ಬೆಳಗಾವಿ: ತೋಟಗಾರಿಕೆ ಇಲಾಖೆಯು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಸ್ವಯಂಚಾಲಿತ ಹವಾಮಾನ ಮುನ್ಸೂಚನಾ ಘಟಕವನ್ನು ಒದಗಿಸುತ್ತಿದೆ. ತೋಟಗಾರಿಕೆ ಬೆಳೆ ಬೆಳೆಯುವ ರೈತರು ಹವಾಮಾನ ವೈಪರೀತ್ಯದಿಂದ ಆಗುವ ನಷ್ಟ ತಪ್ಪಿಸಿ, ಉತ್ತಮ ಇಳುವರಿ ಪಡೆಯಲು ನೆರವಾಗುವುದು ಇದರ ಉದ್ದೇಶ.
ಜಿಲ್ಲೆಯಲ್ಲಿ 57 ಸಾವಿರ ಹೆಕ್ಟೇರ್ ತೋಟಗಾರಿಕೆ ಕ್ಷೇತ್ರವಿದೆ. ಈ ಪೈಕಿ 32 ಸಾವಿರ ಹೆಕ್ಟೇರ್‌ನಲ್ಲಿ ತರಕಾರಿ ಮತ್ತು 15 ಸಾವಿರ ಹೆಕ್ಟೇರ್‌ನಲ್ಲಿ ದ್ರಾಕ್ಷಿ, ದಾಳಿಂಬೆ, ಮಾವು, ಪೇರಲ, ಚಿಕ್ಕು, ಡ್ರ್ಯಾಗನ್ ಫ್ರ್ಯೂಟ್ ಬೆಳೆಯುತ್ತಾರೆ. ಉಳಿದ ಜಮೀನಿನಲ್ಲಿ ಶುಂಠಿ, ಕಾಳಮೆಣಸು ಮತ್ತಿತರ ಬೆಳೆ ತೆಗೆಯುತ್ತಾರೆ.
‘ತೋಟಗಾರಿಕೆ ಬೆಳೆಗೆ ಅಗತ್ಯ ಪ್ರಮಾಣದಷ್ಟು ಮಾತ್ರ ನೀರು ಒದಗಿಸಬೇಕು. ಕೆಲವೊಮ್ಮೆ ಮಳೆಯಾದರೂ ಪಂಪ್‌ಸೆಟ್ ಮೂಲಕ ಹೆಚ್ಚಿನ ನೀರು ಹರಿಸುವುದರಿಂದ ಬೆಳೆಗೆ ಹಾನಿ ಆಗುತ್ತದೆ. ನೀರಿನ ಅಭಾವದಿಂದ ಇಳುವರಿ ಕುಸಿಯುತ್ತದೆ. ಆದರೆ, ಈ ಘಟಕದ ನೆರವಿನಿಂದ ಬೆಳೆಗೆ ಅಗತ್ಯವಿರುವಷ್ಟೇ ನೀರು ಕೊಟ್ಟು, ಉತ್ತಮ ಇಳುವರಿ ಪಡೆಯಬಹುದು’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮೂರು–ನಾಲ್ಕು ದಿನ ಮುಂಚೆಯೇ, ಮಳೆಯಾಗುವ ಸಾಧ್ಯತೆ ಮತ್ತು ಕೃಷಿಭೂಮಿಯಲ್ಲಿ ಲಭ್ಯವಿರುವ ನೀರಿನ ಪ್ರಮಾಣದ ಬಗ್ಗೆ ತಿಳಿಸುತ್ತದೆ. ಯಾವಾಗ ಮತ್ತು ಎಷ್ಟು ನೀರನ್ನು ಬೆಳೆಗೆ ಹರಿಸಬೇಕೆಂದು ಹೇಳುತ್ತದೆ. ಗಾಳಿಯ ವೇಗದ ಪ್ರಮಾಣದ ಜತೆಗೆ, ಬೆಳೆಗೆ ಯಾವ ಕಾಯಿಲೆ ಬರಬಹುದು, ಯಾವ ಕೀಟನಾಶಕ ಸಿಂಪಡಿಸಬಹುದು ಮತ್ತು ಹನಿ ನೀರಾವರಿ ಪದ್ಧತಿ ಮೂಲಕ ನೀರಿನಲ್ಲಿ ಕರಗುವ ರಸಗೊಬ್ಬರವನ್ನು ಎಷ್ಟು ಸಿಂಪಡಿಸಬೇಕು ಎಂಬುದು ಗೊತ್ತಾಗುತ್ತದೆ’ ಎಂದರು.
‘2024–25 ಮತ್ತು 2025–26ನೇ ಸಾಲಿಗಾಗಿ ಈ ಯೋಜನೆ ರೂಪಿಸಲಾಗಿದೆ. ಪ್ರತಿ ಘಟಕದ ದರ ಸುಮಾರು ₹40 ಸಾವಿರ ಇದೆ. ಈ ಪೈಕಿ ಸರ್ಕಾರದಿಂದ ₹20 ಸಾವಿರ ಸಹಾಯಧನ ನೀಡಲಾಗುತ್ತಿದೆ. ಈ ಘಟಕಗಳನ್ನು ಪೂರೈಸಲು ರಾಜ್ಯದಲ್ಲಿ 6 ಉತ್ಪಾದಕರು ಮತ್ತು ವಿತರಕರನ್ನು ಗುರುತಿಸಲಾಗಿದೆ’ ಎಂದು ಹೇಳಿದರು.
ಉತ್ತಮ ಇಳುವರಿ ನಿರೀಕ್ಷೆ: ‘ನಾನು ಒಂದೂವರೆ ಎಕರೆ ಜಮೀನು ಹೊಂದಿದ್ದೇನೆ. ಈ ಪೈಕಿ 30 ಗುಂಟೆಯಲ್ಲಿ ಅಡಿಕೆ ಬೆಳೆದಿರುವೆ. ಈ ಹಿಂದೆ ಅಂದಾಜಿನ ಮೇಲೆ ಬೆಳೆಗೆ ನೀರು ಹರಿಸುತ್ತಿದ್ದೆ. ಕೆಲ ಬಾರಿ ಹೆಚ್ಚಿನ ನೀರು ಹರಿಸಿ, ಬೆಳೆಹಾನಿ ಆಗುತ್ತಿತ್ತು. ನೀರಿನ ಅಪವ್ಯಯವೂ ಉಂಟಾಗುತ್ತಿತ್ತು. ಆದರೆ, ಈಗ ಘಟಕ ಅಳವಡಿಸಿದ್ದು, ಬೆಳೆಗೆ ತಕ್ಕಷ್ಟೇ ನೀರು ಕೊಡುವುದರಿಂದ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದೇನೆ’ ಎಂದು ಗೋಕಾಕ ತಾಲ್ಲೂಕಿನ ಉರಬಿನಹಟ್ಟಿಯ ರೈತ ಸೋಮಶೇಖರ ರೆಡ್ಡಿ ಹೇಳಿದರು.
ಹೊಲದಲ್ಲಿ ಘಟಕ ಅಳವಡಿಸುವ ಕಂಪನಿಯ ಆ್ಯಪ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡಿದ್ದೇನೆ. ಅದರ ಮೂಲಕ ಬೆಳೆ ಕುರಿತು ಮಾಹಿತಿ ಸಿಗುತ್ತಿದೆ.–ಸೋಮಶೇಖರ ರೆಡ್ಡಿ, ರೈತ ಉರಬಿನಹಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.