ಕಾಗವಾಡ (ಬೆಳಗಾವಿ ಜಿಲ್ಲೆ): ‘ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ವಿಫಲವಾಗಿದೆ. ಆಳಂದ ಶಾಸಕ ಬಿ.ಆರ್.ಪಾಟೀಲ ಅವರು ಮಾಡಿದ ಭ್ರಷ್ಟಾಚಾರ ಆರೋಪ ಸತ್ಯವಿದೆ. ನನಗೂ ಅಂಥದ್ದೇ ಪರಿಸ್ಥಿತಿ ಬಂದಿದೆ. ಒಂದೂ ಕೆಲಸ ಆಗುತ್ತಿಲ್ಲ. ಇದನ್ನು ಖಂಡಿಸಿ ನಾನು ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ’ ಎಂದು ಶಾಸಕ ಭರಮಗೌಡ (ರಾಜು) ಕಾಗೆ ಕಿಡಿ ಕಾರಿದರು.
ತಾಲ್ಲೂಕಿನ ಐನಾಪುರ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಅಧಿಕಾರಿಗಳ ಮೇಲೆ ಸರ್ಕಾರದ ನಿಯಂತ್ರವೇ ಇಲ್ಲ. ನನ್ನ ಮನಸ್ಸಿಗೆ ಬಹಳ ನೋವಾಗಿದೆ. ಬಿ.ಆರ್.ಪಾಟೀಲ ಅವರ ಮಾತುಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಇನ್ನೆರಡು ದಿನಗಳಲ್ಲಿ ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇನೆ. ರಾಜೀನಾಮೆ ಕೊಡಬೇಕು ಎಂಬ ನಿರ್ಧಾರವನ್ನೂ ತಿಳಿಸುತ್ತೇನೆ’ ಎಂದರು.
‘ಕಾಗವಾಡ ವಿಧಾನಸಭಾ ಕ್ಷೇತ್ರಕ್ಕೆ ಎರಡು ವರ್ಷಗಳ ಹಿಂದೆ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ₹25 ಕೋಟಿ ಮಂಜೂರಾಗಿದೆ. ಇದರಲ್ಲಿ ₹12 ಕೋಟಿ ರಸ್ತೆಗೆ, ₹13 ಕೋಟಿ ಸಮುದಾಯ ಭವನಗಳಿಗೆ ಹಂಚಿದ್ದರು. ಎರಡು ವರ್ಷಗಳಾದರೂ ಕಾಮಗಾರಿ ಆರಂಭ ಮಾಡಲು ಸಿದ್ಧರಿಲ್ಲ. 72 ಸಮುದಾಯ ಭವನಗಳೂ ಸೇರಿ ಯಾವುದೇ ಒಂದು ಕಾಮಾಗಾರಿಯೂ ನಡೆದಿಲ್ಲ. ರಸ್ತೆಯ ಕಾಮಗಾರಿಗೆ ತೆಂಗಿನಕಾಯಿ ಒಡೆದು ಪೂಜೆ ಮಾಡಿ ಒಂದು ವರ್ಷವಾಗಿದೆ. ಅಂದು ಮುಖ ತೋರಿಸಿದ ಗುತ್ತಿಗೆದಾರ ಮತ್ತೆ ಬಂದಿಲ್ಲ. ಜನ ನಮ್ಮನ್ನು ಛೀ– ಥೂ ಎಂದು ಉಗುಳುವಂತಾಗಿದೆ’ ಎಂದೂ ಬೇಸರ ವ್ಯಕ್ತಪಡಿಸಿದರು.
‘ಕಾಮಗಾರಿಗೆ ಚಾಲನೆ ನೀಡಲು ಕಮಿಷನರ್ ಕೇಳಲಾಗುತ್ತಿದೆಯೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದೊಂದು ಕರ್ಮ. ಏನೋ ನಿರೀಕ್ಷೆ ಇದ್ದುದರಿಂದಲೇ ಕಾಮಗಾರಿಗಳನ್ನು ನಡೆಸುತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.