
ಬೆಳಗಾವಿ: ‘ಉದ್ಯಮಿಗಳಾದವರು ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಗೆ ತಮ್ಮದೇ ಕೊಡುಗೆ ನೀಡಬೇಕು’ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಇಲ್ಲಿನ ಕೆಎಲ್ಎಸ್ ಸಂಸ್ಥೆಯ ಕೆ.ಕೆ.ವೇಣುಗೋಪಾಲ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಗ್ರ ರಾಷ್ಟ್ರೀಯ ಭದ್ರತೆಗಾಗಿ ವೇದಿಕೆ ‘ಫಿನ್ಸ್ ಇಂಡಿಯಾ’ ಬೆಳಗಾವಿ ಶಾಖೆ ದಶಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
‘ದೇಶದ ಭದ್ರತೆ ಪ್ರತಿಯೊಬ್ಬರ ಜವಾಬ್ದಾರಿ. ಸಾಫ್ಟ್‌ವೇರ್ ಸೇರಿ ಬಿಡಿಭಾಗಗಳನ್ನು ತಯಾರಿಸಿ ಸೇನೆಗೆ ನೀಡಿ, ದೇಶದ ಭದ್ರತೆಗೆ ನೀವು ನೆರವಾಗಬೇಕು’ ಎಂದು ಮನವಿ ಮಾಡಿದರು.
‘ಭಾರತದಲ್ಲಿ ವೈವಿಧ್ಯತೆ ಇದ್ದರೂ, ನಮ್ಮ ಸಂಸ್ಕೃತಿ ಒಂದೇ. ನಾವು ಒಟ್ಟಿಗೆ ಬದುಕುತ್ತೇವೆ. ಇಂಥ ಕಾರ್ಯಕ್ರಮ ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುತ್ತದೆ. ಯುವಜನರು ದೊಡ್ಡ ಕನಸು ಕಂಡು, ಅದನ್ನು ಸಾಕಾರವಾಗಿಸುವ ದಿಸೆಯತ್ತ ಹೆಜ್ಜೆ ಇರಿಸಬೇಕು’ ಎಂದು ಸಲಹೆ ನೀಡಿದರು.
ಬೆಂಗಳೂರಿನ ಗೋಸಾಯಿ ಮಠದ ಮಂಜುನಾಥ ಸ್ವಾಮಿ, ಅರುಣಾ ನಾಯಕ, ಅರುಣಾ ಸರಾಫ್, ಅಪೂರ್ವ ಖಾನೋಲ್ಕರ್, ಕರ್ನಲ್ ರಾಮಕೃಷ್ಣ ಜಾಧವ, ಕರ್ನಲ್ ಮಧುಕರ ಕದಂ, ಬಿ.ಆರ್.ಶಂಕರಗೌಡ, ಕ್ಯಾಪ್ಟನ್ ಪ್ರಾಣೇಶ ಕುಲಕರ್ಣಿ, ಪರಮೇಶ್ವರ ಹೆಗಡೆ, ಸದಾನಂದ ಹುಂಬರವಾಡಿ, ಅತುಲ್ ದೇಶಮುಖ ಇದ್ದರು. ಮೇಜರ್ ಜನರಲ್ ಕೆ.ಎನ್.ಮಿರ್ಜಿ ವಂದಿಸಿದರು. ವಿನಿತಾ ಕುಲಕರ್ಣಿ ವಂದೇಮಾತರಂ ಗೀತೆ ಪ್ರಸ್ತುತಪಡಿಸಿದರು.