ADVERTISEMENT

‘ಬಿಸಿಯೂಟ’ಕ್ಕೆ ಬರುವವರಿಗೂ ‘ಬರ’!

ಜಿಲ್ಲೆಯಲ್ಲಿ ಮಕ್ಕಳಿಂದ ನೀರಸ ಪ್ರತಿಕ್ರಿಯೆ

ಎಂ.ಮಹೇಶ
Published 26 ಏಪ್ರಿಲ್ 2019, 19:45 IST
Last Updated 26 ಏಪ್ರಿಲ್ 2019, 19:45 IST
ಬೆಳಗಾವಿಯ ಮಹಾಂತೇಶನಗರದ ಸರ್ಕಾರಿ ಮಾದರಿ ಶಾಲೆಯಲ್ಲಿ ‘ಬೇಸಿಗೆ ಸಂಭ್ರಮ’ದಡಿ ನಡೆದ ಕಂಪ್ಯೂಟರ್ ಕಲಿಕೆ ಚಟುವಟಿಕೆಯನ್ನು ಅಧಿಕಾರಿಗಳು ವೀಕ್ಷಿಸಿದರು
ಬೆಳಗಾವಿಯ ಮಹಾಂತೇಶನಗರದ ಸರ್ಕಾರಿ ಮಾದರಿ ಶಾಲೆಯಲ್ಲಿ ‘ಬೇಸಿಗೆ ಸಂಭ್ರಮ’ದಡಿ ನಡೆದ ಕಂಪ್ಯೂಟರ್ ಕಲಿಕೆ ಚಟುವಟಿಕೆಯನ್ನು ಅಧಿಕಾರಿಗಳು ವೀಕ್ಷಿಸಿದರು   

ಬೆಳಗಾವಿ: ಜಿಲ್ಲೆಯಲ್ಲಿ ಬೇಸಿಗೆ ರಜೆಯಲ್ಲೂ ಸರ್ಕಾರಿ ಶಾಲೆಗಳಲ್ಲಿ ನೀಡಲಾಗುತ್ತಿರುವ ಮಧ್ಯಾಹ್ನದ ಬಿಸಿಯೂಟ ಸೇವಿಸಲು ವಿದ್ಯಾರ್ಥಿಗಳು ನಿರೀಕ್ಷಿತ ಸಂಖ್ಯೆಯಲ್ಲಿ ಹಾಜರಾಗುತ್ತಿಲ್ಲ.

ಸತತ ಬರಗಾಲದಿಂದಾಗಿ ಜನರು ಅದರಲ್ಲೂ ಗ್ರಾಮೀಣ ಪ್ರದೇಶಗಳವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ನೆರವಾಗಲೆಂದು ಸರ್ಕಾರವು ಕೆಲವು ವರ್ಷಗಳಿಂದೀಚೆಗೆ ಬೇಸಿಗೆ ರಜೆಯಲ್ಲೂ ಕೆಲ ಕಾಲ ಶಾಲೆ ನಡೆಸಿ, ಮಕ್ಕಳಿಗೆ ಬಿಸಿಯೂಟ ನೀಡುವ ಪರಿಪಾಠ ಬೆಳೆಸಿಕೊಂಡು ಬಂದಿದೆ. ಅದರಂತೆ ಈ ವರ್ಷವೂ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದರೆ, ಪೋಷಕರು ಹಾಗೂ ಮಕ್ಕಳಿಂದ ಇದಕ್ಕೆ ಸಮರ್ಪಕ ಸ್ಪಂದನೆ ವ್ಯಕ್ತವಾಗಿಲ್ಲ. ಶಾಲೆಗಳಲ್ಲಿ ಕೆಲವೇ ಮಕ್ಕಳಷ್ಟೇ ಬಂದು ಮಧ್ಯಾಹ್ನದ ಊಟ ಮಾಡಿ ಹೋಗುತ್ತಿದ್ದಾರೆ.

ಬಹುತೇಕ ಮಕ್ಕಳು ಬೇಸಿಗೆ ರಜೆ ಕಳೆಯಲು, ಅಜ್ಜ–ಅಜ್ಜಿಯ ಮನೆ ಅಥವಾ ನೆಂಟರಿಷ್ಟರ ಊರಿಗೆ ಹೋಗುತ್ತಾರೆ. ಹೀಗಾಗಿ, ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಹಳ್ಳಿಗಳಲ್ಲಿನ ಕೆಲವು ಪೋಷಕರು ಮಕ್ಕಳನ್ನು ತಮ್ಮೊಂದಿಗೆ ಕೆಲಸಕ್ಕೆ ಕರೆದುಕೊಂಡು ಹೋಗುವ ಉದಾಹರಣೆಗಳೂ ಇವೆ. ಹೀಗಾಗಿ, ಬಿಸಿಯೂಟದ ಲಾಭ ಪಡೆದುಕೊಳ್ಳಲು ಬಹಳ ಮಂದಿ ಬರುತ್ತಿಲ್ಲ ಎನ್ನಲಾಗುತ್ತಿದೆ.

ADVERTISEMENT

ಆಯ್ದ ಶಾಲೆಗಳಲ್ಲಿ:

6 ಹಾಗೂ 7ನೇ ತರಗತಿಗೆ ಉತ್ತೀರ್ಣರಾಗಿರುವ ಮಕ್ಕಳಿಗೆ ಮಾತ್ರ ಬೇಸಿಗೆ ಸಂಭ್ರಮ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಡಿಎಸ್‌ಇಆರ್‌ಟಿ ವತಿಯಿಂದ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ. ತರಬೇತಿ ಪಡೆದ ಶಿಕ್ಷಕರು ಮಕ್ಕಳಿಗೆ ಕ್ರಾಫ್ಟ್‌ ಸಿದ್ಧಪಡಿಸುವುದು, ಚಿತ್ರಕಲೆ ಮೊದಲಾದ ಚಟುವಟಿಕೆಗಳನ್ನು ನಡೆಸುವರು. 50ಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ ಮುಖ್ಯಶಿಕ್ಷಕ ಹಾಗೂ ಒಬ್ಬ ಶಿಕ್ಷಕರನ್ನು ನಿಯೋಜಿಸಲಾಗಿದೆ. ಕಡಿಮೆ ಮಕ್ಕಳಿದ್ದರೆ ಒಬ್ಬರು ಶಿಕ್ಷಕರಷ್ಟೇ ಇರುತ್ತಾರೆ. ಬಿಸಿಯೂಟ ಯೋಜನೆಯ ಸಿಬ್ಬಂದಿ ಅಡುಗೆ ತಯಾರಿಸಿ ಬಡಿಸುತ್ತಾರೆ.

‘ಎಲ್ಲೆಲ್ಲಿ ಮಕ್ಕಳು ಹಾಗೂ ಪೋಷಕರು ಒಪ್ಪಿಗೆ ಕೊಟ್ಟಿದ್ದಾರೋ ಆ ಶಾಲೆಗಳಲ್ಲೆಲ್ಲಾ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಯಾರ ಮೇಲೂ ಒತ್ತಡ ಹಾಕಿ ಮಕ್ಕಳನ್ನು ಕರೆದುಕೊಂಡು ಬರುವುದಕ್ಕೆ ಆಗುವುದಿಲ್ಲ. ಸಾಮಾನ್ಯವಾಗಿ ಬೇಸಿಗೆ ರಜೆಯಲ್ಲಿ ಮಕ್ಕಳು ಬೇರೆ ಊರುಗಳಲ್ಲಿರುವ ಬಂಧುಗಳ ಮನೆಗಳಿಗೆ ಹೋಗುತ್ತಾರೆ. ಹೀಗಾಗಿ, ಶಾಲೆಗಳಲ್ಲಿ ಹಾಜರಾತಿ ಕಡಿಮೆ ಇರುತ್ತದೆ’ ಎಂದು ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಅಕ್ಷರ ದಾಸೋಹ ಕಾರ್ಯಕ್ರಮ ಶಿಕ್ಷಣಾಧಿಕಾರಿ ಬಸವರಾಜ ಮಿಲ್ಲಾನಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಗುರುವಾರದಿಂದ ಆರಂಭ:

‘ಬೇಸಿಗೆ ಸಂಭ್ರಮಕ್ಕೆ ಆಯ್ಕೆಯಾಗಿರುವ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮೊದಲ ವಾರ ಕುಟುಂಬ ವಿಷಯದ ಆಧಾರದ ಮಕ್ಕಳಿಗೆ ತಿಳಿಸಲಾಗುತ್ತದೆ. 2ನೇ ವಾರ ನೀರಿನ ಸಂರಕ್ಷಣೆ ಕುರಿತು ಹೇಳಿಕೊಡಲಾಗುವುದು. ಹೀಗೆ, ಪ್ರತಿ ವಾರ ಒಂದೊಂದು ವಿಷಯ ಆಧರಿಸಿ ಚಟುವಟಿಕೆಗಳು ನಡೆಯಲಿವೆ. ಏ. 25ರಿಂದ ಇವು ಆರಂಭವಾಗಿವೆ. ಲಭ್ಯವಿರುವ ಕಡೆಗಳಲ್ಲಿ ಕಂಪ್ಯೂಟರ್‌ ತರಬೇತಿಯನ್ನೂ ನೀಡಲಾಗುವುದು. ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಡಿಮೆ ಚಟುವಟಿಕೆಗಳಿರುತ್ತವೆ. ಮಧ್ಯಾಹ್ನದ ಬಿಸಿಯೂಟ ಎಲ್ಲ ಶಾಲೆಗಳಲ್ಲೂ ಲಭ್ಯವಿದೆ’ ಎಂದು ಮಾಹಿತಿ ನೀಡಿದರು.

ಈ ಬಾರಿ ‘ಬೇಸಿಗೆ ಸಂಭ್ರಮ’ ಕಾರ್ಯಕ್ರಮವನ್ನು, ಬಿಸಿಲಿನ ಪ್ರಮಾಣ ಹೆಚ್ಚಿರುವುದರಿಂದಾಗಿ ಬೆಳಿಗ್ಗೆ 9ರಿಂದ 11ರವರೆಗೆ ಮಾತ್ರವೇ ನಡೆಸಲಾಗುತ್ತಿದೆ. ಕಳೆದ ವರ್ಷ ಮಧ್ಯಾಹ್ನ 2 ಗಂಟೆವರೆಗೂ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.