
ಬೆಳಗಾವಿ: ‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ(ಎನ್‌ಡಬ್ಲ್ಯುಕೆಆರ್‌ಟಿಸಿ) ‘ಕಿತ್ತೂರು ಚನ್ನಮ್ಮ ರಸ್ತೆ ಸಾರಿಗೆ ನಿಗಮ’ ಎಂದು ಮರುನಾಮಕರಣ ಮಾಡುತ್ತೇವೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಶನಿವಾರ ನಡೆದ ಎನ್‌ಡಬ್ಲ್ಯುಕೆಆರ್‌ಟಿಸಿ 28ನೇ ಸಂಸ್ಥಾಪನಾ ದಿನಾಚರಣೆ, ಹೊಸ ಬಸ್‌ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಎನ್‌ಡಬ್ಲ್ಯುಕೆಆರ್‌ಟಿಸಿಗೆ ಕಿತ್ತೂರು ಚನ್ನಮ್ಮನ ಹೆಸರು ಮರುನಾಮಕರಣ ಮಾಡುವ ಸಂಬಂಧ ಪ್ರಸ್ತಾವ ಸಲ್ಲಿಕೆಯಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಅದಕ್ಕೆ ಅನುಮೋದನೆ ಪಡೆದು ಮರುನಾಮಕರಣ ಮಾಡುತ್ತೇವೆ’ ಎಂದರು.
‘ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ(2019ರಿಂದ 2023ರ ಅವಧಿಯಲ್ಲಿ) ಹೊಸ ಬಸ್‌ಗಳನ್ನು ಖರೀದಿಯಾಗಿಲ್ಲ. ಕೋವಿಡ್–19 ಹಿನ್ನೆಲೆಯಲ್ಲಿ ಆಗ ಸಿಬ್ಬಂದಿ ವೇತನ ನೀಡಲು, ಡೀಸೆಲ್ ಖರೀದಿಗೂ ಕಷ್ಟದ ಪರಿಸ್ಥಿತಿ ಇತ್ತು. ಹಾಗಾಗಿ ಈಗ ಕೆಲವು ಮಾರ್ಗಗಳಲ್ಲಿ ಹಳೇ ಬಸ್‌ಗಳು ಓಡುತ್ತಿರಬಹುದು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊಸ ಬಸ್‌ಗಳ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹಂತ–ಹಂತವಾಗಿ ವಿವಿಧ ಮಾರ್ಗಗಳಲ್ಲಿ ಹೊಸ ಬಸ್ ಒದಗಿಸಲಾಗುತ್ತಿದೆ’ ಎಂದರು.
‘ಬೆಳಗಾವಿಗೆ 100 ಎಲೆಕ್ಟ್ರಿಕಲ್ ಬಸ್ ಮಂಜೂರಾಗಿವೆ. ಕೇಂದ್ರದ ಟೆಂಡರ್ ಪ್ರಕ್ರಿಯೆ ಆಗುವುದಷ್ಟೇ ಬಾಕಿ ಇದೆ. ಇದಲ್ಲದೆ, ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಬಸ್ ಒದಗಿಸಲಾಗುವುದು. ಬೇಡಿಕೆ ಇರುವ ಮಾರ್ಗಗಳಲ್ಲಿ ಬಸ್ ಕಾರ್ಯಾಚರಣೆ ಆರಂಭಿಸಲಾಗುವುದು’ ಎಂದು ಭರವಸೆ ಕೊಟ್ಟರು.
‘ನಾನು ಈ ಹಿಂದೆ ಸಾರಿಗೆ ಸಚಿವನಾಗಿದ್ದಾಗ, ಎನ್‌ಡಬ್ಲ್ಯುಕೆಆರ್‌ಟಿಸಿ ವ್ಯಾಪ್ತಿಯಲ್ಲಿ ಹಲವು ಬಸ್ ನಿಲ್ದಾಣ, ಘಟಕ ನಿರ್ಮಿಸಿದ್ದೆ. ಈ ಸಲ ಸಾರಿಗೆ ಸಚಿವನಾದ ನಂತರ ಸಾರಿಗೆ ಸಂಸ್ಥೆಯಲ್ಲಿ 9 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದೇವೆ. ಅನುಕಂಪದ ಆಧಾರದಲ್ಲಿ 1 ಸಾವಿರ ಮಂದಿಗೆ ಕೆಲಸ ಕೊಟ್ಟಿದ್ದೇವೆ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ‘ಎನ್‌ಡಬ್ಲ್ಯುಕೆಆರ್‌ಟಿಸಿಗೆ ಹೊಸ ಬಸ್ ಒದಗಿಸುವಂತೆ ಈ ಹಿಂದೆ ಸಾರಿಗೆ ಸಚಿವರಿಗೆ ಮನವಿ ಮಾಡಿದ್ದೆ. ಈಗ ಎನ್‌ಡಬ್ಲ್ಯುಕೆಆರ್‌ಟಿಸಿಗೆ 250 ಹೊಸ ಬಸ್ ನೀಡಿದ್ದರಿಂದ ಬಹುದಿನಗಳ ಕನಸು ಈಡೇರಿದೆ. ಬೆಳಗಾವಿ ರಾಜ್ಯದಲ್ಲೇ ದೊಡ್ಡ ಜಿಲ್ಲೆ. ಮುಂದಿನ ದಿನಗಳಲ್ಲಿ ನಮಗೆ ಹೆಚ್ಚಿನ ಬಸ್ ಒದಗಿಸಬೇಕು’ ಎಂದು ಮನವಿ ಮಾಡಿದರು.
‘ಈ ಭಾಗದಲ್ಲಿ ಚಾಲಕರು, ನಿರ್ವಾಹಕರ ಕೊರತೆ ಹೆಚ್ಚಿತ್ತು. ಈಗ ಹಲವರಿಗೆ ನೇಮಕಾತಿ ನೀಡಿದ್ದರಿಂದ ಅನುಕೂಲವಾಗಲಿದೆ. ಸಾರಿಗೆ ಸಿಬ್ಬಂದಿ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಿದೆ’ ಎಂದರು.
ಎನ್‌ಡಬ್ಲ್ಯುಕೆಆರ್‌ಟಿಸಿ ಅಧ್ಯಕ್ಷ ಭರಮಗೌಡ(ರಾಜು) ಕಾಗೆ, ‘ನೌಕರ ಬಹುದಿನಗಳ ಬೇಡಿಕೆ ಈಡೇರಿಸುವ ದೃಷ್ಟಿಯಿಂದ ಸರ್ಕಾರದಿಂದ ನಮ್ಮ ನಿಗಮಕ್ಕೆ ಬರಬೇಕಿರುವ ₹1,100 ಕೋಟಿ ಬಾಕಿ ಪಾವತಿಸಬೇಕು’ ಎಂದು ಮನವಿ ಮಾಡಿದರು.
ವ್ಯವಸ್ಥಾಪಕರ ನಿರ್ದೇಶಕಿ ಪ್ರಿಯಾಂಗ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಸಕರಾದ ಬಾಬಸಾಹೇಬ ಪಾಟೀಲ, ವಿಠ್ಠಲ ಹಲಗೇಕರ, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಎನ್‌ಡಬ್ಲ್ಯುಕೆಆರ್‌ಟಿಸಿ ಉಪಾಧ್ಯಕ್ಷ ಸುನೀಲ ಹಣಮನ್ನವರ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಗ್ಯಾರಂಟಿ ಯೋಜನೆಗಳ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಇತರರಿದ್ದರು.
ಅಪಘಾತ ರಹಿತವಾಗಿ ಸೇವೆ ಸಲ್ಲಿಸಿದ 68 ಚಾಲಕರಿಗೆ ಬೆಳ್ಳಿ ಪದಕ, ಹೊಸದಾಗಿ ನೇಮಕಗೊಂಡ 188 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು. ವೈಯಕ್ತಿಕ ಅಪಘಾತ, ಗುಂಪು ಜೀವವಿಮೆ ಮತ್ತು ಕುಟುಂಬ ಕಲ್ಯಾಣ ನಿಧಿ ಯೋಜನೆಯ ಪರಿಹಾರ ಚೆಕ್ ಕೂಡ ನೀಡಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ‘ನಾನು ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರ ಹಿಂದುಳಿದಿರುವಂಥದ್ದು. ಇಲ್ಲಿ ಶ್ರಮಿಕ ವರ್ಗದವರೇ ಹೆಚ್ಚಿದ್ದಾರೆ. ಖಾಸಗಿ ವಾಹನ ಬಳಸುವವರಿಗಿಂತ ಸಾರಿಗೆ ಸಂಸ್ಥೆಯ ಬಸ್‌ಗಳನ್ನೇ ನೆಚ್ಚಿಕೊಂಡವರೇ ಇದ್ದಾರೆ. ಆದರೆ, ಕೆಟ್ಟು ನಿಲ್ಲುವ ಮತ್ತು ಸೋರುವ ಬಸ್‌ಗಳನ್ನೇ ನಮಗೆ ಹೆಚ್ಚಾಗಿ ಕೊಡುತ್ತಿರುವ ಕಾರಣ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸಬೇಕು’ ಎಂದು ಮನವಿ ಮಾಡಿದರು.
‘ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳ ಅನುಷ್ಠಾನದೊಂದಿಗೆ 7,800 ಹೊಸ ಬಸ್‌ಗಳನ್ನು ರಾಜ್ಯದ ಸಾರಿಗೆ ನಿಗಮಗಳಿಗೆ ಒದಗಿಸಿದೆ. ಈ ಪೈಕಿ ಎನ್‌ಡಬ್ಲ್ಯುಕೆಆರ್‌ಟಿಸಿಗೆ 1,200 ಬಸ್ ಕೊಡಲಾಗಿದೆ’ ಎಂದರು.
ಎನ್‌ಡಬ್ಲ್ಯುಕೆಆರ್‌ಟಿಸಿಗೆ ರಾಣಿ ಚನ್ನಮ್ಮನ ಹೆಸರು ಮರುನಾಮಕರಣ ಮಾಡುವಂತೆಯೂ ಕೋರಿದರು.
ಶಾಸಕ ಆಸಿಫ್ ಸೇಠ್, ‘ಬೆಳಗಾವಿಗೆ 100 ಎಲೆಕ್ಟ್ರಿಕಲ್ ಬಸ್ ಬರುತ್ತಿವೆ ಎಂದು ಆರು ತಿಂಗಳಿನಿಂದ ಹೇಳಲಾಗುತ್ತಿದೆ. ಆದರೆ, ಅವು ಬರುತ್ತಿಲ್ಲ. ಇದರಿಂದ ಶಾಲಾ–ಕಾಲೇಜಿಗೆ ಹೋಗಲು ಮಕ್ಕಳಿಗೆ ತೊಂದರೆಯಾಗುತ್ತಿದೆ. ಇದು ನಮ್ಮ ದೌರ್ಭಾಗ್ಯ’ ಎಂದು ಅಸಮಾಧಾನ ಹೊರಹಾಕಿದರು.
‘ಬೆಳಗಾವಿಗೆ ಎರಡನೇ ರಾಜಧಾನಿ ಎನ್ನುತ್ತಾರೆ. ಅದಕ್ಕೆ ತಕ್ಕಂತೆ ಬಸ್ ಸೌಕರ್ಯ ಕಲ್ಪಿಸುತ್ತಿಲ್ಲ ರಾಜ್ಯದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಂದಾಯ, ಆರೋಗ್ಯ, ಅಲ್ಪಸಂಖ್ಯಾತರ ಕಲ್ಯಾಣ, ಸಮಾಜಕಲ್ಯಾಣ, ಇಂಧನ ಮತ್ತಿತರ ಖಾತೆಗಳ ಸಚಿವರು ದಕ್ಷಿಣ ಕರ್ನಾಟಕದವರೇ ಇದ್ದಾರೆ. ಈ ಪೈಕಿ ಕೆಲವರಿಗೆ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ವಹಿಸಿದ್ದಾರೆ. ಇನ್ನೂ ಕೆಲವರು ನಿರ್ಲಕ್ಷಿಸುತ್ತಿದ್ದಾರೆ’ ಎಂದು ದೂರಿದರು.
‘ಹೆಸರಿಗಷ್ಟೇ ಅಲ್ಲ. ವಾಸ್ತವದಲ್ಲೂ ಬೆಳಗಾವಿಯನ್ನು ಎರಡನೇ ರಾಜಧಾನಿಯಂತೆ ಟ್ರೀಟ್ ಮಾಡಬೇಕು. ಉತ್ತರ ಕರ್ನಾಟಕ ಅಭಿವೃದ್ಧಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ಕಾಲದಲ್ಲಿ ಸಿ.ಎಂ, ಡಿಸಿಎಂ ಆಗುವ ಸಾಮರ್ಥ್ಯ ಹೊಂದಿದವರೂ ನಮ್ಮಲ್ಲೂ ಇದ್ದಾರೆ’ ಎಂದು ಮಾರ್ಮಿಕವಾಗಿ ಹೇಳುತ್ತ ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ ಹೆಸರು ಪ್ರಸ್ತಾಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.