ADVERTISEMENT

ಬೆಳಗಾವಿ: ಕೋವಿಡ್‌ಅನ್ನು 15 ನಿಮಿಷದಲ್ಲಿಯೇ ಪತ್ತೆ ಹಚ್ಚುವ ಕಿಟ್‌

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 16:31 IST
Last Updated 18 ಜುಲೈ 2020, 16:31 IST
ಎಂ.ಜಿ. ಹಿರೇಮಠ
ಎಂ.ಜಿ. ಹಿರೇಮಠ   

ಬೆಳಗಾವಿ: ‘ಕೇವಲ 15 ನಿಮಿಷಗಳಲ್ಲಿಯೇ ಕೋವಿಡ್‌ ಸೋಂಕು ಪತ್ತೆ ಹಚ್ಚುವ ರ‍್ಯಾಪಿಡ್‌ ಆಂಟಿಜೆನ್‌ ಕಿಟ್‌ ನಮ್ಮಲ್ಲಿ ಬಂದಿವೆ. ಸುಮಾರು 1,000 ಕಿಟ್‌ಗಳನ್ನು ತರಿಸಿಕೊಳ್ಳಲಾಗಿದ್ದು, ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಮಾತ್ರ ಇವುಗಳನ್ನು ಬಳಸಬಹುದಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

ತಮ್ಮ ಕಚೇರಿಯ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗ ಹೆಚ್ಚೆಚ್ಚು ಮಾದರಿಗಳ ಪರೀಕ್ಷೆ ಮಾಡುತ್ತಿರುವುದರಿಂದ ಸೋಂಕಿತರ ಪ್ರಕರಣ ಹೆಚ್ಚೆಚ್ಚು ವರದಿಯಾಗುತ್ತಿವೆ. ಜನರು ಭಯ ಪಡಬಾರದು. ಚಿಕಿತ್ಸೆಗೆ ಬೇಕಾದ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಈ ಮರಣ ಪ್ರಮಾಣವನ್ನು ತಡೆಗಟ್ಟುವುದು ನಮ್ಮ ಆದ್ಯತೆಯಾಗಿದೆ’ ಎಂದು ತಿಳಿಸಿದರು.

‘ಲಕ್ಷಣರಹಿತ ಕೋವಿಡ್ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಲು ಅನುಕೂಲವಾಗುವಂತೆ ಜಿಲ್ಲೆಯ ಹತ್ತು ತಾಲ್ಲೂಕಿನಲ್ಲಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್‌ ಆರಂಭಿಸಲಾಗಿದೆ. ಅದೇ ರೀತಿ ಪ್ರತಿ ತಾಲ್ಲೂಕಿನ ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಹೊಂದಿರುವ 30 ಬೆಡ್ ಕೂಡ ಸಿದ್ಧವಾಗಿಟ್ಟುಕೊಳ್ಳಲಾಗಿದೆ. ಬೈಲಹೊಂಗಲ, ಸವದತ್ತಿ, ರಾಮದುರ್ಗ ಮತ್ತು ಗೋಕಾಕನಲ್ಲಿ ಈಗಾಗಲೇ ಲಕ್ಷಣರಹಿತರಿಗೆ ಚಿಕಿತ್ಸೆ ಆರಂಭಿಸಲಾಗಿದ್ದು, ವೈದ್ಯರ ತಂಡ ನಿಯೋಜಿಸಲಾಗಿದೆ. ಗಂಭೀರ ಪ್ರಕರಣ ಹಾಗೂ ಚಿಕಿತ್ಸೆ ಅಗತ್ಯವಿರುವ ವರಿಗೆ ಮಾತ್ರ ಬಿಮ್ಸ್ ಗೆ ದಾಖಲು ಮಾಡಲಾಗುತ್ತಿದೆ’ ಎಂದು ವಿವರಿಸಿದರು.

ADVERTISEMENT

‘ಲಕ್ಷಣರಹಿತರಿಗೆ ತಾಲ್ಲೂಕು ಮಟ್ಟದಲ್ಲಿ ಹತ್ತು ದಿನಗಳ ಕಾಲ ಸರ್ಕಾರದ ಮಾರ್ಗಸೂಚಿ ಪ್ರಕಾರ ಊಟೋಪಹಾರ ಮತ್ತು ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ.

768 ಬೆಡ್‌ಗಳು ಹತ್ತು ಕೋವಿಡ್ ಕೇರ್ ಸೆಂಟರ್ ನಲ್ಲಿ ಲಭ್ಯವಿವೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಇನ್ನೂ ಹೆಚ್ಚಿನ ಬೆಡ್ ಕಲ್ಪಿಸುವ ಅವಕಾಶ ಇದೆ’ ಎಂದು ಹೇಳಿದರು.

ಕೆ.ಎಲ್.ಇ ಆಸ್ಪತ್ರೆಯಲ್ಲೂ ಲಭ್ಯ

ಬೆಳಗಾವಿ ನಗರದ ಇ.ಎಸ್.ಐ. ಆಸ್ಪತ್ರೆಯಲ್ಲಿ 25 ಬೆಡ್ ಸಜ್ಜುಗೊಳಿಸಲಾಗಿದ್ದು, ಕೆ.ಎಲ್.ಇ ಆಸ್ಪತ್ರೆಯಲ್ಲಿಯೂ 65 ಬೆಡ್ ವ್ಯವಸ್ಥೆ ಮಾಡಲಾಗಿದೆ. ಇನ್ನೂ 30 ಬೆಡ್ ಕಲ್ಪಿಸಲು ಕೋರಲಾಗಿದೆ ಎಂದು ಅವರು ವಿವರಿಸಿದರು.

‘ಕೋವಿಡ್ ಹೊರತುಪಡಿಸಿ ಇತರೆ ರೋಗಿಗಳನ್ನು ಸರ್ಕಾರದ ವಿವಿಧ ಯೋಜನೆಗಳಡಿ ಸಹಭಾಗಿತ್ವ ಹೊಂದಿರುವ ಖಾಸಗಿ ಆಸ್ಪತ್ರೆಗಳಿಗೆ ಕಳಿಸಲಾಗುವುದು. ಖಾಸಗಿ ಆಸ್ಪತ್ರೆಯವರು ಕೂಡ ಇತರೆ ರೋಗಿಗಳ ಚಿಕಿತ್ಸೆಗೆ ಮುಂದಾಗಿದ್ದಾರೆ. ಕೆಲ ಸಣ್ಣ ಆಸ್ಪತ್ರೆಯ ವೈದ್ಯರು ಸರ್ಕಾರಿ ಅಥವಾ ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಆಸಕ್ತಿ ತೋರಿಸಿದ್ದಾರೆ. ಅವರ ಪಟ್ಟಿ ತಯಾರಿಸಿ ಅವರ ಸೇವೆಯನ್ನು ಬಳಸಿಕೊಳ್ಳಲಾಗುವುದು’ ಎಂದು ಹೇಳಿದರು.

ತನಿಖೆಗೆ ಆದೇಶ

‘ಜಿಲ್ಲಾ ಆಸ್ಪತ್ರೆಯಲ್ಲಿ ವೃದ್ಧ ಮೃತಪಟ್ಟಿರುವ ಬಗ್ಗೆ ತನಿಖೆ ಕೈಗೊಳ್ಳಲು ಆದೇಶಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಅಥಣಿಯಲ್ಲಿ ನೆರೆಮನೆಯವರ ಮೇಲಿನ ಸಿಟ್ಟಿನಿಂದಾಗಿ ಮೃತ ವ್ಯಕ್ತಿಯನ್ನು ತಳ್ಳುಗಾಡಿಯಲ್ಲಿ ಸಾಗಿಸಿದ್ದಾರೆ. ಆ ವ್ಯಕ್ತಿ ಕೋವಿಡ್‌ನಿಂದ ಸಾವನ್ನಪ್ಪಿಲ್ಲ. ಕುಟುಂಬಕ್ಕೆ ಶವ ಹಸ್ತಾಂತರ ಅಥವಾ ಶವಸಂಸ್ಕಾರ ವಿಷಯದಲ್ಲಿ ಹೆಚ್ಚಿನ ಜಾಗರೂಕತೆ ವಹಿಸಲಾಗಿದೆ. ಯಾವುದೇ ರೀತಿಯ ಲೋಪವಾಗದಂತೆ ಎಲ್ಲ ರೀತಿಯ ಎಚ್ಚರಿಕೆ ವಹಿಸಲಾಗುವುದು’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಕ್ಕಾರ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.