ADVERTISEMENT

ಶಹಾಪುರದ ಸರ್ಕಾರಿ ಶಾಲೆ ಶತಮಾನೋತ್ಸವಕ್ಕೆ ಸೈಕಲ್‌ನಲ್ಲಿ ಬಂದ ಹಳೇ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 11:48 IST
Last Updated 27 ಡಿಸೆಂಬರ್ 2025, 11:48 IST
<div class="paragraphs"><p>ಹಳೇ ವಿದ್ಯಾರ್ಥಿಯೂ ಆಗಿರುವ ಶಾಸಕ ಅಭಯ ಪಾಟೀಲ(ಬಲಬದಿ ಇರುವವರು) ತಮ್ಮ ಸ್ನೇಹಿತರೊಂದಿಗೆ ಸೈಕಲ್‌ ತುಳಿಯತ್ತ, ಬೆಳಗಾವಿಯ ಸರ್ಕಾರಿ ಚಿಂತಾಮಣರಾವ್‌ ಪ್ರೌಢಶಾಲೆಗೆ ಶನಿವಾರ ತೆರಳಿದರು</p></div>

ಹಳೇ ವಿದ್ಯಾರ್ಥಿಯೂ ಆಗಿರುವ ಶಾಸಕ ಅಭಯ ಪಾಟೀಲ(ಬಲಬದಿ ಇರುವವರು) ತಮ್ಮ ಸ್ನೇಹಿತರೊಂದಿಗೆ ಸೈಕಲ್‌ ತುಳಿಯತ್ತ, ಬೆಳಗಾವಿಯ ಸರ್ಕಾರಿ ಚಿಂತಾಮಣರಾವ್‌ ಪ್ರೌಢಶಾಲೆಗೆ ಶನಿವಾರ ತೆರಳಿದರು

   

ಪ್ರಜಾವಾಣಿ ಚಿತ್ರ

ಬೆಳಗಾವಿ: ಅಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ವಿವಿಧ ಉದ್ಯೋಗಗಳಲ್ಲಿ ಇರುವ ಗೆಳೆಯರೆಲ್ಲ ಶಾಲಾ ಸಮವಸ್ತ್ರ ಧರಿಸಿ, ಸೈಕಲ್‌ ಪೆಡಲ್‌ ತುಳಿಯುತ್ತ ಸಂಭ್ರಮದಿಂದ ಶಾಲೆ ಆವರಣ ಪ್ರವೇಶಿಸಿದರು. ಬಾಲ್ಯದಲ್ಲಿ ತಾವು ಓದಿದ ತರಗತಿ ಕೊಠಡಿಯಲ್ಲಿ ಕುಳಿತು ಪಾಠ ಕೇಳಿದರು. ಹಾಸ್ಯಚಟಾಕಿಗಳನ್ನು ಹಾರಿಸಿದರು. ಕೀಟಲೆಗಳನ್ನೂ ಮಾಡಿ ನಕ್ಕುನಲಿದರು!

ADVERTISEMENT

ಇವೆಲ್ಲ ದೃಶ್ಯ ಕಂಡುಬಂದಿದ್ದು ಇಲ್ಲಿನ ಶಹಾಪುರದ ಸರ್ಕಾರಿ ಚಿಂತಾಮಣರಾವ್‌ ಪ್ರೌಢಶಾಲೆಯಲ್ಲಿ.

ಈ ಶಾಲೆಯಲ್ಲಿ ಎರಡು ದಿನ ನಡೆಯಲಿರುವ ಶತಮಾನೋತ್ಸವ ಸಮಾರಂಭಕ್ಕೆ ಶನಿವಾರ ವಿಧ್ಯುಕ್ತವಾಗಿ ಚಾಲನೆ ಸಿಕ್ಕಿತು. ಇದೇ ಶಾಲೆ ಹಳೇ ವಿದ್ಯಾರ್ಥಿಯೂ ಆಗಿರುವ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆದವು. ಪ್ರಾರ್ಥನೆ ನಂತರ ಇಡೀದಿನ ಬ್ಯಾಚ್‌ವಾರು ತರಗತಿ ನಡೆದವು.

ಭಾರತ ಮಾತ್ರವಲ್ಲದೆ; ವಿದೇಶದಲ್ಲೂ ನೆಲೆಸಿರುವ ಸ್ನೇಹಿತರೆಲ್ಲ ದಶಕಗಳ ನಂತರ ಒಂದೇ ಕಡೆ ಸೇರಿ, ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. 1985ರ ಬ್ಯಾಚ್‌ನ ಹಳೇ ವಿದ್ಯಾರ್ಥಿಗಳಿಗಾಗಿ ವಿಶೇಷ ತರಗತಿ ನಡೆಯಿತು.

ನಿವೃತ್ತ ಶಿಕ್ಷಕಿ ನೀಲಗಂಗಾ ಚರಂತಿಮಠ ತರಗತಿ ಪ್ರವೇಶಿಸಿದ ನಂತರ ಹಾಜರಾತಿ ತೆಗೆದುಕೊಂಡು, ಇಳಿ ವಯಸ್ಸಿನಲ್ಲೂ ಉತ್ಸಾಹದಿಂದ ಮಾಡಿದರು. ತರಗತಿಗೆ ತಡವಾಗಿ ಹಾಜರಾದವರ ವಿರುದ್ಧ ಗದರಿದರು!

‘ನಾನು ಇದೇ ಶಾಲೆಯ 1985ನೇ ಬ್ಯಾಚ್‌ನ ವಿದ್ಯಾರ್ಥಿ. ನಾನು ಕಲಿತ ಸರ್ಕಾರಿ ಶತಮಾನೋತ್ಸವ ವಿಶಿಷ್ಟವಾಗಿ ಆಚರಿಸಬೇಕೆಂಬ ಬಯಕೆ ಇತ್ತು. ಹಾಗಾಗಿ ಸ್ನೇಹಿತರೆಲ್ಲ ಸೇರಿಕೊಂಡು, ಎರಡೂ ದಿನ ವಿಶಿಷ್ಟ ಕಾರ್ಯಕ್ರಮದೊಂದಿಗೆ ಆಚರಿಸುತ್ತಿದ್ದೇವೆ’ ಎಂದು ಅಭಯ ಪಾಟೀಲ ಸುದ್ದಿಗಾರರಿಗೆ ತಿಳಿಸಿದರು.

‘ಬಾಲ್ಯದಲ್ಲಿ ಮನೆಯಿಂದ ಶಾಲೆಗೆ ಬರುತ್ತಿದ್ದ ಮಾರ್ಗದಲ್ಲೇ ಸೈಕಲ್‌ ಓಡಿಸುತ್ತ ಬಂದೆವು. ಚಿಕ್ಕವರಿದ್ದಾಗ ಹೋಗುತ್ತಿದ್ದ ಅಂಗಡಿಯಲ್ಲೇ ಹಳೇ ನಾಣ್ಯ ನೋಡಿ, ಚಾಕೋಲೇಟ್‌, ಪೇಪರ್‌ಮೆಂಟ್‌ ಖರೀದಿಸಿದೆವು. ರಾಜಕೀಯದಲ್ಲಿ ನಾವು ಎಷ್ಟೇ ಎತ್ತರಕ್ಕೆ ಹೋದರೂ, ಬಾಲ್ಯದ ನೆನಪುಗಳನ್ನು ಮರೆಯಲಾಗದು’ ಎನ್ನುತ್ತ ಭಾವುಕರಾದರು.

‘ಬಹಳ ವರ್ಷಗಳ ನಂತರ ಸ್ನೇಹಿತರೆಲ್ಲ ಸೇರಿದ್ದು ಖುಷಿ ತಂದಿದೆ. ಶಾಲೆಯಲ್ಲಿ ಇಡೀ ದಿನ ನಲಿದಿದ್ದನ್ನು ನೋಡಿದರೆ, ನಮಗೆ ಮತ್ತೆ ಬಾಲ್ಯ ಸಿಕ್ಕಂತಾಗಿದೆ’ ಎಂದು ಜರ್ಮನಿಯಿಂದ ಬಂದಿರುವ ಹಳೇ ವಿದ್ಯಾರ್ಥಿ ಚಂದ್ರಶೇಖರ ಹಿರೇಮಠ ಸಂತಸ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.