ADVERTISEMENT

ಕನ್ನಡ ಧ್ವಜ ತೆರವುಗೊಳಿಸದಿದ್ದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ: ಎಂಇಎಸ್

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 12:10 IST
Last Updated 6 ಜನವರಿ 2021, 12:10 IST
ಬೆಳಗಾವಿ ನಗರಪಾಲಿಕೆ ಮುಂಭಾಗ ಹಾರಿಸಿರುವ ಕನ್ನಡ ಧ್ವಜ ತೆರವುಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ತಡೆದರುಪ್ರಜಾವಾಣಿ ಚಿತ್ರ
ಬೆಳಗಾವಿ ನಗರಪಾಲಿಕೆ ಮುಂಭಾಗ ಹಾರಿಸಿರುವ ಕನ್ನಡ ಧ್ವಜ ತೆರವುಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ತಡೆದರುಪ್ರಜಾವಾಣಿ ಚಿತ್ರ   

ಬೆಳಗಾವಿ: ನಗರಪಾಲಿಕೆ ಮುಂಭಾಗ ಹಾರಿಸಿರುವ ಕನ್ನಡ ಧ್ವಜವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಮತ್ತು ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ತಡೆದ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಅವರನ್ನು ತಳ್ಳಿಕೊಂಡು ಗೇಟಿನೊಳಗೆ ಪ್ರವೇಶಿಸಲು ಯತ್ನಿಸಿದರು. ಜಿಲ್ಲಾಧಿಕಾರಿಯೇ ಬಂದು ಮನವಿ ಸ್ವಿಕರಿಸಬೇಕು ಎಂದು ಪಟ್ಟು ಹಿಡಿದಿದ್ದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

‘ಗಡಿ ವಿವಾದ ಇನ್ನೂ ನ್ಯಾಯಾಲಯದಲ್ಲಿದೆ. ತಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಮರಾಠಿ ಭಾಷಿಕರಾದ ನಾವು 1956ರಿಂದಲೂ ಹೋರಾಟ ಮಾಡುತ್ತಿದ್ದೇವೆ. ಹೀಗಿರುವಾಗ, ಪಾಲಿಕೆ ಮುಂಭಾಗದಲ್ಲಿ ಹಳದಿ–ಕೆಂಪು ಧ್ವಜವನ್ನು ಕಾನೂನು ಬಾಹಿರವಾಗಿ ಹಾರಿಸುವ ಮೂಲಕ ಮರಾಠಿ ಭಾಷಿಕರಿಗೆ ವೇದನೆ ನೀಡಲಾಗಿದೆ. ಶಾಂತಿ ಕದಡುವ ಪ್ರಯತ್ನವನ್ನು ಕನ್ನಡ ಸಂಘಟನೆಯವರು ಮಾಡಿದ್ದಾರೆ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ತಕ್ಷಣ ಆ ಧ್ವಜ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಜ.21ರಂದು ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ನಗರಪಾಲಿಕೆ ಮುಂಭಾಗದಲ್ಲಿ ಮತ್ತು ನಗರದ ಎಲ್ಲ ಗಲ್ಲಿಗಳಲ್ಲಿ ಕೇಸರಿ ಬಣ್ಣದ (ಭಗವಾ) ಧ್ವಜಗಳನ್ನು ಹಾರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮನವಿ ಸ್ವೀಕರಿಸಿದರು.

ಅಧ್ಯಕ್ಷ ದೀಪಕ್‌ ದಳವಿ, ಕಾರ್ಯಾಧ್ಯಕ್ಷ ಮನೋಹರ ಕಿಣೇಕರ, ನೇತಾಜಿ ಜಾಧವ, ಪ್ರಕಾಶ ಶಿರೋಡಕರ, ರಣಜಿತ ಪಾಟೀಲ, ಕಲ್ಲಪ್ಪ ನಾಟೇಕರ, ನಾಮದೇವ ಪಾಟೀಲ, ಅರವಿಂದ ನಾಗನೂರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.