ಬೆಳಗಾವಿಯ ಅಂಬೇಡ್ಕರ್ ಉದ್ಯಾನದ ಮುಂದೆ ಮಂಗಳವಾರ, ಲಾಠಿಚಾರ್ಜ್‌ನ ಬ್ಯಾನರ್ ತೆರವು ಮಾಡುವಾಗ ಪೊಲೀಸರು ಹಾಗೂ ಪಂಚಮಸಾಲಿ ಮುಖಂಡರ ನಡುವೆ ನೂಕಾಟ– ತಳ್ಳಾಟ ಉಂಟಾಯಿತು ಪ್ರಜಾವಾಣಿ ಚಿತ್ರ
ಬೆಳಗಾವಿ: 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮಾಜದ ಮುಖಂಡರು ಇಲ್ಲಿನ ಅಂಬೇಡ್ಕರ್ ಉದ್ಯಾನದಲ್ಲಿ ಮಂಗಳವಾರವೂ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರೊಂದಿಗೆ ನೂಕಾಟ– ತಳ್ಳಾಟ ನಡೆಯಿತು.
ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಂಬೇಡ್ಕರ್ ಉದ್ಯಾನದಲ್ಲಿ ಧರಣಿ ನಡೆಸಲಾಯಿತು. ಕಳೆದ ವಾರ ಸುವರ್ಣ ವಿಧಾನಸೌಧದ ಮುಂದೆ ನಡೆಸಿದ ಲಾಠಿಚಾರ್ಜ್ ಸಂದರ್ಭದ ಫೋಟೊ ಹಾಗೂ ಕಟೌಟುಗಳನ್ನು ಪ್ರತಿಭಟನಾಕಾರರು ಉದ್ಯಾನದ ಮುಖ್ಯದ್ವಾರದಲ್ಲಿ ಪ್ರದರ್ಶನಕ್ಕೆ ಇಟ್ಟರು.
‘ಚನ್ನಮ್ಮನ ನಾಡಲ್ಲೇ ಚನ್ನಮ್ಮನ ಮಕ್ಕಳ ರಕ್ತ ಹರಿದಿದೆ’ ಎಂಬ ಸಾಲು ಬರೆದಿದ್ದರು. ಲಾಠಿ ಚಾರ್ಜ್‌ನ ಸನ್ನಿವೇಶಗಳು, ಗಾಯಗೊಂಡವರು, ಅಳುತ್ತಿದ್ದವರ ಚಿತ್ರಗಳೂ ಇದ್ದವು.
ಇದನ್ನು ಕಂಡು ಪೊಲೀಸರು ಪೋಸ್ಟರ್, ಬ್ಯಾನರ್‌ಗಳನ್ನು ತೆರವು ಮಾಡಲು ಮುಂದಾದರು. ಆಗ ಸ್ಥಳಕ್ಕೆ ಬಂದ ಕೆಲ ಮುಖಂಡರು ತಡೆಯೊಡ್ಡಿದರು. ಕೆಲಕಾಲ ಗುಂಪಿನ ಮಧ್ಯೆ ನೂಕಾಟ– ತಳ್ಳಾಟ ಉಂಟಾಯಿತು. ಬ್ಯಾನರ್‌ಗಳು ಹರಿದವು. ಕೊನೆಗೂ ಪೊಲೀಸರು ಎಲ್ಲ ಬ್ಯಾನರುಗಳನ್ನು ಕಿತ್ತುಕೊಂಡು ಹೋದರು. ಪ್ರತಿಭಟನಾಕಾರರು ಕೆಲಕಾಲ ರಸ್ತೆ ಮಧ್ಯೆ ಕುಳಿತು ಧಿಕ್ಕಾರ ಕೂಗಿದರು.
ಸಂಜೆ 6ರವರೆಗೂ ಸ್ವಾಮೀಜಿ ನೇತೃತ್ವದಲ್ಲಿ ಧರಣಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.