ADVERTISEMENT

ಪಿಎಲ್‌ಡಿ ಬ್ಯಾಂಕ್‌ ಚುನಾವಣೆ; ಯಾರ ಸಂಪರ್ಕಕ್ಕೂ ಸಿಗದ ನಿರ್ದೇಶಕರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2018, 13:49 IST
Last Updated 6 ಸೆಪ್ಟೆಂಬರ್ 2018, 13:49 IST

ಬೆಳಗಾವಿ:ತೀವ್ರ ಕುತೂಹಲ ಕೆರಳಿಸಿರುವ ಬೆಳಗಾವಿ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಶುಕ್ರವಾರ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ, ಕಾಂಗ್ರೆಸ್‌ನ ರಮೇಶ ಜಾರಕಿಹೊಳಿ ಹಾಗೂ ಅವರದ್ದೇ ಪಕ್ಷದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ನಡುವಿನ ಬಣ ರಾಜಕಾರಣದಿಂದಾಗಿ ಚುನಾವಣೆಗೆ ಮಹತ್ವ ಬಂದಿದೆ.

14 ಜನ ನಿರ್ದೇಶಕರನ್ನು ಹೊಂದಿರುವ ಬ್ಯಾಂಕ್‌ನಲ್ಲಿ 9 ಜನ ಸದಸ್ಯರು ಲಕ್ಷ್ಮಿ ಬಣದ ಜೊತೆ ಹಾಗೂ ಇನ್ನುಳಿದ 5 ನಿರ್ದೇಶಕರು ಸಚಿವರ ಬಣದ ಜೊತೆ ಗುರುತಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ಬಣಕ್ಕೆ ಸೇರಿದವರೇ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಬೇಕು ಎಂದು ಎರಡೂ ಬಣದವರು ಪಟ್ಟು ಹಿಡಿದಿದ್ದೇ ಸಂಘರ್ಷಕ್ಕೆ ಕಾರಣವಾಯಿತು.

ಪಿಎಲ್‌ಡಿ ಬ್ಯಾಂಕ್‌ನಲ್ಲಿ ರಾಜಕಾರಣ ತರಬಾರದು. ಅಧ್ಯಕ್ಷರು– ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಬೇಕೆಂದು ಶಾಸಕ ಸತೀಶ ಜಾರಕಿಹೊಳಿ ಪಟ್ಟು ಹಿಡಿದಿದ್ದರು. ಇದಕ್ಕೆ ಬೆಂಬಲ ನೀಡಿರುವ ರಮೇಶ ಜಾರಕಿಹೊಳಿ, ಲಕ್ಷ್ಮಿ ವಿರುದ್ಧ ಸಿಡಿದೆದಿದ್ದಾರೆ. ಕೊನೆಯ ಹಂತದ ಪ್ರಯತ್ನವಾಗಿ ರಮೇಶ ಅವರು, ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರತಿತಂತ್ರ ಹೂಡಲು ಪ್ರಯತ್ನ ನಡೆಸಿದರು ಎಂದು ಹೇಳಲಾಗುತ್ತಿದೆ.

ADVERTISEMENT

ಯಾರ ಸಂಪರ್ಕಕ್ಕೂ ಸಿಗದ ಸದಸ್ಯರು

ಬ್ಯಾಂಕಿನ 14 ಜನ ನಿರ್ದೇಶಕರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ವಿಶೇಷವಾಗಿ ಲಕ್ಷ್ಮಿ ಜೊತೆ ಗುರುತಿಸಿಕೊಂಡಿರುವ 9 ಜನ ಸದಸ್ಯರ ಮೊಬೈಲ್‌ ಫೋನ್‌ಗಳು ಸ್ಥಗಿತಗೊಂಡಿವೆ. ಎಲ್ಲ ನಿರ್ದೇಶಕರಿಗೆ ಪೊಲೀಸ್‌ ಭದ್ರತೆ ನೀಡಲಾಗಿದೆ.

ನಾಮಪತ್ರ ಸಲ್ಲಿಸಲು ಬೆಳಿಗ್ಗೆ 10ರಿಂದ 11 ಗಂಟೆ ಸಮಯ ನಿಗದಿಯಾಗಿದ್ದು, ಈ ಸಮಯಕ್ಕೆ ಸರಿಯಾಗಿ ನಿರ್ದೇಶಕರು ನೇರವಾಗಿ ಬೆಳಗಾವಿಯ ಮಹಾದ್ವಾರ ರೋಡ್‌ನಲ್ಲಿರುವ ಬ್ಯಾಂಕ್‌ ಕಚೇರಿಗೆ ಆಗಮಿಸುವ ನಿರೀಕ್ಷೆಯಿದೆ. ಸಂಘರ್ಷಕ್ಕೆ ಕಾರಣಕ್ಕಾಗಿರುವುದರಿಂದ ಬ್ಯಾಂಕ್‌ ಬಳಿ ಈಗಾಗಲೇ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

144 ಕಲಂ ಜಾರಿ

‘ಚುನಾವಣೆಯ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಸುತ್ತಮುತ್ತ 200 ಮೀಟರ್‌ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಗಳವರೆಗೆ 144 ಕಲಂ ನಿಷೇಧಾಜ್ಞೆ ಜಾರಿ ಮಾಡಿದ್ದೇನೆ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಸುರಕ್ಷತೆಗೆ ಅವಶ್ಯಕತೆ ಇರುವ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇನೆ’ ಎಂದು ನಗರ ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.