ADVERTISEMENT

ಕೈಕೊಟ್ಟ ಮುಂಗಾರು: ಕಮರುತ್ತಿವೆ ಬೀಜ, ಒಣಗುತ್ತಿವೆ ಸಸಿಗಳು!

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 23:30 IST
Last Updated 15 ಜೂನ್ 2023, 23:30 IST
ಮಳೆಯಾಗದ್ದರಿಂದ ರೈತ ಹನುಮಂತ ಕುಗಜಿ ಕೊಡದಲ್ಲಿ ನೀರು ತಂದು, ಬೆಳಗಾವಿಯ ಯಳ್ಳೂರ ರಸ್ತೆಯ ತಮ್ಮ ಜಮೀನಿನಲ್ಲಿ ಬೆಳೆದ ಭತ್ತದ ಸಸಿಗೆ ಹಾಕುತ್ತಿರುವುದು –ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ
ಮಳೆಯಾಗದ್ದರಿಂದ ರೈತ ಹನುಮಂತ ಕುಗಜಿ ಕೊಡದಲ್ಲಿ ನೀರು ತಂದು, ಬೆಳಗಾವಿಯ ಯಳ್ಳೂರ ರಸ್ತೆಯ ತಮ್ಮ ಜಮೀನಿನಲ್ಲಿ ಬೆಳೆದ ಭತ್ತದ ಸಸಿಗೆ ಹಾಕುತ್ತಿರುವುದು –ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ   
ಬೆಳಗಾವಿ ಜಿಲ್ಲೆಯಲ್ಲಿ 63 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ ಹಾಕಿಕೊಂಡಿದ್ದೇವೆ. ಆದರೆ, ಮಳೆ ಅಭಾವದಿಂದಾಗಿ ಈವರೆಗೆ ಶೇ 6ರಷ್ಟು ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಳಗಾವಿ: ಜೂನ್‌ ಮೂರನೇ ವಾರ ಬಂದರೂ ಮಳೆ ಸುರಿಯದ್ದರಿಂದ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಭತ್ತ ಬೆಳೆದಿದ್ದ ರೈತರು ಕಂಗಾಲಾಗಿದ್ದಾರೆ.

ಜೂನ್‌ನಲ್ಲಿ ಉತ್ತಮ ಮಳೆಯಾಗುತ್ತದೆ ಎಂಬ ನಿರೀಕ್ಷೆಯಿಂದ ಇಲ್ಲಿನ ವಡಗಾವಿ, ಅನಗೋಳ ಮತ್ತು ತಾಲ್ಲೂಕಿನ ಯಳ್ಳೂರಿನಲ್ಲಿ ರೈತರು ಮೇ ತಿಂಗಳ ಮೂರು, ನಾಲ್ಕನೇ ವಾರದಲ್ಲೇ ಭತ್ತದ ಒಣ ಬಿತ್ತನೆ ಮಾಡಿದ್ದರು. ಕೆಲವರು ನಾಟಿಗಾಗಿ ಭತ್ತದ ಸಸಿ ಬೆಳೆಸಿದ್ದರು. ಆದರೆ, ಕೆಲವೊಮ್ಮೆ ಸುರಿದ ಮಳೆಯಿಂದ ಮೊಳಕೆಯೊಡೆದಿದ್ದ ಬೀಜಗಳು ಈಗ ಭೂಮಿಯಲ್ಲೇ ಕಮರುತ್ತಿವೆ. ಮತ್ತೊಂದೆಡೆ ಭತ್ತದ ಸಸಿಗಳೂ ಒಣಗುತ್ತಿವೆ.

‘ನಮ್ಮಲ್ಲಿ ಬೆಳೆಯಲಾಗುವ ಬಾಸುಮತಿ, ಸಾಯಿರಾಮ್‌, ಇಂದ್ರಾಯಿಣಿ ತಳಿಗಳ ಭತ್ತಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಜೂನ್‌ನಲ್ಲಿ ಮೃಗಶಿರಾ ಮಳೆಯಾಗುತ್ತದೆಂದು ಪ್ರತಿ ಎಕರೆಗೆ ₹15 ಸಾವಿರದಿಂದ ₹20 ಸಾವಿರ ವ್ಯಯಿಸಿ ಬಿತ್ತನೆ ಮಾಡಿದ್ದೆವು. ಆದರೆ, ಭೂಮಿಯಲ್ಲೇ ಬೀಜ ಕಮರುತ್ತಿವೆ. ನಾಲ್ಕು ದಿನಗಳಲ್ಲಿ ಮಳೆಯಾಗದಿದ್ದರೆ, ಎರಡನೇ ಸಲ ಬಿತ್ತನೆ ಮಾಡುವ ಪರಿಸ್ಥಿತಿ ಸೃಷ್ಟಿಯಾಗಲಿದೆ’ ಎಂದು ರೈತ ರಾಜು ಮಾರ್ವೆ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ADVERTISEMENT

‘ಮಳೆಯಾದ ನಂತರ ನಾಟಿ ಮಾಡಲು ಭತ್ತದ ಸಸಿ ಬೆಳೆಸುತ್ತಿದ್ದೇನೆ. ಮಳೆ ಅಭಾವದಿಂದ ಅವು ಒಣಗುತ್ತಿವೆ. ಕೊಳವೆಬಾವಿ ಇದೆ. ಆದರೆ, ಅಸಮರ್ಪಕ ವಿದ್ಯುತ್‌ ಪೂರೈಕೆಯಿಂದಾಗಿ ಆ ನೀರೂ ಸಿಗುತ್ತಿಲ್ಲ’ ಎನ್ನುತ್ತಾರೆ ಮತ್ತೊಬ್ಬ ರೈತ ಹನುಮಂತ ಕುಗಜಿ.

ಶೇ 6ರಷ್ಟು ಬಿತ್ತನೆ

ಬೆಳಗಾವಿ ಜಿಲ್ಲೆಯಲ್ಲಿ 63 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ ಹಾಕಿಕೊಂಡಿದ್ದೇವೆ. ಆದರೆ, ಮಳೆ ಅಭಾವದಿಂದಾಗಿ ಈವರೆಗೆ ಶೇ 6ರಷ್ಟು ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಳಗಾವಿಯ ಯಳ್ಳೂರ ರಸ್ತೆಯ ಜಮೀನಿನಲ್ಲಿ ನಾಟಿ ಮಾಡಿದ್ದ ಭತ್ತದ ಬೀಜಗಳು ಮಳೆಯ ಅಭಾವದಿಂದಾಗಿ ಭೂಮಿಯಲ್ಲೇ ಕಮರುತ್ತಿವೆ –ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.