ADVERTISEMENT

ಈಶ್ವರಪ್ಪ ಪ್ರಕರಣದಲ್ಲೂ 'ಮಹಾನಾಯಕನ' ಕೈವಾಡ: ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 10:53 IST
Last Updated 14 ಏಪ್ರಿಲ್ 2022, 10:53 IST
 ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ‘ಸಿ.ಡಿ. ಪ್ರಕರಣದಲ್ಲಿ ನನ್ನ ವಿರುದ್ಧದ ಷಡ್ಯಂತ್ರದಲ್ಲಿ ಭಾಗಿಯಾಗಿದ್ದ ತಂಡವೇ ಈಗ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧವೂ ಕೆಲಸ ಮಾಡಿದೆ. ಹೀಗಾಗಿ, ಅವರು ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬಾರದು’ ಎಂದು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಸಚಿವ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ, ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ ಅವರ ಕುಟುಂಬದವರಿಗೆ ತಾಲ್ಲೂಕಿನ ಬಡಸ ಕೆ.ಎಚ್. ಗ್ರಾಮದಲ್ಲಿ ಸಾಂತ್ವನ ಹೇಳಿ, ಸಮಾಧಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಗುರುವಾರ ಮಾತನಾಡಿದರು.

‘ಹೈಕಮಾಂಡ್‌ ಅನುಮತಿ ಪಡೆದು ಸೋಮವಾರ (ಏ.18) ಪತ್ರಿಕಾಗೋಷ್ಠಿ ನಡೆಸಿ ಸಂಪೂರ್ಣ ವಿವರ ನೀಡಲಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ತನಿಖೆ ನಡೆಯಲಿ, ಈಶ್ವರಪ್ಪ ಅವರ ತಪ್ಪಿದ್ದರೆ ಬೇಕಾದ ಶಿಕ್ಷೆಯಾಗಲಿ. ಅಲ್ಲಿವರೆಗೆ ರಾಜೀನಾಮೆ ಕೊಡಬಾರದು. ನಾನು ಷಡ್ಯಂತ್ರಕ್ಕೆ ಸಿಲುಕಿ ವರ್ಷದಿಂದ ನೊಂದಿದ್ದೇನೆ. ಆ ಸ್ಥಿತಿ ಈಶ್ವರಪ್ಪ ಅವರಿಗೆ ಬರಬಾರದು’ ಎಂದರು.

‘ಈ ಪ್ರಕರಣದಲ್ಲಿ ಏನಾಗಿದೆ ಎನ್ನುವುದು ನನಗೆ ಸಂಪೂರ್ಣ ಗೊತ್ತಿದೆ. ನಾನು ಉಸ್ತುವಾರಿ ಸಚಿವ ಆಗಿದ್ದಾಗಿನಿಂದಲೂ ನೋಡಿದ್ದೇನೆ. ಈ ಪ್ರಕರಣದಲ್ಲಿ ರಾಜಕಾರಣ ಮಾಡಲಾಗುತ್ತಿದೆ. ನಿಜವಾದ ಸಂಗತಿಯನ್ನು ಶೀಘ್ರವೇ ಬಹಿರಂಗಪಡಿಸುತ್ತೇನೆ’ ಎಂದು ಹೇಳಿದರು.

‘ಸಾಯುವಂತಹ ಕಾರಣ ಇರಲಿಲ್ಲ. ಅವರು ಕೆಲ ದಿನಗಳ ಹಿಂದೆಯಷ್ಟೆ ಹಿಂಡಲಗಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ ಮನ್ನೋಳಕರ ಅವರಿಗೆ ಕರೆ ಮಾಡಿ, ಶೀಘ್ರದಲ್ಲೇ ರಮೇಶ ಜಾರಕಿಹೊಳಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವರಾಗಲಿದ್ದಾರೆ. ಆಗ ನನ್ನೆಲ್ಲ ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಿಕೊಂಡಿದ್ದ. ಹೀಗಿರುವಾಗ ಅವನೇಕೆ ಸಾಯುತ್ತಾನೆ?’ ಎಂದು ಕೇಳಿದರು. ಕರೆ ಮಾಡಿದ್ದನ್ನು ಪಕ್ಕದಲ್ಲೇ ಇದ್ದ ನಾಗೇಶ ಒಪ್ಪಿಕೊಂಡರು.

‘ಈ ಪ್ರಕರಣ ಹಾಗೂ ನನ್ನ ವಿರುದ್ಧದ ಸಿ.ಡಿ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಇದರಲ್ಲಿರುವ ಮಹಾನಾಯಕ ಯಾರು ಎನ್ನುವುದು ಹೊರಗೆ ಬರುತ್ತದೆ. ಈಗ ಯಾರ ಹೆಸರನ್ನೂ ಹೇಳುವುದಕ್ಕೆ ಬಯಸುವುದಿಲ್ಲ’ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಆರೋಪಿಸಿದರು.

‘ಸಂತೋಷ್ ಹಳೆಯ ಕಾರ್ಯಕರ್ತ. ನಾನು ಕಾಂಗ್ರೆಸ್‌ನಲ್ಲಿದ್ದಾಗಿನಿಂದಲೂ ನನ್ನೊಂದಿಗೆ ಇದ್ದ ಮನುಷ್ಯ. ನಾನು ಬಿಜೆಪಿಗೆ ಬಂದ ಮೇಲೂ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಪತ್ನಿ ಜಯಶ್ರೀ ನನ್ನ ಸಹೋದರಿ ಇದ್ದಂತೆ. ಅವರು ಮಗುವನ್ನು ಬೆಳೆಸಬೇಕಿದ್ದು, ಅದಕ್ಕಾಗಿ ಸರ್ಕಾರ ಹಾಗೂ ವೈಯಕ್ತಿಕವಾಗಿ ಸಹಾಯ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.