ADVERTISEMENT

ಪಕ್ಷದ ವಿಚಾರದಲ್ಲಿ ನಾನು ಮತ್ತು ಎ.ಬಿ. ಪಾಟೀಲ ಅವರು ಒಂದೇ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 14:25 IST
Last Updated 25 ಫೆಬ್ರುವರಿ 2026, 14:25 IST
<div class="paragraphs"><p>ಸತೀಶ ಜಾರಕಿಹೊಳಿ</p></div>

ಸತೀಶ ಜಾರಕಿಹೊಳಿ

   

ಹುಕ್ಕೇರಿ (ಬೆಳಗಾವಿ): ಸಂಘ– ಸಂಸ್ಥೆಗಳ ಚುನಾವಣೆ ಬಂದಾಗ ಮಾಜಿ ಸಚಿವ ಎ.ಬಿ. ಪಾಟೀಲ ಹಾಗೂ ನಾನು ಬೇರೆಬೇರೆ. ಪಕ್ಷದ ವಿಚಾರ ಬಂದಾಗ ನಾವಿಬ್ಬರೂ ಒಂದೇ’ ಎಂದು ಲೋಕೋಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಹುಕ್ಕೇರಿಯಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸ್ಥಳೀಯವಾಗಿ ಸಂಘ– ಸಂಸ್ಥೆಗಳ ಚುನಾವಾಣೆ ಬಂದಾಗ ಮಾಜಿ ಸಚಿವ ಎ.ಬಿ.ಪಾಟೀಲ ಹಾಗೂ ನಾವು ಪ್ರತ್ಯೇಕ ‍ಪ್ರಯತ್ನ ಮಾಡಿದ್ದೇವೆ. ಕಾಂಗ್ರೆಸ್‌ನ ಕೆಲಸಗಳು ಬಂದರೆ ಒಂದಾಗಿ ಕೆಲಸ ಮಾಡಿದ್ದೇವೆ’ ಎಂದರು.

ADVERTISEMENT

‘ನಕಲಿ ಆಧಾರ ಕಾರ್ಡ್‌ ಸೃಷ್ಟಿಸಿ ಜಮೀನು ಕಬಳಿಕೆ ಮಾಡುವಂತಹ ಭೂಗಳ್ಳರ ವಿರುದ್ಧ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಹುಕ್ಕೇರಿ ತಾಲ್ಲೂಕಿನಲ್ಲಿ ಭೂಗಳ್ಳರ ಪ್ರಕರಣಗಳು ಸಾಕಷ್ಟು ಕಂಡುಬರುತ್ತಿದ್ದು, ಇಂಥ ದಂಧೆಗೆ ಕೈಹಾಕಿದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಇಡೀ ಜಿಲ್ಲೆಯಲ್ಲೇ ಈ ಭೂ ಮಾಫಿಯಾಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ದಲಿತ ಮುಖ್ಯಮಂತ್ರಿ ಕೂಗು ನಮ್ಮ ಕೈಯಲಿಲ್ಲ. ಅದರ ಬಗ್ಗೆ ಮಾತನಾಡುವುದು ಅನಶ್ಯಕ ಸಮಸ್ಯೆ ಉದ್ಭವವಾಗುತ್ತಿದೆ ಹೊರತು; ಉಪಯೋಗ ಏನೂ ಆಗುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

25 ಶಾಸಕರು ತಮಗೂ ಸಚಿವ ಸ್ಥಾನ ನೀಡಬೇಕೆಂದು ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ, ‘ಅದರಲ್ಲಿ ತಪ್ಪೇನಿದೆ? ಅವರವರ ಅರ್ಹತೆ ನೋಡಿ ಅವರಿಗೆ ಕೊಡಬಹುದು. ಇಲ್ಲವೆಂದು ಯಾರೂ ಎಲ್ಲಿಯೂ ಹೇಳಿಲ್ಲ’ ಎಂದರು.

‘ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್‌ ಸಮಸ್ಯೆಯಲ್ಲ. ಇದರ ಬಗ್ಗೆ ಈಗಾಗಲೇ ಸಿ.ಎಂ ಸಿದ್ದರಾಮಯ್ಯ ಅವರು ಕೂಡ ಒಂದು ಸಭೆ ಮಾಡಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.