ADVERTISEMENT

ಬೆಳಗಾವಿ | 'ಪತ್ರಿಕಾ ಭವನಕ್ಕೆ ₹9.9 ಕೋಟಿ ಅನುದಾನ' : ಸತೀಶ ಜಾರಕಿಹೊಳಿ

ಬೆಳಗಾವಿ ಪತ್ರಕರ್ತರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸನ್ಮಾನ; ಚಳಿಗಾಲದ ಅಧಿವೇಶನ ವೇಳೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 4:58 IST
Last Updated 26 ನವೆಂಬರ್ 2025, 4:58 IST
ಪತ್ರಿಕಾ ಭವನಕ್ಕೆ ಅನುದಾನ ಮಂಜೂರು ಮಾಡಿದ ಸಚಿವ ಸತೀಶ ಜಾರಕಿಹೊಳಿ ಅವರನ್ನು ಬೆಳಗಾವಿಯ ಪತ್ರಕರ್ತರು ಮಂಗಳವಾರ ಸನ್ಮಾನಿಸಿದರು  ಪ್ರಜಾವಾಣಿ ಚಿತ್ರ
ಪತ್ರಿಕಾ ಭವನಕ್ಕೆ ಅನುದಾನ ಮಂಜೂರು ಮಾಡಿದ ಸಚಿವ ಸತೀಶ ಜಾರಕಿಹೊಳಿ ಅವರನ್ನು ಬೆಳಗಾವಿಯ ಪತ್ರಕರ್ತರು ಮಂಗಳವಾರ ಸನ್ಮಾನಿಸಿದರು  ಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಬಹುದಿನಗಳ ಬೇಡಿಕೆಯಂತೆ ಬೆಳಗಾವಿ ನಗರದಲ್ಲಿ ಸುಸಜ್ಜಿತ ಪತ್ರಿಕಾಭವನ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ₹9.9 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಮುಂದಿನ ಚಳಿಗಾಲ ಅಧಿವೇಶನದ ವೇಳೆಗೆ ಭವನನ್ನು ಲೋಕಾರ್ಪಣೆ ಮಾಡಲಾಗುವುದು’ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ನಗರದ ವಾರ್ತಾ ಭವನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಪತ್ರಕರ್ತರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಪತ್ರಿಕಾಭವನ ನಿರ್ಮಾಣಕ್ಕೆ ದಶಕಗಳಿಂದ ಪ್ರಯತ್ನ ನಡೆದರೂ ಸಾಧ್ಯವಾಗಿರಲಿಲ್ಲ. ಈಗ ನಮ್ಮ ಅಧಿಕಾರದ ಅವಧಿಯಲ್ಲಿ ಪತ್ರಿಕಾ ಭವನ ಮಂಜೂರು ಆಗಿರುವುದು ಸಂತಸದ ವಿಷಯವಾಗಿದೆ. ರಾಯಬಾಗ, ಗೋಕಾಕ ಸೇರಿದಂತೆ ಇತರೆ ತಾಲ್ಲೂಕುಗಳಲ್ಲಿ ವಕೀಲರ ಸಂಘದ ಕಟ್ಟಡ ನಿರ್ಮಾಣಕ್ಕೆ ₹10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಲೋಳಸೂರು, ಖಾನಾಪುರ ಸೇತುವೆ ಸೇರಿದಂತೆ ರಾಜ್ಯದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸೇತುವೆ ನಿರ್ಮಾಣಕ್ಕಾಗಿ ಕ್ರಮ ವಹಿಸಲಾಗಿದೆ’ ಎಂದರು.

ADVERTISEMENT

ಇದಕ್ಕೂ ಮುನ್ನ ಅಭಿನಂದನೆ ಸಲ್ಲಿಸಿ ಮಾತನಾಡಿದ ಹಿರಿಯ ಪತ್ರಕರ್ತರಾದ ರಿಷಿಕೇಶ ಬಹಾದ್ದೂರ್ ದೇಸಾಯಿ, ‘ಪತ್ರಕರ್ತರು ಪತ್ರಿಕಾ ಭವನ ಸದ್ಬಳಕೆ ಮಾಡಿಕೊಂಡು ಒಗ್ಗಟ್ಟಿನಿಂದ ಮುನ್ನಡೆಯಬೇಕು. ಭವಿಷ್ಯದಲ್ಲಿ ಬರುವ ತಂತ್ರಜ್ಞಾನ ಕೌಶಲಗಳನ್ನು ಬೆಳಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ, ‘ಎಲ್ಲ ಮಾಧ್ಯಮ ಪ್ರತಿನಿಧಿಗಳ ಒಕ್ಕೊರಲಿನ ಮನವಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಸತೀಶ ಜಾರಕಿಹೊಳಿ, ತಮ್ಮ ಲೋಕೋಪಯೋಗಿ ಇಲಾಖೆಯ ವತಿಯಿಂದ ಅನುಮೋದನೆ ನೀಡಿದ್ದು ಪ್ರಶಂಸಾರ್ಹ’ ಎಂದರು.

ವಿವಿಧ ಪತ್ರಿಕೆಗಳ ಸಂಪಾದಕರು, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ವರದಿಗಾರರು, ಛಾಯಾಗ್ರಾಹಕರು ಹಾಗೂ ವಾರ್ತಾ ಇಲಾಖೆಯ ಸಿಬ್ಬಂದಿ ಇದ್ದರು.

ರಾಜ್ಯದ ಸೇತುವೆಗಳ ನಿರ್ಮಾಣಕ್ಕೆ ₹2000 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇಲಾಖೆಗೆ ನೀಡಿದ ಅನುದಾನದಲ್ಲಿ ಕೆಲಸ ಮಾಡಲಾಗುತ್ತಿದೆ ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.