ADVERTISEMENT

ಮನೆ ಬಾಗಿಲಿಗೆ ತರಕಾರಿ; ಜನಸಂಚಾರ ವಿರಳ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 15:01 IST
Last Updated 28 ಮಾರ್ಚ್ 2020, 15:01 IST
ಬೆಳಗಾವಿ ಸಮೀಪದ ಸಾಂಬ್ರಾ ಬಳಿ ಹೊಲದಲ್ಲಿ ಮಕ್ಕಳು ಕ್ರಿಕೆಟ್‌ ಆಟದಲ್ಲಿ ತೊಡಗಿದ್ದರು.– ಏಕನಾಥ ಅಗಸಿಮನಿ
ಬೆಳಗಾವಿ ಸಮೀಪದ ಸಾಂಬ್ರಾ ಬಳಿ ಹೊಲದಲ್ಲಿ ಮಕ್ಕಳು ಕ್ರಿಕೆಟ್‌ ಆಟದಲ್ಲಿ ತೊಡಗಿದ್ದರು.– ಏಕನಾಥ ಅಗಸಿಮನಿ   

ಬೆಳಗಾವಿ: ಮನೆ ಬಾಗಿಲಿಗೆ ತರಕಾರಿ ಪೂರೈಕೆ ಹಾಗೂ ದಿನಸಿ ಅಂಗಡಿಗಳ ಮೇಲಿನ ನಿರ್ಬಂಧವನ್ನು ಸಡಿಲುಗೊಳಿಸಿದ್ದರ ಫಲವಾಗಿ ಶನಿವಾರ ನಗರದಲ್ಲಿ ಜನಸಂಚಾರ ವಿರಳವಾಗಿತ್ತು.

ಬೆಳಿಗ್ಗೆ ಹಾಲು, ದಿನಸಿ ಅಂಗಡಿಗಳು ಎಂದಿನಂತೆ ತೆರೆದಿದ್ದವು. ಅಕ್ಕಪಕ್ಕದ ನಿವಾಸಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಪದಾರ್ಥ ಪಡೆದರು. ರಸ್ತೆ ಬದಿಯಲ್ಲಿ ಕುಳಿತು ತರಕಾರಿ ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಎಬ್ಬಿಸಿ ಕಳುಹಿಸಿದರು.

ತಳ್ಳು ಗಾಡಿ, ಟಾಂಟಾಂ ಮೂಲಕ ಕೆಲವು ವ್ಯಾಪಾರಸ್ಥರು ಆಯಾ ಪ್ರದೇಶಗಳಲ್ಲಿ ತರಕಾರಿ ಮಾರಾಟ ಮಾಡಿದರು. ಕೆಲವು ಕಡೆ ಹೆಚ್ಚಿನ ದರ ಪಡೆದರು ಎನ್ನುವ ಆರೋಪ ಕೇಳಿಬಂದಿತು.

ADVERTISEMENT

ರಸ್ತೆಗಳು ಬಿಕೋ

ಜನರ ಸಂಚಾರ ತುಂಬಾ ವಿರಳವಾಗಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪ್ರಮುಖ ಬೀದಿ ಹಾಗೂ ವೃತ್ತಗಳಲ್ಲಿ ಪೊಲೀಸರು ಸಂಚರಿಸುವ ಜನರ ಮೇಲೆ ಮತ್ತು ವಾಹನಗಳ ಮೇಲೆ ನಿಗಾ ವಹಿಸಿದ್ದರು. ತುರ್ತು ಪರಿಸ್ಥಿತಿಗಳನ್ನು ಹೊರತುಪಡಿಸಿ, ಬೇರಾರಿಗೂ ಅವಕಾಶ ನೀಡುತ್ತಿರಲಿಲ್ಲ. ಲಾಠಿ ರುಚಿ ತೋರಿಸಿ, ವಾಪಸ್‌ ಕಳುಹಿಸುತ್ತಿದ್ದರು.

ಎಪಿಎಂಸಿಯಲ್ಲಿ ಜನದಟ್ಟಣೆ

ಬೆಳಿಗ್ಗೆ ಕೆಲಹೊತ್ತು ಎಪಿಎಂಸಿಯಲ್ಲಿ ಜನದಟ್ಟಣೆ ಕಂಡುಬಂದಿತು. ವ್ಯಾಪಾರಸ್ಥರು ಹಾಗೂ ರೈತರು ಜಮಾಯಿಸಿದ್ದರಿಂದ ಎಪಿಎಂಸಿ ಎದುರಿನ ರಸ್ತೆಯಲ್ಲೂ ವಾಹನ ದಟ್ಟಣೆ ಉಂಟಾಗಿತ್ತು. ಪೊಲೀಸರು ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.