ADVERTISEMENT

ಸೇವಾಲಾಲರು ಪವಾಡ ಪುರುಷ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 8:05 IST
Last Updated 16 ಫೆಬ್ರುವರಿ 2026, 8:05 IST
<div class="paragraphs"><p>ಬೆಳಗಾವಿಯ ಶಾಹೂ ನಗರದ ಸಾಯಿ ತಾಂಡಾದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ ಮಹಾರಾಜರ ಜಯಂತ್ಯುತ್ಸವದಲ್ಲಿ ಲಕ್ಷ್ಮಿ ಹೆಬ್ಬಾಳಕರ ಪಾಲ್ಗೊಂಡಿದ್ದರು</p></div>

ಬೆಳಗಾವಿಯ ಶಾಹೂ ನಗರದ ಸಾಯಿ ತಾಂಡಾದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ ಮಹಾರಾಜರ ಜಯಂತ್ಯುತ್ಸವದಲ್ಲಿ ಲಕ್ಷ್ಮಿ ಹೆಬ್ಬಾಳಕರ ಪಾಲ್ಗೊಂಡಿದ್ದರು

   

ಬೆಳಗಾವಿ: ‘ಸಂತ ಸೇವಾಲಾಲ ಬಂಜಾರ ಸಮಾಜ ಸುಧಾರಿಸಲು ಪಣ ತೊಟ್ಟಿದ್ದರು. ಹುಟ್ಟಿನಿಂದಲೇ ಅವರು ಪವಾಡ ಪುರುಷರಾಗಿದ್ದರು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಇಲ್ಲಿನ ಶಾಹೂ ನಗರದ ಸಾಯಿ ತಾಂಡಾದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ ಮಹಾರಾಜರ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ADVERTISEMENT

‘ಬಂಜಾರ ಸಮುದಾಯದ ದೇವಸ್ಥಾನಕ್ಕೆ ₹25 ಲಕ್ಷ ಅನುದಾನ ತಂದಿದ್ದೇನೆ. ಕ್ಷೇತ್ರದಲ್ಲಿ ಎಲ್ಲ ಸಮುದಾಯದವರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಿದ್ದೇನೆ’ ಎಂದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ,‌ ಮುಖಂಡರಾದ ವಸಂತ ರಾಠೋಡ, ಶ್ರೀಕಾಂತ ಲಂಬಾಣಿ, ಜೈರಾಮ ಪಾಟೀಲ, ಅನಿಲ ಪಾವಸೆ, ಉಮೇಶ ಪಾಟೀಲ, ತಾನಾಜಿ ಪಾಟೀಲ, ವಿನೋದ ಪಾಟೀಲ, ಪರಶುರಾಮ ರಾಠೋಡ, ಮಹಾದೇವ ಪಮ್ಮಾರ, ರುದ್ರಪ್ಪ ಗೌಡರ ಇದ್ದರು.

ಕಲ್ಯಾಣ ಮಂಟಪಕ್ಕಾಗಿ ₹1 ಕೋಟಿ: ಭರವಸೆ

ಸವದತ್ತಿ: ಯಲ್ಲಮ್ಮನ ತಾಂಡಾದಲ್ಲಿ ಬಂಜಾರ ಸಮುದಾಯ ಅಭಿವೃದ್ಧಿಗೆ ₹1 ಕೋಟಿ ವೆಚ್ಚದ ಸಂತ ಸೇವಾಲಾಲ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗುವುದು. ಜೊತೆಗೆ ಸೇವಾಲಾಲ ವೃತ್ತದ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.

ಇಲ್ಲಿನ ಗುರುಭವನದಲ್ಲಿ ಭಾನುವಾರ ಜರುಗಿದ ‘ಸಂತ ಸೇವಾಲಾಲರ ಜಯಂತ್ಯುತ್ಸವ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

ಬಹುದಿನಗಳ ಬೇಡಿಕೆಯಾಗಿದ್ದ ಕಂದಾಯ ಗ್ರಾಮ ಇದೀಗ ಸಾಕಾರಗೊಂಡಿದೆ. ಇದೇ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಲಾಗುವುದು. ಸುಸ್ಥಿರ ಸಮಾಜಕ್ಕೆ ಸೇವಾಲಾಲ್‌ರ ಅಡಿಪಾಯ ಇದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಭವಿಷ್ಯ ಉಜ್ವಲಗೊಳಿಸಲು ಸಮಾಜದ ತಾಯಂದಿರಲ್ಲಿ ವಿನಂತಿಸಿದರು.

ಮನೆಯ ಮಗನಾಗಿ ಸಮಾಜದ ಸೇವೆಗೆ ಸದಾ ಸಿದ್ಧನಿದ್ದು, ಮನೆಯಂಗಳಕ್ಕೆ ಬಂದು ಸಮಸ್ಯೆ ಆಲಿಸುವೆ. ಉದ್ಯೋಗ ಸೇರಿ ಇತರೆ ಸೌಕರ್ಯ ಒದಗಿಸುವ ಕಾರ್ಯ ನಿರಂತರವಾಗಲಿರಲಿದೆ. ಈಶಾನ್ಯ ರಾಜ್ಯಗಳನ್ನು ಹೊರತು ಪಡಿಸಿದರೆ ಇಡೀ ದೇಶದಲ್ಲಿ ಕಾಣ ಸಿಗುವ ಅಪರೂಪದ ಸಂಸ್ಕೃತಿ, ಭಾಷೆ ಹಾಗೂ ಸಂಪ್ರದಾಯ ಹೊಂದಿರುವ ಬಂಜಾರ ಸಮಾಜದ ಸೇವಾಲಾಲರು 15ನೇ ಶತಮಾನದ ಶ್ರೇಷ್ಠ ಸಂತರಾಗಿದ್ದು, ಒಂದೇ ಸಮುದಾಯ ಸೀಮಿತರಾದವರಲ್ಲ ಎಂದರು.

ತಹಶೀಲ್ದಾರ್‌ ಎಂ.ಎನ್. ಹೆಗ್ಗನ್ನವರ ಮಾತನಾಡಿ, ಕರ್ನಾಟಕ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆ ಕಾರ್ಯಕ್ರಮ ಇದಾಗಿದೆ. ಸಮುದಾಯದ ಅಭಿವೃದ್ಧಿಯ ಜೊತೆಗೆ ಸಮ ಸಮಾಜ ನಿರ್ಮಿಸಲು ಮಹಾತ್ಮರ ಜಯಂತಿಗಳು ದಾರಿದೀಪವಾಗಲಿವೆ ಎಂದರು.

ಉಪನ್ಯಾಸಕ ನಾರಾಯಣ ರಾಠೋಡ, ಸೇವಾಲಾಲರ ಜೀವನ ಚರಿತ್ರೆ ಹಾಗೂ ಬಂಜಾರಾ ಸಮುದಾಯದ ಬೆಳೆದು ಬಂದ ರೀತಿ ವಿವರಿಸಿದರು.

ಇದಕ್ಕೂ ಮೊದಲು ಸೇವಾಲಾಲರ ಭಾವಚಿತ್ರ ಮೆರವಣಿಗೆಯು ಎಪಿಎಂಸಿಯಿಂದ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಅದ್ದೂರಿ ಮೆರವಣಿಗೆಯಲ್ಲಿ ಸಮುದಾಯದ ವೇಷ ಭೂಷಣದೊಂದಿಗೆ ಸಾಂಸ್ಕೃತಿಕ ನೃತ್ಯ ಗಮನ ಸೆಳೆಯಿತು. ಶಾಸಕ ವಿಶ್ವಾಸ್ ವೈದ್ಯ ಮೆರವಣಿಗೆಯಲ್ಲಿ ಪಾಲ್ಗೊಂಡು ಸಮುದಾಯದ ಯುವ ಜನತೆಗೆ ಉತ್ಸಾಹ ತುಂಬಿದರು.

ಗ್ಯಾರಂಟಿ ಅಧ್ಯಕ್ಷ ಶಿವಕುಮಾರ ರಾಠೋಡ, ಆನಂದ ಲಮಾಣಿ, ರಾಮಾಚಾರಿ ಲಮಾಣಿ, ಪ್ರಕಾಶ ಲಮಾಣಿ, ಶ್ರೀನಿವಾಸ ಲಮಾಣಿ, ಆರ್.ಆರ್. ಕುಲಕರ್ಣಿ, ಶಶಿರಾಜ ವನಕೆ, ಅಮೃತ ಸಾಣಿಕೊಪ್ಪ ಸೇರಿ ಸಮಾಜದ ಪ್ರಮುಖರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.