ಕರ್ನಲ್ ಸೋಫಿಯಾ ಖುರೇಶಿ ಹಾಗೂ ಕರ್ನಲ್ ತಾಜುದ್ದೀನ್ ಬಾಗೇವಾಡಿ ದಂಪತಿ
ಕೊಣ್ಣೂರ (ಬೆಳಗಾವಿ ಜಿಲ್ಲೆ): ಜಿಲ್ಲೆಯ ಗೋಕಾಕ ತಾಲ್ಲೂಕಿನ ಕೊಣ್ಣೂರ ಗ್ರಾಮದ ಆ ಮನೆಯಲ್ಲಿ ಈಗ ಹಬ್ಬದ ಸಂಭ್ರಮ. ಗ್ರಾಮಸ್ಥರಿಗೆ ಹೆಮ್ಮೆಯ ಕ್ಷಣ. ಇದೆಲ್ಲವೂ ‘ಸೊಸೆ ತಂದ ಸೌಭಾಗ್ಯ’.
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಯಶಸ್ಸನ್ನು ಜಗತ್ತಿಗೆ ತಿಳಿಸಿದ ಕರ್ನಲ್ ಸೋಫಿಯಾ ಖುರೇಷಿ ಈ ಗ್ರಾಮದ ಸೊಸೆ. ಇದು ಬೆಳಗಾವಿಗಷ್ಟೇ ಅಲ್ಲ, ಕರುನಾಡಿಗೆ ಪುಳಕ ತಂದಿದೆ.
ಸೋಫಿಯಾ ಅವರ ಪತಿ ತಾಜುದ್ದೀನ್ ಬಾಗೇವಾಡಿ ಕೊಣ್ಣೂರಿನವರು. ಪತಿ, ಪತ್ನಿ ಇಬ್ಬರೂ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿದ್ದಾರೆ. ಸೋಫಿಯಾ ಮೂಲತಃ ಗುಜರಾತ್ ರಾಜ್ಯದ ಬರೋಡಾದವರು. 2015ರಲ್ಲಿ ತಾಜುದ್ದೀನ್ ಜತೆ ಪ್ರೇಮ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಒಬ್ಬ ಪುತ್ರ ಇದ್ದಾನೆ.
ಪಹಲ್ಗಾಮ್‌ನಲ್ಲಿ ಭಾರತೀಯರ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಸಿಂಧೂರ ಕಾರ್ಯಾಚರಣೆ ಉದ್ದೇಶವನ್ನು ಸೋಫಿಯಾ ಖುರೇಷಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸುವ ಅವಕಾಶ ಪಡೆದರು. ಸದ್ಯ ಸೋಫಿಯಾ ಜಮ್ಮುವಿನಲ್ಲಿ, ತಾಜುದ್ದೀನ್ ಝಾನ್ಸಿಯಲ್ಲಿ ಇದ್ದಾರೆ.
ಮಿಲಿಟರಿಯಲ್ಲಿ ಮೂರನೇ ತಲೆಮಾರು:
ಸೋಫಿಯಾ 1981ರಲ್ಲಿ ಗುಜರಾತ್‌ನ ವಡೋದರದಲ್ಲಿ ಜನಿಸಿದ್ದಾರೆ. ಜೀವ ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆ. ಸೋಫಿಯಾ ತಂದೆ, ಅಜ್ಜ ಕೂಡ ಸೇನೆಯಲ್ಲಿದ್ದರು. 1999ರಲ್ಲಿ ಸೋಫಿಯಾ, 2011ರಲ್ಲಿ ತಾಜುದ್ದೀನ್ ಸೇನೆ ಸೇರಿದ್ದಾರೆ.
‘2016ರಲ್ಲಿ ಬಹುರಾಷ್ಟ್ರೀಯ ಮಿಲಿಟರಿ ಕವಾಯತಿನಲ್ಲಿ ಭಾರತೀಯ ತುಕಡಿಯನ್ನು ಮುನ್ನಡೆಸಿದ ಸೇನೆಯ ಮೊದಲ ಮಹಿಳಾ ಅಧಿಕಾರಿ’ ಎಂಬ ಹೆಗ್ಗಳಿಕೆ ಸೋಫಿಯಾ ಅವರದ್ದು.
ಸೋಫಿಯಾ ಅವರ ಮಾವ ಗೌಸ್‌ಸಾಬ್, ಅತ್ತೆ ಫರ್ಜಾನಾ, ಭಾವ ಸಿಕಂದರ್ ಈ ಪುಟ್ಟ ಮನೆಯಲ್ಲಿ ವಾಸವಿದ್ದಾರೆ. ಗೌಸ್‌ಸಾಬ್ ಅವರ ಇನ್ನೊಬ್ಬ ಹಿರಿಯ ಪುತ್ರ ಆದಮ್ ಅಲಿ ಬೆಂಗಳೂರಿನಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಿದ್ದಾರೆ.
‘ಹೆಣ್ಣುಮಕ್ಕಳ ಸಾಮರ್ಥ್ಯವೇ ಅಗಣಿತ’
‘ತಾಜುದ್ದೀನ್–ಸೋಫಿಯಾ ದೇಶ ಸೇವೆಗೆ ಅರ್ಪಿಸಿಕೊಂಡವರು. ಪ್ರೀತಿಸಿ ಮದುವೆಯಾಗುತ್ತೇವೆ ಎಂದಾಗ ಸಾಕಷ್ಟು ಆನಂದವಾಯಿತು. ಸೊಸೆಯನ್ನೂ ಸೇನಾ ಸಮವಸ್ತ್ರದಲ್ಲಿ ನೋಡಿ ಖುಷಿಪಡುತ್ತಿದ್ದೆ. ಈಗ ಇಡೀ ಜಗತ್ತು ಆಕೆಯ ಮಾತು ಕಿವಿಗೊಟ್ಟು ಕೇಳಿತು. ನನ್ನ ಆನಂದಕ್ಕೆ ಪಾರವೇ ಇಲ್ಲ. ನನ್ನ ಮನೆತನಕ್ಕೆ ಕೀರ್ತಿ ತರಲು ಹೇಳಿದ್ದೆ. ಆಕೆ ದೇಶಕ್ಕೇ ಕೀರ್ತಿ ತಂದಳು’ ಎಂದು ಗೌಸ್‌ಸಾಬ್ ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡರು.
‘ಊರಿನ ಜನರೆಲ್ಲ ಮುಗಿಬಿದ್ದು ಅಭಿನಂದಿಸಿದರು. ನಮಸ್ಕಾರ ಮಾಡಿ ಕೈ ಕುಲುಕಿ ಖುಷಿಯಿಂದ ಸುಸ್ತು ಆಗಿದ್ದೇನೆ. ನಿನ್ನೆ ರಾತ್ರಿಯಿಂದ ನಾವು ಯಾರೂ ಮಲಗಿಲ್ಲ. ‘ಭಲೇ ಕೂಸೆ’ ಎಂದು ಸೊಸೆಗೆ ಶಹಬ್ಬಾಷ್ ಹೇಳಬೇಕೆಂದರೆ ಫೋನಿಗೂ ಸಿಗುತ್ತಿಲ್ಲ. ಅಲ್ಲಿ ಆಕೆಯ ಅವಶ್ಯಕತೆ ಇದೆ. ಇಲ್ಲಿಂದಲೇ ಕೋಟಿ ಆಶೀರ್ವಾದ ಮಾಡುತ್ತೇವೆ’ ಎಂದರು.
‘ಪಾಕಿಸ್ತಾನದಂಥ ದುಷ್ಟ ದೇಶ ಇನ್ನೊಂದಿಲ್ಲ. ಉಗ್ರರಿಗೆ ಆಶ್ರಯ ಕೊಟ್ಟ ದೇಶ ನಾಶವಾಗುತ್ತದೆ. ಅಮಾಯಕರ ಕೊಂದವರು ದುರ್ಮರಣಕ್ಕೆ ಈಡಾಗುತ್ತಾರೆ ಹೊರತು ದೈವಮರಣ ಸಿಗುವುದಿಲ್ಲ. ಕೊಲ್ಲುವವರನ್ನು ಖುದಾ ಕ್ಷಮಿಸುವುದಿಲ್ಲ’ ಎಂದೂ ಅವರು ಅಭಿಪ್ರಾಯ ಪಟ್ಟರು.
‘ದೇಶದ ವಿಷಯ ಬಂದಾಗ ನಾವೆಲ್ಲ ಒಂದೇ. ಹಿಂದೂಸ್ತಾನಿಗಳು. ಜಾತಿ ಜನಾಂಗ ಧರ್ಮ ಭೇದ ಮಾಡಕೂಡದು. ನಾನು ಕೆಂಪಜ್ಜನ ಮಠದ ಭಕ್ತ. ನಾಲ್ಕು ಬಾರಿ ಶಬರಿಮಲೆಗೆ ಹೋಗಿ ಹರಕೆ ತೀರಿಸಿದ್ದೇನೆ. ತಿರುಪತಿಗೆ ಮುಡಿ ಕೊಟ್ಟಿದ್ದೇನೆ‘ ಎಂದರು.
‘ಅಷ್ಟು ದೊಡ್ಡ ಹುದ್ದೆಯಲ್ಲಿದ್ದರೂ ಸೊಸೆಗೆ ಅಹಂ ಇಲ್ಲ. ಕೊಣ್ಣೂರಿಗೆ ಬಂದರೆ ನಮ್ಮಂತೆಯೇ ಸಾಧಾರಣಳಾಗಿ ಆಕೆ ಬೆರೆಯುತ್ತಾಳೆ. ವರ್ಷದ ಹಿಂದೆ ಮಗ ಮತ್ತು ಸೊಸೆ ಇಬ್ಬರೂ ಬಂದಿದ್ದರು. ಅವರಿಗೆ ಹೆಚ್ಚು ರಜೆ ಸಿಗುವುದಿಲ್ಲ. ಮುಂದಿನ ಬಕ್ರೀದ್‌ಗೆ ಬರುತ್ತೇವೆ ಎಂದಿದ್ದಾರೆ’ ಎಂದರು.
‘ಸೊಸೆ ಮಿಲಿಟರಿಯಲ್ಲಿದ್ದಾರೆ ಎಂಬುದು ಊರಿಗೆ ಗೊತ್ತಾಗಿದೆ. ಬೆಳಿಗ್ಗೆ ಗ್ರಾಮ ಪಂಚಾಯಿತಿಯವರು ತಾವಾಗಿ ಬಂದು ಮನೆ ಮುಂದಿನ ಕಸ ತೆಗೆದು ಸ್ವಚ್ಛ ಮಾಡಿ ಹೋಗಿದ್ದಾರೆ. ದೇಶದ ಹೆಣ್ಣುಮಗಳು ಏನೆಲ್ಲ ಮಾಡಬಲ್ಲಳು ಎಂಬುದಕ್ಕೆ ಸೊಸೆಯೇ ಮಾದರಿಯಾದಳು’ ಎಂದೂ ಸಂಭ್ರಮಪಟ್ಟರು.
ಕರ್ನಲ್ ಸೋಫಿಯಾ ಖುರೇಶಿ
ಕರ್ನಲ್ ಸೋಫಿಯಾ ಖುರೇಶಿ ಹಾಗೂ ಕರ್ನಲ್ ತಾಜುದ್ದೀನ್ ಬಾಗೇವಾಡಿ ದಂಪತಿ
ಕರ್ನಲ್ ಸೋಫಿಯಾ ಖುರೇಶಿ ಹಾಗೂ ಕರ್ನಲ್ ತಾಜುದ್ದೀನ್ ಬಾಗೇವಾಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.