ADVERTISEMENT

ಬೆಳಗಾವಿ | ಮಹಾಮೇಳಾವಕ್ಕೆ ಯತ್ನ: ಮುಖಂಡರ ವಶ

ಎಂಇಎಸ್‌ಗೆ ಸಿಗದ ನಿರೀಕ್ಷಿತ ಬೆಂಬಲ, ಆರಂಭದಲ್ಲೇ ತಡೆದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 23:40 IST
Last Updated 8 ಡಿಸೆಂಬರ್ 2025, 23:40 IST
<div class="paragraphs"><p>ಬೆಳಗಾವಿಯ ಟಿಳಕವಾಡಿಯ ವ್ಯಾಕ್ಸಿನ್‌ ಡಿಪೊ ಮೈದಾನ ಪ್ರವೇಶಿಸಲು ಯತ್ನಿಸಿದ ಎಂಇಎಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು&nbsp; </p></div>

ಬೆಳಗಾವಿಯ ಟಿಳಕವಾಡಿಯ ವ್ಯಾಕ್ಸಿನ್‌ ಡಿಪೊ ಮೈದಾನ ಪ್ರವೇಶಿಸಲು ಯತ್ನಿಸಿದ ಎಂಇಎಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು 

   

ಪ್ರಜಾವಾಣಿ ಚಿತ್ರ

ಬೆಳಗಾವಿ: ನಗರದಲ್ಲಿ ಒಂದೆಡೆ ಚಳಿಗಾಲದ ಅಧಿವೇಶನ ಆರಂಭಗೊಂಡರೆ, ಇನ್ನೊಂದೆಡೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮುಖಂಡರು ಗದ್ದಲ ಸೃಷ್ಟಿಸಿದರು. ಅನುಮತಿ ಸಿಗದಿದ್ದರೂ ‘ಮಹಾಮೇಳಾವ್‌’ ನಡೆಸಲು ಮುಂದಾದರು. ತಕ್ಷಣ ಕಾರ್ಯಮಗ್ನರಾದ ಪೊಲೀಸರು ಎಂಇಎಸ್‌ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಇದರಿಂದ ಬೆಳಗಾವಿ, ಅಥಣಿ ಮತ್ತು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕೆಲ ಕಾಲ ಬಿಗುವಿನ ವಾತಾವರಣವಿತ್ತು.

ADVERTISEMENT

ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ವಿರೋಧಿಸಿ ಎಂಇಎಸ್‌ ಕಾರ್ಯಕರ್ತರು ಪ್ರತಿವರ್ಷ ಮಹಾಮೇಳಾವ್‌ ಆಯೋಜನೆಗೆ ಯತ್ನಿಸುತ್ತಾರೆ. ರಾಜ್ಯದ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಹಕ್ಕೊತ್ತಾಯ ಮಂಡಿಸುತ್ತಾರೆ. ಇದು ನಾಡವಿರೋಧಿ ಚಟುವಟಿಕೆ ಎಂದು ಪರಿಗಣಿಸಿರುವ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಅನುಮತಿ ಇಲ್ಲದಿದ್ದರೂ ಮೇಳ ನಡೆಸಲು ಮುಂದಾದವರನ್ನು ಪೊಲೀಸರು ತಡೆದರು.

ಮೇಳಕ್ಕಾಗಿ ಇಲ್ಲಿನ ವ್ಯಾಕ್ಸಿನ್‌ ಡಿಪೊ ಮೈದಾನದಲ್ಲಿ ಸಿದ್ಧತೆ ನಡೆದಿತ್ತು. ಅಲ್ಲಿಗೆ ಬಂದ ಎಂಇಎಸ್‌ ಕಾರ್ಯಾಧ್ಯಕ್ಷ ಮನೋಹರ ಕಿಣೇಕರ, ಮುಖಂಡರಾದ ಪ್ರಕಾಶ ಮರಗಾಲೆ, ಮಾಲೋಜಿರಾವ್‌ ಅಷ್ಟೇಕರ, ರೇಣು ಕಿಲ್ಲೇಕರ, ಪ್ರಕಾಶ ಶಿರೋಳಕರ, ಶುಭಂ ಶೆಳಕೆ, ಅಮರ ಯಳ್ಳೂರಕರ ಮತ್ತಿತರರನ್ನು ಪೊಲೀಸರು ವಶಕ್ಕೆ ಪಡೆದಾಗ, ತಳ್ಳಾಟ, ನೂಕಾಟ ನಡೆಯಿತು. ಆಗ ‘ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲೇಬೇಕು’ ಎಂದು ಘೋಷಣೆ ಕೂಗಿದರು.

ಗಡಿಯಲ್ಲಿ ಕಟ್ಟೆಚ್ಚರ: ಕೊಲ್ಹಾಪುರದ ಶಿವಸೇನಾ ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯಕ್ಕೆ ಬರುವುದನ್ನು ತಡೆಯಲು ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ವಾಹನಗಳ ತಪಾಸಣೆ ನಡೆಸಿ ಪ್ರಯಾಣಿಕರ ಸತ್ಯಾಸತ್ಯತೆ ದೃಢಪಡಿಸಿದ ನಂತರ, ರಾಜ್ಯದೊಳಗೆ ಬರಲು ವಾಹನಗಳಿಗೆ ಅವಕಾಶ ನೀಡುತ್ತಾರೆ. ಖಾನಾಪುರದಿಂದ ಬೆಳಗಾವಿಗೆ ಬರುತ್ತಿದ್ದವರನ್ನು ಖಾನಾಪುರ ಪಟ್ಟಣದಲ್ಲೇ ವಶಕ್ಕೆ ಪಡೆದರು.

ಎಂಇಎಸ್‌ನ ಧೋರಣೆ ಖಂಡಿಸಿ, ನಗರದಲ್ಲಿ ಪ್ರತಿಭಟಿಸಿದ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಮತ್ತು ಶಿವರಾಮೇಗೌಡ ಬಣ) ಕಾರ್ಯಕರ್ತರನ್ನು ಸಹ ಪೊಲೀಸರು ವಶಕ್ಕೆ ಪಡೆದರು.

ಅಥಣಿಯಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಸಂಚಾರವನ್ನು ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಕಾರ್ಯಕರ್ತರು ತಡೆದರು 
ಕೊಲ್ಹಾಪುರದಲ್ಲಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಮೇಲೆ ‘ಜೈ ಮಹಾರಾಷ್ಟ್ರ’ ಎಂಬ ಸ್ಟಿಕ್ಕರ್‌ ಅನ್ನು ಶಿವಸೇನಾ ಕಾರ್ಯಕರ್ತರು ಅಂಟಿಸಿದರು
ಎಂಇಎಸ್‌ ನಡೆ ವಿರೋಧಿಸಿ ಬೆಳಗಾವಿಯಲ್ಲಿ ಪ್ರತಿಭಟನೆಗೆ ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು   ಪ್ರಜಾವಾಣಿ ಚಿತ್ರ
ಬೆಳಗಾವಿ–ಕೊಲ್ಹಾಪುರ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಬಸ್‌ಗಳು ನಿಪ್ಪಾಣಿಯವರೆಗೆ ಮಾತ್ರ ಹೋಗಿ ವಾಪಸ್ ಆಗುತ್ತಿವೆ.
ಕೆ.ಎಲ್.ಗುಡೆನ್ನವರ ವಿಭಾಗೀಯ ನಿಯಂತ್ರಣಾಧಿಕಾರಿ ವಾಯವ್ಯ ಸಾರಿಗೆ ಸಂಸ್ಥೆ ಬೆಳಗಾವಿ

ಜೈಕಾರ ಬರಹ; ‘ಮಹಾ’ಗೆ ಬಸ್ ಸಂಚಾರ ಸ್ಥಗಿತ

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಕಾರ್ಯಕರ್ತರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ ಸಂಚಾರ ತಡೆದು ಪುಣೆಯಿಂದ ಹಳಿಯಾಳಕ್ಕೆ ಹೊರಟಿದ್ದ ಬಸ್‌ನ ಮೇಲೆ ‘ಜೈ ಮಹಾರಾಷ್ಟ್ರ’ ಸ್ಟಿಕ್ಕರ್ ಅಂಟಿಸಿದರು. ಇದು ಜಾಲತಾಣಗಳಲ್ಲಿ ಹರಿದಾಡಿತು. ಇದರಿಂದ ಆಕ್ರೋಶಗೊಂಡ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಜಿಲ್ಲೆಯ ಅಥಣಿ ‍ಪಟ್ಟಣದಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ತಡೆದರು. ಅದರ ಮೇಲೆ ‘ಜೈ ಕರ್ನಾಟಕ’ ಎಂದು ಬರೆದರು. ಕೊಲ್ಹಾಪುರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು ಮಧ್ಯಾಹ್ನದಿಂದ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.