ADVERTISEMENT

ಅನುಮತಿ ಇರದಿದ್ದರೂ ಕರಾಳ ದಿನ ಆಚರಣೆ: ಗಡಿಯಲ್ಲಿ ಎಂಇಎಸ್‌ ನಾಡದ್ರೋಹಿ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 11:14 IST
Last Updated 1 ನವೆಂಬರ್ 2025, 11:14 IST
   

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ, ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಮುಖಂಡರು ಶನಿವಾರ ಕರಾಳ ದಿನ ಆಚರಿಸಿ, ನಾಡದ್ರೋಹ ಚಟುವಟಿಕೆ ಮುಂದುವರಿಸಿದರು.

ಕರಾಳ ದಿನ ಆಚರಣೆಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಆದರೂ, ಕರಾಳ ದಿನ ಆಚರಣೆ ಹಿನ್ನೆಲೆಯೆಲ್ಲಿ ನಗರದ ವಿವಿಧ ಮಾರ್ಗಗಳಲ್ಲಿ ಕೈಗೆ ಕಪ್ಪು ಬಟ್ಟೆ ಧರಿಸಿ ಮೆರವಣಿಗೆ ನಡೆಸಿದರು.

ಇದಕ್ಕೆ ಮಕ್ಕಳನ್ನೂ ಬಳಸಿಕೊಂಡರು. ಮಹಾನಗರ ಪಾಲಿಕೆ ಸದಸ್ಯ ವೈಶಾಲಿ ಭಾತಕಾಂಡೆ ನಾಡದ್ರೋಹಿ ಚಟುವಟಿಕೆಯಲ್ಲಿ ಭಾಗವಹಿಸಿದ್ದು ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತು. 

ADVERTISEMENT

‘ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಝಾಲಾಚ್‌ ಪಾಹಿಜೆ(ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಲೇಬೇಕು)’, ‘ಇರುವುದಾದರೆ ಮಹಾರಾಷ್ಟ್ರದಲ್ಲಿ ಇಲ್ಲವೇ ಜೈಲಿನಲ್ಲಿ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.

ಮಹಾದ್ವಾರ ರಸ್ತೆಯ ಸಂಭಾಜಿ ಉದ್ಯಾನದಿಂದ ಆರಂಭವಾದ ಮೆರವಣಿಗೆ ಫುಲಬಾಗ್‌ ಗಲ್ಲಿ, ಬಾಂಧುರ್‌ ಗಲ್ಲಿ, ಹೆಮುಕೆಲಾನಿ ಚೌಕ್‌, ಮುಖ್ಯ ಅಂಚೆ ಕಚೇರಿ ವೃತ್ತ, ರಾಮಲಿಂಗಖಿಂಡ ಗಲ್ಲಿ ಮತ್ತಿತರ ಮಾರ್ಗಗಳಲ್ಲಿ ಸಾಗಿ, ರೈಲ್ವೆ ಮೇಲ್ಸೇತುವೆ ಬಳಿ ಇರುವ ಮರಾಠ ಮಂದಿರ ತಲುಪಿತು. ಅಲ್ಲಿ ಎಂಇಎಸ್‌ ಮುಖಂಡರು ಸಭೆ ನಡೆಸಿದರು.

‘ಭಾಷಾವಾರು ಪ್ರಾಂತ್ಯ ರಚನೆ ವೇಳೆ, ನಮಗೆ ಕೇಂದ್ರದಿಂದ ಅನ್ಯಾಯವಾಗಿದೆ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.

ಮುಖಂಡರಾದ ಮನೋಹರ ಕಿಣೇಕರ, ರಮಾಕಾಂತ ಕೊಂಡೂಸ್ಕರ, ಪ್ರಕಾಶ ಶಿರೋಳಕರ, ಅಮರ ಯಳ್ಳೂರಕರ, ಸರಿತಾ ಪಾಟೀಲ, ಸರಸ್ವತಿ ಪಾಟೀಲ, ರೇಣು ಕಿಲ್ಲೇಕರ ಇತರರಿದ್ದರು. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ಪ್ರಕರಣ ದಾಖಲಿಸುತ್ತೇವೆ: ಕಮಿಷನರ್

‘ಕರಾಳ ದಿನ ಆಚರಣೆ ಹಿನ್ನೆಲೆಯಲ್ಲಿ ಮೆರವಣಿಗೆ ನಡೆಸಲು ಎಂಇಎಸ್‌ಗೆ ಅನುಮತಿ ನೀಡಿಲ್ಲ. ಅದರ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಸಂಸದ ಧೈರ್ಯಶೀಲ ಮಾನೆ, ಶಿವಸೇನಾ ನಾಯಕ ವಿಜಯ್ ದೇವನೆ ಮತ್ತಿತರರಿಗೆ ರಾಜ್ಯ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಜಿಲ್ಲಾ ಪೊಲೀಸರು ಮತ್ತು ಕೊಲ್ಹಾಪುರ ಪೊಲೀಸರು ಅವರನ್ನು ಕೊಗನೊಳ್ಳಿ ಬಳಿ ರಾಜ್ಯ ಗಡಿಯಲ್ಲಿ ಬಂಧಿಸಿ ವಾಪಸ್ ಕಳುಹಿಸಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್‌ ಭೂಷಣ ಬೊರಸೆ ಹೇಳಿದ್ದಾರೆ.

ಕನ್ನಡ ಹೋರಾಟಗಾರರು ಪೊಲೀಸ್ ವಶಕ್ಕೆ

ಕರಾಳ ದಿನಾಚರಣೆ ಹಿನ್ನೆಲೆಯಲ್ಲಿ ಎಂಇಎಸ್‌ನವರು ಸಭೆ ನಡೆಸಲು ಉದ್ದೇಶಿಸಿದ್ದ ಮರಾಠ ಮಂದಿರದತ್ತ ತೆರಳಲು ಯತ್ನಿಸಿದ ಕನ್ನಡ ಸಂಘಟನೆಗಳ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.

ಮುಖಂಡರಾದ ಮಹಾದೇವ ತಳವಾರ, ವಾಜೀದ್ ಹಿರೇಕೋಡಿ ನೇತೃತ್ವದಲ್ಲಿ ಹೋರಾಟಗಾರರು ಮರಾಠ ಮಂದಿರದತ್ತ ಹೋಗುತ್ತಿದ್ದರು. ಗೋಗಟೆ ವೃತ್ತದಲ್ಲಿ 20ಕ್ಕೂ ಅಧಿಕ ಹೋರಾಟಗಾರರನ್ನು ತಡೆದರು. ಆಗ ಪರಸ್ಪರರ ಮಧ್ಯೆ ತಳ್ಳಾಟ,‌ ನೂಕಾಟ ಮತ್ತು ವಾಗ್ವಾದವೂ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.