸುತ್ತಿಲ್ಲ. ಆದರೆ, ರಾಜ್ಯದ ಸಾರಥ್ಯ ಡಾರ್ಕ್‌ಹಾರ್ಸ್‌ಗೆ ಸಿಗಲಿದೆ’ ಎಂದರು.

‘ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆ ಮುಖ್ಯಮಂತ್ರಿ ಆಗಬೇಕೆಂದು ಕಾಯುತ್ತಿದ್ದಾರೆ. ಖರ್ಗೆ ಹೆಸರು ಬಂದಾಗ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರರು ಸ್ಪರ್ಧೆಯಿಂದ ಹೊರಗುಳಿಯುತ್ತಾರೆ’ ಎಂದರು.

ADVERTISEMENT

‘ಎಂ.ಬಿ.ಪಾಟೀಲ ಸವಾಲು ಸ್ವೀಕಾರ ಮಾಡಿದ್ದೇವೆ. ಸನಾತನ ಧರ್ಮದ ರಕ್ಷಣೆಗಾಗಿ ಬಬಲೇಶ್ವರದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಆರಂಭಿಸುತ್ತೇವೆ. ದಾವಣಗೆರೆಯಲ್ಲಿ ಸಮಾರೋಪ ಕಾರ್ಯಕ್ರಮ ನಡೆಸುತ್ತೇವೆ. ಹಿಂದು ಧರ್ಮದ ಬಗ್ಗೆ ಮಠಾಧೀಶರು, ರಾಜಕಾರಣಿಗಳು ಮಾತನಾಡಿದರೆ, ಅದೇ ದಾಟಿಯಲ್ಲಿ ಉತ್ತರ ಕೊಡುತ್ತೇವೆ’ ಎಂದು ಹೇಳಿದರು.

‘ಕೆಲವು ಮಠಾಧೀಶರು ಬಸವೇಶ್ವರರ ಹೆಸರನ್ನು ಬಳಸಿಕೊಂಡು ನಾಟಕ ಮಾಡುತ್ತಿದ್ದಾರೆ. ಸಮಾಜ ಸುಧಾರಕರಾದ ಬಸವೇಶ್ವರರು ಲಿಂಗಾಯತ ಧರ್ಮ ಸ್ಥಾಪಿಸಿದ ಬಗ್ಗೆ ಯಾವುದೇ ದಾಖಲೆ ಅಥವಾ ಪುರಾವೆಗಳಿಲ್ಲ. ಆದರೆ, ಅವರು ಹಿಂದೂ ಧರ್ಮದಲ್ಲಿನ ಮೌಢ್ಯ ಆಚರಣೆಗಳ ವಿರುದ್ಧ ಕೆಲಸ ಮಾಡಿದರು. ಬಸವೇಶ್ವರರ ಹೆಸರನ್ನು ಬಳಸುವವರು ‘ಪಾದಪೂಜೆ’ ಹೆಸರಿನಲ್ಲಿ ತಮ್ಮ ಪಾದಗಳನ್ನು ತೊಳೆಸಿಕೊಳ್ಳುವುದನ್ನು ನಿಲ್ಲಿಸಬೇಕು. ಸನಾತನ ಧರ್ಮದ ಕೇಸರಿ ಬಿಟ್ಟು ಹಸಿರು ಬಟ್ಟೆ ಧರಿಸಬೇಕು’ ಎಂದು ಹೇಳಿದರು.

‘ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ’ ಎಂದು ಯತ್ನಾಳ ಹೇಳಿದರು.

‘ಬಿಜೆಪಿ ಹೈಕಮಾಂಡ್‌ ಮತ್ತೆ ನನ್ನನ್ನು ಕರೆಯದಿದಿದ್ದರೆ, ಜೆಸಿಬಿ(ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ) ಪಕ್ಷ ಸಿದ್ಧವಾಗಿ ಇಟ್ಟುಕೊಂಡಿದ್ದೇನೆ. 2028ರಲ್ಲಿ ಇದರ ನಾನು ಮುಖ್ಯಮಂತ್ರಿಯಾಗುತ್ತೇನೆ. ಮೂರು ಪಕ್ಷಗಳಿಂದ ಸಾಕಷ್ಟು ಜನರು ನನ್ನೊಂದಿಗೆ ಬರುತ್ತಾರೆ’ ಎಂದರು.

‘ರಾಜ್ಯದಲ್ಲಿ ಬಿ.ವೈ.ವಿಜಯೇಂದ್ರ ಮತ್ತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದರೆ, ಆ ದಿನವೇ ಹೊಸ ಪಕ್ಷ ಸಿದ್ಧವಾಗುತ್ತದೆ. ಮೂರು ಪಕ್ಷಗಳಲ್ಲಿನ ಅತೃಪ್ತರನ್ನು ಕರೆತಂದು ಟಿಕೆಟ್ ಕೊಟ್ಟು ಗೆಲ್ಲಿಸುತ್ತೇನೆ. ಯಾವ ಕಾರಣಕ್ಕೂ ವಿಜಯೇಂದ್ರ ನಾಯಕತ್ವ ಒಪ್ಪುವುದಿಲ್ಲ. ನಮ್ಮದೇ ಪಕ್ಷ ಗಟ್ಟಿಯಾಗುತ್ತಿದೆ. ದೆಹಲಿಯಲ್ಲಿನ ಆಪ್ ಮಾದರಿಯಲ್ಲಿ ನಾನು ಬರುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.