ADVERTISEMENT

ಪಂಚಮಸಾಲಿ ಹೋರಾಟ | ಯತ್ನಾಳ್ ಆಗಮನ: ‘ಹುಲಿ ಬಂತು ಹುಲಿ’ ಎಂದು ಘೋಷಣೆ

2ಎ ಮೀಸಲಾತಿಗಾಗಿ ಅಪಾರ ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2024, 7:36 IST
Last Updated 10 ಡಿಸೆಂಬರ್ 2024, 7:36 IST
<div class="paragraphs"><p>ಪಂಚಮಸಾಲಿ ಹೋರಾಟ</p></div>

ಪಂಚಮಸಾಲಿ ಹೋರಾಟ

   

ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ, ಇಲ್ಲಿ‌ನ ಸುವರ್ಣ ವಿಧಾನಸೌಧದ ಬಳಿ ಬೃಹತ್ ಸಮಾವೇಶ ಮಧ್ಯಾಹ್ನವೂ ಮುಂದುವರಿಯಿತು. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಗಮಿಸುತ್ತಿದ್ದಂತೆ ಸಂಚಲನ ಉಂಟಾಯಿತು.

‘ಹುಲಿ ಬಂತು ಹುಲಿ...’ ಎಂದು ಜ‌ನ ಘೋಷಣೆ ಮೊಳಗಿಸಿದರು. ಯತ್ನಾಳ್ ಭಾಷಣ ಮಾಡಬೇಕು ಎಂದು ಜನಸ್ತೋಮದಿಂದ‌ ಕೂಗಾಟ ನಿರಂತರವಾಯಿತು.

ADVERTISEMENT

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಶಾಸಕರಾದ ರಾಜು ಕಾಗೆ, ಅರವಿಂದ ಬೆಲ್ಲದ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಮಹೇಶ ಕುಮಠಳ್ಳಿ, ಪಂಚಸೇನೆ ರಾಷ್ಟ್ರೀಯ ಅಧ್ಯಕ್ಷ ನಾಗರಾಜ‌ ಹುಲಿ, ಮಾಜಿ‌ ಸಚಿವ ಎ.ಬಿ.ಪಾಟೀಲ, ಸಿ.ಸಿ.ಪಾಟೀಲ, ರೋಹಿಣಿ ಪಾಟೀಲ, ಡಾ.ಮಹಾಂತೇಶ ಕಡಾಡಿ, ಮಾಜಿ ಸಂಸದ ಶಿವರಾಮೇಗೌಡ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕಿ ಶಶಿಕಲಾ ಜೊಲ್ಲೆ ಮುಂತಾದವರ ಮುಂದಾಳತ್ವದಲ್ಲಿ ಅಪಾರ ಸಂಖ್ಯೆಯ ಜನ ಸೇರಿದರು.

ರಾಜ್ಯದ ಬೇರೆ ಬೇರೆ ಕಡೆಯಿಂದ ಅಪಾರ ಸಂಖ್ಯೆಯ ಹೋರಾಟಗಾರರು ಸೇರಿದರು.

ಜೈ ಲಿಂಗಾಯತ, ಜೈ ಪಂಚಮಸಾಲಿ, ಜೈ ಬಸವೇಶ ಎಂಬ ಘೋಷಣೆಗಳು ನಿರಂತರ ಮೊಳಗಿದವು. ಕೇಸರಿ‌ ಧ್ವಜ ಹಿಡಿದು, ಕೇಸರಿ ಶಲ್ಯ, ಹಸಿರು ಟವಲುಗಳನ್ನು ಹಾರಾಡಿಸಿ ಘೋಷಣೆ ಕೂಗಿದರು. ರಾಜ್ಯ ಸರ್ಕಾರದ ವಿರುದ್ಧ‌ ಆಕ್ರೋಶ ಹೊರಹಾಕಿದರು.

ಬೈಲಹೊಂಗಲ, ಹಿರೇಬಾಗೇವಾಡಿ, ಬಸ್ತವಾಡ, ಹಲಗಾ ಮುಂತಾದ ಕಡೆಗಳಲ್ಲಿ ಧಾವಿಸಿ ಬಂದ ಜನರನ್ನು ಪೊಲೀಸರು ಅಲ್ಲಲ್ಲಿ ತಡೆದರು. ಇದರಿಂದ ವೇದಿಕೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ವೇದಿಕೆ ಮೇಲಿದ್ದ ಸ್ವಾಮೀಜಿ‌ ಗುಡುಗಿದರು.

‘ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡದೇ ಇದ್ದರೆ ಸುವರ್ಣ ಸೌಧಕ್ಕೆ‌ ನುಗ್ಗುತ್ತೇವೆ’ ಎಂದು ಎಚ್ಚರಿಕೆ‌ ನೀಡಿದರು. ನಂತರ ಹೋರಾಟಗಾರರನ್ನು ಬಿಡುಗಡೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.